ಮೈಸೂರು

ಸಣ್ಣ ವಯಸ್ಸಿನ ಮಹಿಳೆಯರಲ್ಲೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ : ಡಾ ವೈ.ಎಸ್. ಮಾಧವಿ

ಮೈಸೂರು,ಅ.29:-  ಸ್ತನ ಕ್ಯಾನ್ಸರ್ ಈಗ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ಕ್ಯಾನ್ಸರ್ ಆಗಿದ್ದು, ಮುಂಬರುವ ದಶಕದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ವಯೋಮಾನದ ಮಹಿಳೆಯರಲ್ಲಿ ಇಂದು ಸ್ತನ ಕ್ಯಾನ್ಸರ್ ಕಂಡು ಬರುತ್ತಿದ್ದು, ಇದೀಗ  ಮಧ್ಯಮ‌ ವಯಸ್ಸಿನ ಯುವತಿಯರು ಈ ಗುಂಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಬಗ್ಗೆ ಎಚ್ಚರಿಕೆ ಮೂಡಿಸುವ ಅಗತ್ಯವಿದೆ ಎಂದು ಎಚ್‌ಸಿಜಿ ಭಾರತ್ ಆಸ್ಪತ್ರೆ ಮತ್ತು ಇನ್‌ಸ್ಟಿಟ್ಯೂಟ್ ಆ.ಫ್ ಆಂಕೊಲಾಜಿಯ ಹಿರಿಯ ವಿಕಿರಣ ಆಂಕೊಲಾಜಿಸ್ಟ್ ಡಾ ವೈ.ಎಸ್. ಮಾಧವಿ ತಿಳಿಸಿದರು.

ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ತನ ಕ್ಯಾನ್ಸರ್ ಮುಖ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಕಾಯಿಲೆಯಾಗಿದ್ದರೂ ಇದನ್ನು ನಾವು ಪುರುಷರಲ್ಲಿಯೂ ಕಾಣಬಹುದು. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬಗ್ಗೆ ಶಿಕ್ಷಣ ಹಾಗೂ ಮಾಹಿತಿ ನೀಡುವುದು ತುಂಬಾ ಮುಖ್ಯವಾಗುತ್ತದೆ ಎಂದರು.

ಸಾಮಾನ್ಯವಾಗಿ ನಮ್ಮ ಜನಸಂಖ್ಯೆಯಲ್ಲಿ ಸ್ತನ ಕ್ಯಾನ್ಸರ್ ಅಂಶಗಳನ್ನು ಮುಖ್ಯವಾಗಿ 3 ವರ್ಗಗಳಾಗಿ ವಿಂಗಡಿಸಬಹುದು. 11 ವರ್ಷಕ್ಕೆ ಮೊದಲೇ ಋತುಮತಿಯಾದವರಲ್ಲಿ,  55 ವರ್ಷ ಮೇಲ್ಪಟ್ಟರೂ ಮುಟ್ಟು ನಿಲ್ಲದವರಲ್ಲಿ, ಮಕ್ಕಳು ಇಲ್ಲದವರು ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿಗೆ ಒಳಗಾದವರು, 35 ವರ್ಷದ ನಂತರ ಮೊದಲ ಮಗು ಪಡೆದವರಲ್ಲಿ ಸ್ತನ ಕ್ಯಾನ್ಸರ್ ನ ರಿಸ್ಕ್ ಸ್ವಲ್ಪ ಹೆಚ್ಚಾಗಿರುತ್ತದೆ. ಇದರೊಂದಿಗೆ ಮದ್ಯಪಾನ ಸೇವನೆ, ಸ್ಥೂಲಕಾಯತೆ ಮತ್ತು ಪ್ರೌಢಾವಸ್ಥೆಯಲ್ಲಿ ತೂಕ ಹೆಚ್ಚಾಗುವವರಲ್ಲಿಯೂ ಸ್ತನ ಕ್ಯಾನ್ಸರ್ ಹೆಚ್ಚಿನ ಮಟ್ಟದಲ್ಲಿ ಬಾಧಿಸಲಿದೆ. ಸ್ತನದಲ್ಲೇ ಎಷ್ಟೊಂದು ಗಂಟುಗಳಿರುತ್ತದೆ.ಅದರಲ್ಲಿ ಎಲ್ಲವೂ ಕ್ಯಾನ್ಸರ್ ಗಂಟುಗಳಾಗಿರುವುದಿಲ್ಲ. ಕೆಲವು ಸೌಮ್ಯ ಗಂಟುಗಳು ಇರುತ್ತವೆ. ಯಾವ ಗಂಟು ಸ್ತನ ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುತ್ತದೆ ಎಂಬುದು ಎಫ್ ಎನ್ ಎಸಿ ಮತ್ತು ಬಯಾಪ್ಸಿಯಿಂದ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದರು.

ಮೇಲಿನ ಕೆಲವು ಅಂಶಗಳನ್ನು ಬದಲಾಯಿಸಲಾಗುವುದಿಲ್ಲ. ಆದರೆ ಕೆಲವು ನಮ್ಮ ನಿಯಂತ್ರಣದಲ್ಲಿರುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ ಹದಿಹರೆಯ ಮತ್ತು ಪ್ರೌಢಾವಸ್ಥೆಯಿಂದಲೇ ಉತ್ತಮ ಆರೋಗ್ಯಕರ ಆಹಾರ ಪದ್ಧತಿಗಳನ್ನು ಅನುಸರಿಸಬೇಕು. ನಾವು ಸೇವಿಸುವ ಆಹಾರದಲ್ಲಿ ಸ್ಥಳೀಯವಾಗಿ  ಲಭ್ಯವಿರುವ ಹಣ್ಣುಗಳು, ತರಕಾರಿಗಳು ಮತ್ತು ಗ್ರೀನ್ಸ್ ಇರಬೇಕು. (ದನದ ಮಾಂಸ, ಹಂದಿಮಾಂಸ, ಮಟನ್ ಅನ್ನು ಬಹಳ ಕಡಿಮೆ ಬಳಸಬೇಕು). ದೈನಂದಿನ ದೈಹಿಕ ವ್ಯಾಯಾಮವು ಉತ್ತಮ ಆರೋಗ್ಯಕ್ಕೆ ಒಂದು ಮಂತ್ರವಾಗಿದೆ. ತಂಬಾಕು, ಮದ್ಯಪಾನವನ್ನು ತಪ್ಪಿಸುವ ಉತ್ತಮ ಜೀವನಶೈಲಿ ರೂಢಿಸಿಕೊಂಡರೆ ಸ್ತನ ಕ್ಯಾನ್ಸರ್ ಕಡಿಮೆ ಮಾಡಬಹುದಾಗಿದೆ ಎಂದರು.

ಸರಿಯಾದ ಸ್ಕ್ರೀನಿಂಗ್ ಮತ್ತು ತಡೆಗಟ್ಟುವ ಕ್ರಮಗಳ ಮೂಲಕ ನಾವು ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಮೂಲಕ ಉತ್ತಮ ಆರೋಗ್ಯದ ಜೊತೆಗೆ ಜೀವವನ್ನು ಉಳಿಸಿಕೊಳ್ಳಬಹುದು.  ಕಾಲಕಾಲಕ್ಕೆ ಸ್ಕ್ರೀನಿಂಗ್ ಮಾರ್ಗದರ್ಶನವನ್ನು (ಕ್ಲಿನಿಕಲ್‌ನಲ್ಲಿ ಸ್ತನ ಪರೀಕ್ಷೆ, ಮ್ಯಾಮೊಗ್ರಫಿ, ಅಲ್ಟ್ರಾಸೌಂಡ್, MRI ಇತ್ಯಾದಿ) ವೈದ್ಯರಿಂದ ತೆಗೆದುಕೊಳ್ಳಬೇಕು. ಸ್ತನ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹೆಚ್ಚಿ ಪರಿಣಾಮಕಾರಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ಅಲ್ಲದೆ, ಸ್ತನ ಕ್ಯಾನ್ಸರ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ.ಎಂ.ವಿಜಯ್ ಕುಮಾರ್ ಮಾತನಾಡಿ, “ಹೊಸ ತಂತ್ರಜ್ಞಾನಗಳು ಮತ್ತು ವಿಜ್ಞಾನವು ವೇಗವಾಗಿ ಬೆಳೆಯುತ್ತಿರುವುದರಿಂದ ಇಂದು, ಕ್ಯಾನ್ಸರ್ ಆರೈಕೆ ಮತ್ತು ಚಿಕಿತ್ಸೆಯು ಸುಲಭ ಮತ್ತು ಪರಿಣಾಮಕಾರಿಯಾಗುತ್ತಿದೆ. ಆದರೆ ಆರಂಭಿಕ ಪತ್ತೆ ಮತ್ತು ಸರಿಯಾದ ಚಿಕಿತ್ಸೆಯು ಕ್ಯಾನ್ಸರ್ ಅನ್ನು ಗುಣಪಡಿಸಲು ಪ್ರಮುಖ ಅಸ್ತ್ರವಾಗಿದೆ. ಹೆಚ್ಚಿನ ಸ್ತನ ಕ್ಯಾನ್ಸರ್ ಅನ್ನು ಸ್ತನವನ್ನು ತೆಗೆದುಹಾಕದೆಯೇ ಸುರಕ್ಷಿತವಾಗಿ ಚಿಕಿತ್ಸೆ ನೀಡಬಹುದು. ಇದನ್ನು ಸ್ತನ ಸಂರಕ್ಷಣಾ ಶಸ್ತ್ರಚಿಕಿತ್ಸೆ ಎಂಬ ವಿಧಾನದ ಮೂಲಕ ಮಾಡಬಹುದು. ಸಂಪೂರ್ಣ ಸ್ತನವನ್ನು ತೆಗೆದುಹಾಕುವ ಅಗತ್ಯವಿರುವ ರೋಗಿಗಳಲ್ಲಿ, ನಾವು ರೋಗಪೀಡಿತ ಸ್ತನವನ್ನು ಹೊಸ ಸ್ತನದ ಪುನರ್ನಿರ್ಮಾಣದೊಂದಿಗೆ ಬದಲಾಯಿಸುತ್ತೇವೆ. ಹಾಗಾಗಿ ಪ್ರಸ್ತುತ ದಿನದಲ್ಲಿ ಮಹಿಳೆ ತನ್ನ ಕ್ಯಾನ್ಸರ್ ಚಿಕಿತ್ಸೆಗಾಗಿ ತನ್ನ ಸ್ತನವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಭರವಸೆ ನೀಡಿದರು.

HCG BHIO ನ ಮುಖ್ಯ ವಿಕಿರಣ ಆಂಕೊಲಾಜಿಸ್ಟ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ ಮಾತನಾಡಿ, “ತಿಂಗಳ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮದ ಅಂಗವಾಗಿ, HCG ಭಾರತ್ ಆಸ್ಪತ್ರೆ ಮತ್ತು ಆಂಕೊಲಾಜಿ ಸಂಸ್ಥೆಯು ನಗರದಾದ್ಯಂತ ಪ್ರಮುಖ ಉದ್ಯಾನಗಳಲ್ಲಿ ಶಿಬಿರ, ಉಚಿತ ಸ್ಕ್ರೀನಿಂಗ್ ಪರೀಕ್ಷೆ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಮ್ಯಾಮೊಗ್ರಫಿ ಪರೀಕ್ಷೆಯಲ್ಲೂ ರಿಯಾಯಿತಿ ಒದಗಿಸುತ್ತಿದೆ. ಇದಲ್ಲದೆ ನಾವು ಒಡಿಪಿ ಮತ್ತು ಕುಟುಂಬ ಯೋಜನಾ ಕಚೇರಿ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಸ್ತನ ಕ್ಯಾನ್ಸರ್ ಕುರಿತು ಉಪನ್ಯಾಸವನ್ನು ಆಯೋಜಿಸಿದ್ದೇವೆ ಎಂದರು. ನಿರ್ಮಲಾ ಕೃಷ್ಣ ಮೂರ್ತಿ, ಸಿಒಒ ಉಪಸ್ಥಿತರಿದ್ದರು.

Leave a Reply

comments

Related Articles

error: