ಮೈಸೂರು

ವಿಮುಕ್ತ ಬುಡಕಟ್ಟು, ಆದಿವಾಸಿ ಜನಾಂಗಗಳ ನ್ಯಾಯಬದ್ಧ ಹಕ್ಕುಗಳ ಈಡೇರಿಕೆಗೆ ಒತ್ತಾಯ

ಮೈಸೂರು ,ಅ.28 :- ಸ್ವಾತಂತ್ರ್ಯ ನಂತರದಲ್ಲಿ ರಾಜ್ಯದ ಎಸ್ಸಿ,ಎಸ್ಟಿ 74 ಅಲೆಮಾರಿ, ವಿಮುಕ್ತ ಬುಡಕಟ್ಟು, ಆದಿವಾಸಿ ಜನಾಂಗಗಳನ್ನು ಎಲ್ಲಾ ಸರ್ಕಾರದ ಮತ್ತು ರಾಜಕೀಯ ಪಕ್ಷಗಳು ನಿರ್ಲಕ್ಷ್ಯಿಸಿವೆ . ಆದ್ದರಿಂದ ಎಲ್ಲಾ ಅವಕಾಶ ವಂಚಿತ, ಅಭಿವೃದ್ಧಿ ವಂಚಿತರು ಎಲ್ಲಾ ಕ್ಷೇತ್ರಗಳಲ್ಲಿ ಸಂವಿಧಾನ ಬದ್ಧ ಮೀಸಲಾತಿಯನ್ನು ಧಕ್ಕಿಸಿಕೊಳ್ಳಲು ಒಂದೇ ವೇದಿಕೆಗೆ ಬಂದಿದ್ದು ನ್ಯಾಯಬದ್ಧ ಹಕ್ಕುಗಳ ಈಡೇರಿಕೆಗೆ ಎಸ್ಸಿ,ಎಸ್ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ ಒತ್ತಾಯಿಸಿದೆ.

ಇಂದು ಮೈಸೂರು ಪರ್ತಕರ್ತರ ಭವನದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕೊತ್ತಗೆರೆ  ಪ.ಜಾ/ಪಪಂ ಅಲೆಮಾರಿ ಅಭಿವೃದ್ಧಿ ಕೋಶವನ್ನು 74 ವಿಮುಕ್ತ ಅಲೆಮಾರಿ ಬುಡಕಟ್ಟು ಸಮುದಾಯಗಳ  ಅಭಿವೃದ್ಧಿಗಾಗಿ “ ಪ.ಜಾ/ಪ.ಪಂ ವಿಮುಕ್ತ ಅಲೇಮಾರಿ ಅಭಿವೃದ್ಧಿ ನಿಗಮ” ಸ್ವರೂಪಕ್ಕೆ ಪರಿವರ್ತನೆ ಮಾಡಿ ಕನಿಷ್ಠ 250 ಕೋಟಿ ಅನುದಾನವನ್ನು ನಿಗದಿ ಪಡಿಸಿ ಮುಖ್ಯಮಂತ್ರಿಗಳು ತಕ್ಷಣ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಅಲೆಮಾರಿ ಸಮುದಾಯಗಳು ಇಂದಿಗೂ ಬಟ್ಟೆ, ಕೌದಿ, ಟೆಂಟು , ಜೋಪಡಿ, ಗುಡಾರ, ಗುಡಿಸಲುಗಳಲ್ಲಿ, ವಾಸಿಸುವವರಿಗೆ ಶಾಶ್ವತ ನೆಲೆ ಕಲ್ಪಿಸಲು SCP/TSP ಅನುದಾನದಲ್ಲಿ  ಪ.ಜಾ/ಪ.ವರ್ಗ ಅಲೆಮಾರಿ ವಸತಿ ಯೋಜನೆಯಡಿ ಟೆಂಟು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಬಿಡುಗಡೆಯಾಗಿರುವ 250 ಕೋಟಿ ಅನುದಾನವನ್ನು ಅನುಷ್ಠಾನ ಮಾಡದೇ ರಾಜೀವ್ ಗಾಂಧಿ ನಿಗಮ ಅಲೆಮಾರಿ ವಿರೋಧಿ ಧೋರಣೆಯನ್ನು ಸರಿಪಡಿಸಿಕೊಂಡು ಶೀಘ್ರ ಬಳಕೆ ಮಾಡಬೇಕು.

ಎಸ್ಸಿ,ಎಸ್ಟಿ ಅಲೆಮಾರಿ ಸಾಂಸ್ಕೃತಿಕ, ಧಾರ್ಮಿಕ, ವೈವಾಹಿಕ ಮತ್ತು ಶೈಕ್ಷಣಿಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲು ವಿವಿಧ ಜನಾಂಗಗಳ ಸಮುದಾಯಭವನದ ಮಾದರಿಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ  ಅಲೆಮಾರಿ/ಆದಿವಾಸಿ ಸಮುದಾಯ ಭವನದ ಮಾದರಿಯಲ್ಲಿ ಅಲೆಮಾರಿ/ಆದಿವಾಸಿ ಸಾಂಸ್ಕೃತಿಕ ಭವನಗಳನ್ನು ನಿರ್ಮಾಣ ಮಾಡಲು  2 ಎಕರೆ ನಿವೇಶನ  ಮಂಜೂರು ಮಾಡಿ ಪ್ರತಿ ಜಿಲ್ಲೆಗೆ 05 ಕೋಟಿ ವಿಶೇಷ ಅನುದಾನ   ಘೋಷಣೆ ಮಾಡಬೇಕು ಎಂದರು.

ರಾಜ್ಯದಾದ್ಯಂತ ಎಸ್ಸಿ,ಎಸ್ಟಿ ಅಲೆಮಾರಿ  ಸಮುದಾಯಗಳ ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗಿದ್ದು, ಈ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗೆ ಜಿಲ್ಲಾವಾರು  ಮುಚ್ಚಿರುವ ಸರ್ಕಾರಿ ಶಾಲೆಗಳಲ್ಲಿ ಅಲೆಮಾರಿ ವಿಶೇಷ ಮಾದರಿ ವಸತಿ ಶಾಲೆ ಸ್ಥಾಪಿಸಲು ಜಿಲ್ಲಾವಾರು ತಲಾ 02 ಕೋಟಿ ವಿಶೇಷ ಅನುದಾನ ಒದಗಿಸಬೇಕು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಮೂಲನಿವಾಸಿ ಬುಡಕಟ್ಟು  ಅಧ್ಯಯನ ಕೇಂದ್ರವನ್ನು ಮುಚ್ಚಿರುವುದು ಅತ್ಯಂತ ಖಂಡನೀಯ .ಕೂಡಲೇ ಸರ್ಕಾರ ಮತ್ತು ಬುಡಕಟ್ಟು ಸಚಿವರು ಸದರಿ ಅಧ್ಯಯನ ಕೇಂದ್ರಕ್ಕೆ 05 ಕೋಟಿ ಅನುದಾನ ಬಿಡುಗಡೆ ಮಾಡಿ ಕೂಡಲೇ ಕಾರ್ಯರಂಭ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯಾದ್ಯಂತ ವಿಳಾಸವಿಲ್ಲದೇ ಸರ್ಕಾರಿ/ ಖಾಸಗಿ ಜಾಗಗಳಲ್ಲಿ ಟೆಂಟು/ ಹಟ್ಟಿ, ಹಾಡಿ, ಪೋಡು , ಗುಡಿಸಲುಗಳಲ್ಲಿ  ವಾಸಿಸುತ್ತಿರುವ ಎಸ್ಸಿ,ಎಸ್ಟಿ ಅಲೆಮಾರಿಗಳಿಗೆ ಗುರುತಿನ ಪತ್ರ ವಿತರಣೆ ಹಾಗೂ ಜಾತಿಪತ್ರಗಳನ್ನು ನೀಡುವಲ್ಲಿ, ಜಿಲ್ಲಾಡಳಿತ ಉದ್ದೇಶ ಪೂರ್ವಕವಾಗಿ ಮೀನಾ ಮೇಷ ಎಣಿಸುತ್ತಿರುವ ಕಂದಾಯ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಲೆಮಾರಿ ಅಭಿವೃದ್ಧಿ ವಿರೋಧಿ ಧೋರಣೆಯನ್ನು ಸರಿಪಡಿಸಿ ಜಾತಿ ಪ್ರಮಾಣಪತ್ರಗಳನ್ನು ವಿತರಣೆ ಮಾಡುವಂತೆ   ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ SC/ST  ಅಲೆಮಾರಿ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಅಂಬರೀಶ್, ಮಂಜುನಾಥ್ ದಾಯತ್ಕರ್, ಕಿರಣ್ ಕುಮಾರ್ ಕೊತ್ತಗೆರೆ, ಬಸವರಾಜು ನಾರಾಯಣಕರ್,  ಸಿದ್ದಪಾಜಿ.ಕೆ.ಪಿ,ಕೊಳ್ಳೇಗಾಲ, ಲೋಹಿತಾಕ್ಷ,  ರಾಜು, ಹೆಚ್.ಡಿ ಕೋಟೆ, ನಾಗರಾಜು, ಮುತ್ತುರಾಜು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: