ಮೈಸೂರು

ಬಾಂಗ್ಲಾದಲ್ಲಿ ನಡೆದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ದಂಡಿನ ಮೆರವಣಿಗೆ

ಮೈಸೂರು, ಅ.28:-  ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿಕೆಎಸ್ ಫೌಂಡೇಶನ್ ವತಿಯಿಂದ ಇಂದು  ವಿವೇಕಾನಂದ ವೃತ್ತದ ವಿವೇಕಾನಂದ ಪ್ರತಿಮೆ ಬಳಿ ದಂಡಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಯುವಮುಖಂಡ ವಿಕಾಸ್ ಶಾಸ್ತ್ರಿ ಮಾತನಾಡಿ ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿಮೀರುತ್ತಿದ್ದರೂ ಜಾಗತಿಕವಾಗಿ ವಿಶ್ವಸಂಸ್ಥೆ ಹಾಗೂ ಇನ್ನಾವುದೇ ಮಾನವ ಹಕ್ಕುಗಳ ಸಂಸ್ಥೆಗಳು ಧನಿಯೆತ್ತದೇ ಜಾಣ ಕಿವುಡು ಪ್ರದರ್ಶಿಸುತ್ತಿವೆ. ಎಲ್ಲಾ ಹಿಂದೂಪರ ಸಂಸ್ಥೆಗಳು ಒಗ್ಗೂಡಿ ಹಿಂದೂಗಳ ಮೇಲಿನ ಹೊರದೇಶಗಳ ಅದರಲ್ಲೂ ತಾಲಿಬಾನಿಗಳ ಮನಸ್ಥಿತಿಯ ಉಗ್ರರು ನಡೆಸುತ್ತಿರುವ ದೌರ್ಜನ್ಯದ ಹುಟ್ಟಡಗಿಸಲು ಇಲ್ಲಿಂದಲೇ ಸಂದೇಶ ಕಳುಹಿಸಲು ಈ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.  ಈ ಮೂಲಕ ಭಾರತಾಂಬೆಯ ಮಕ್ಕಳಾದ ಹಿಂದೂಗಳಿಗೆ ನ್ಯಾಯ ದೊರಕಿಸಬೇಕೆಂದು ಮನವಿ ಮಾಡಿದರು.

“ಹಿಂದೂಗಳ ಮೇಲೆ ಪ್ರತಿದಿನ ನಡೆಯುತ್ತಿರುವ ದೌರ್ಜನ್ಯವನ್ನು ನೋಡುತ್ತ ಬಂದಿದ್ದೇವೆ. ಈ ರೀತಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಹಿಂದೂ ವಿರೋಧಿ ಚಟುವಟಿಕೆಗಳನ್ನು ಈ ತಕ್ಷಣ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಕೊಲೆಗೆ ಅಲ್ಲಿನ ಮಾನವ ಹಕ್ಕುಗಳ ಆಯೋಗಗಳು ಏನು ಮಾಡುತ್ತಿವೆ ಅಲ್ಲಿನ ಸಂವಿಧಾನವನ್ನು ಹಗಲು ಕೊಲೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಹಿಮಾಲಯ ಫೌಂಡೇಶನ್ ಅಧ್ಯಕ್ಷ ಎನ್. ಅನಂತ ಅವರು ಮಾತನಾಡಿ ಬಾಂಗ್ಲಾದೇಶದಲ್ಲಿ ಉಗ್ರಗಾಮಿಗಳಿಂದ ಸಂಭವಿಸುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಕ್ರಮ ಕೈಗೊಳ್ಳಲೇಬೇಕು.   ಪ್ರಧಾನಿಗಳು ಸೂಕ್ತ ಕ್ರಮ ಕೈಗೊಂಡು ಇಂತಹ ದುಷ್ಕೃತ್ಯಗಳಿಗೆ ಅಂತ್ಯ ಹಾಡಬೇಕು. ಪ್ರತಿಯೊಬ್ಬ ಭಾರತೀಯರು ಈ ಘಟನೆಯನ್ನು ಖಂಡಿಸಿ ಧ್ವನಿಯೆತ್ತಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ  ಪದಾಧಿಕಾರಿಗಳಾದ ಅನಂತು, ಪ್ರದೀಪ್, ತೇಜಸ್, ಗಗನ್, ರಾಮ್ ಆರ್ ಗೌಡ, ವಿನಯ್, ಮುನ್ನ, ಚೇತನ್, ನವೀನ್,  ಅಭಿಷೇಕ್, ಮನು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: