ಮೈಸೂರು

ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಮೂಹಿಕ ಗಾಯನ

ಮೈಸೂರು,ಅ.28:- ಜಿಲ್ಲಾಡಳಿತ ಮೈಸೂರು,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಶ್ವವಿದ್ಯಾನಿಲಯ, ರಂಗಾಯಣ, ಕಾಲೇಜು ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಇಂದು ಬೆಳಿಗ್ಗೆ ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಗ್ರೌಂಡ್‍ ನಲ್ಲಿ ಲಕ್ಷಕಂಠಗಳ ಗಾಯನ ಪ್ರಯುಕ್ತ  ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರವನ್ನು ಒಳಗೊಂಡಂತೆ ಎಲ್ಲಾ ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ಸಾಮೂಹಿಕ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಗಳಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಲಾವಿದರು, ಅಧಿಕಾರಿಗಳು ಭಾಗವಹಿಸಿದ್ದರು.

ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಚನ್ನಪ್ಪ,ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿದಂತೆ ಹಲವರು   ಪಾಲ್ಗೊಂಡು ಹಾಡಿಗೆ ದನಿಗೂಡಿಸಿದರು.

ಗೀತಗಾಯನ ಕೇವಲ ಸರ್ಕಾರದ ಅಧಿಕಾರಿ, ಸಿಬ್ಬಂದಿಗಳು ಮಾಡುವ ಕಾರ್ಯಕ್ರಮವಾಗದೇ ಕನ್ನಡ ನಾಡಿನ ಜನಮಾನಸದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು. ಸ್ವಯಂಸ್ಫೂರ್ತಿಯಿಂದ ಜನತೆ ಈ ಗೀತಗಾಯನದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನು ಅಭಿವ್ಯಕ್ತಿಗೊಳಿಸಲು ವೇದಿಕೆಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿ ಜಿಲ್ಲಾಡಳಿತದ ಮೇಲಿದೆ ಅದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆ, ಮಾಹಿತಿ ನೀಡುವಿಕೆ ಮತ್ತು ಕಾರ್ಯಕ್ರಮ ಆಯೋಜನೆಗೆ  ಸರ್ಕಾರ ಈ ಹಿಂದೆಯೇ ಆದೇಶಿಸಿತ್ತು. ಅದರಂತೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು.

ಇದೇ ವೇಳೆ ಸರ್ಕಾರದ ಆದೇಶದಂತೆ “ಕನ್ನಡಕ್ಕಾಗಿ ನಾವು” ವಿಶೇಷ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ದಕ್ಷಿಣ ವಲಯ ಇಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಯಿತು. ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ   ಆರ್.ರಾಮಾರಾಧ್ಯ,ಅಕ್ಷರದಾಸೋಹ ಸಹಾಯಕ ನಿರ್ದೇಶಕ ಶ್ರೀಕಂಠೇಶ್,ದೈಹಿಕ ಶಿಕ್ಷಣ ಪರಿವೀಕ್ಷಕರಾದ   ಎಂ.ಆರ್.ಪಾಷಾ ,ಪ್ರಭಾರ ಬಿ.ಆರ್.ಸಿ ಮಂಜುನಾಥ್ ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: