ಕರ್ನಾಟಕಪ್ರಮುಖ ಸುದ್ದಿ

ಜಿಲ್ಲೆಯಲ್ಲಿ ಮೊಳಗಿದ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳ ಗಾಯನ

ರಾಜ್ಯ(ಮಂಡ್ಯ), ಅ 29:- ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಆಶಯದಂತೆ  ರಾಜ್ಯೋತ್ಸವವನ್ನು “ಕನ್ನಡಕ್ಕಾಗಿ ನಾವು” ಎಂಬ ಶೀರ್ಷಿಕೆಯಡಿ ಅಭಿಯಾನವಾಗಿ ಆಚರಿಸುವ ನಿಟ್ಟಿನಲ್ಲಿ  ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ಗೀತೆಗಳ ಸಾಮೂಹಿಕಗಾಯನ ಏಕಕಾಲದಲ್ಲಿ ಮೊಳಗಿತು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ‌ ಶಿಕ್ಷಣ ಇಲಾಖೆ,ಪದವಿ ಪೂರ್ವ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.

ಕನ್ನಡದ ಶ್ರೇಷ್ಠತೆಯನ್ನು ಸಾರುವ ಕುವೆಂಪುರವರ “ಬಾರಿಸು ಕನ್ನಡ ಡಿಂಡಿಮವ”, ಡಾ.ಕೆ.ಎಸ್.ನಿಸಾರ್ ಅಹಮ್ಮದ್ ರವರ “ಜೋಗದ ಸಿರಿ ಬೆಳಕಿನಲ್ಲಿ”, ಹಾಗೂ ಹಂಸಲೇಖರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಈ ಮೂರು ಹಾಡುಗಳನ್ನು ಜಿಲ್ಲೆಯ ವಿವಿಧ ಶಾಲೆ-ಕಾಲೇಜಿನ ಮಕ್ಕಳು, ಏಕಕಾಲದಲ್ಲಿ ಹಾಡಲು ವ್ಯವಸ್ಥೆಗೊಳಿಸಲಾಯಿತು.

ಸಾಮೂಹಿಕ ಗಾಯನದಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡದ ಶ್ರೇಷ್ಠ ಗೀತೆಗಳಿಗೆ ಧ್ವನಿಯಾಗಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಈ ಪೈಕಿ ನಗರದ ಕಾರ್ಮೆಲ್ ಶಾಲೆ, ಲಕ್ಷ್ಮೀಜನಾರ್ಧನ ಶಾಲೆ , ಪ್ರತಿಭಾಂಜಲಿ ಸ್ಕೂಲ್, ಹಾಗೂ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಇಲಾಖೆಗೆ ಸೇರಿದ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು , ಸಂಘ ಸಂಸ್ಥೆಗಳ ಮುಖಂಡರುಗಳು ಸಾಮೂಹಿಕ ಗಾಯನದಲ್ಲಿ ಭಾಗವಹಿಸಿದ್ದರು.

ಸಾಮೂಹಿಕ ಗಾಯನಕ್ಕೆ ಗಾಯಕ ಡೇವಿಡ್ ರವರು ಹಾಗೂ ಕಾರ್ಯಕ್ರಮದ ರೂಪುರೇಷೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್ ಸಾಥ್ ನೀಡಿದರು.
ಈ ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷರಾದ ಎಚ್.ಎಸ್ ಮಂಜು, ನಗರ ಸಭಾ ಆಯುಕ್ತರಾದ ಲೋಕೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯ್ ಕುಮಾರ್, ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ಅಲ್ಪ ಸಂಖ್ಯಾತರ ಇಲಾಖೆಯ ಸಹಾಯಕ ನಿರ್ದೇಶಕಿ ಎಲ್ಲಮ್ಮ, ಜಿಲ್ಲಾ ನಗರಾಭಿವೃದ್ಧಿ ಕೋಶದ ತುಷಾರಮಣಿ,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜವರೇಗೌಡರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಕ ವೃಂದದವರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: