ಮೈಸೂರು

ವಿದ್ಯಾರ್ಥಿನಿಯರಿಗೆ ಅಗತ್ಯ ವಸ್ತುಗಳ ವಿತರಣೆ ಹಾಗೂ ತ್ಯಾಜ್ಯ ವಸ್ತುಗಳ ಸುಡುವ ಯಂತ್ರ ವಿತರಣೆ

ವಿದ್ಯಾರ್ಥಿನಿಯರ ಉಪಯೋಗಕ್ಕಾಗಿ ಬರುವ ಅಗತ್ಯ ವಸ್ತುಗಳ ವಿತರಣೆ ಹಾಗೂ ತ್ಯಾಜ್ಯ ವಸ್ತುಗಳ ಸುಡುವ ಯಂತ್ರ ವಿತರಣೆ
ಮೈಸೂರು, ಅ.28:- ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಕಾನೂನು ಕಾಲೇಜಿನ ಆವರಣದಲ್ಲಿ ಇಂದು ಶಾರದಾ ವಿಲಾಸ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗಾಗಿ ಪ್ರತಿ ತಿಂಗಳ ಉಪಯೋಗಕ್ಕಾಗಿ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ವಿತರಣಾ ಯಂತ್ರ ಹಾಗೂ ತ್ಯಾಜ್ಯವಸ್ತುಗಳ ಸುಡುವ ಯಂತ್ರಗಳ ಉಪಕರಣಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಇನ್ನರ್ ವ್ಹೀಲ್ ಕ್ಲಬ್‍ನ 318ರ 2021-22ರ ಅಧ್ಯಕ್ಷರಾದ ಪುಷ್ಪ ಗುರುರಾಜ್ ಅವರು ಜ್ಯೋತಿ ಬೆಳಗಿಸಿ, ಮಾತನಾಡಿ ಇಂದು ಸಮಾಜದಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅವಕಾಶಗಳು ಸಿಗುವಂತಾಗಬೇಕು. ನೊಂದ ಮಹಿಳೆಯರಿಗೆ ಸಹಾಯ, ಸಹಕಾರ ನೀಡಿದಲ್ಲಿ ಅವರೂ ಕೂಡ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿಯೂ ಕೂಡ ಸ್ತ್ರೀಯರು ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡಬೇಕು ಎಂದು ತಿಳಿಸಿದರು, ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೆಯೋ ಅಲ್ಲಿ ಪೂಜ್ಯತೆ ಇರುತ್ತದೆ ಎಂದು ತಿಳಿಸಿದ ಅವರು, ನಮ್ಮ ಇನ್ನರ್ ವ್ಹೀಲ್ ಕ್ಲಬ್‍ ನ ಈ ವರ್ಷದ ಮುಖ್ಯ ಧ್ಯೇಯ ‘ಮಹಿಳೆಯರಿಗೆ ಆದ್ಯತೆ’ ಆಗಿದ್ದು, ಅಂತರರಾಷ್ಟ್ರೀಯ ಇನ್ನರ್ ವ್ಹೀಲ್ ಕ್ಲಬ್ ಅತೀ ದೊಡ್ಡ ಮಹಿಳಾ ಕ್ಲಬ್ ಆಗಿದ್ದು, ಇದರಲ್ಲಿ ಒಂದು ಲಕ್ಷದ ನಲವತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಕ್ಲಬ್‍ ನ ಸದಸ್ಯತ್ವವನ್ನು ಹೊಂದಿರುತ್ತಾರೆ. ಇಡೀ ವರ್ಷ ಮಹಿಳಾ ರಂಗಕ್ಕೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಹಾಯ, ಸಹಕಾರ ನೀಡಲು ಮುಂದಾಗುತ್ತಿದ್ದೇವೆಂದು ತಿಳಿಸಿದರು. ಸಮಾಜದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇದು ನಿಲ್ಲಬೇಕು. ಮಹಿಳೆಯೂ ಕೂಡ ನಿರ್ಭಯವಾಗಿ ಎಲ್ಲರಂತೆ ನೆಮ್ಮದಿ ಜೀವನವನ್ನು ನಡೆಸುವಂತಾಗಬೇಕು. ಹೆಣ್ಣು ಮಕ್ಕಳು ಮೊದಲು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸಿ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರಗತಿಯನ್ನು ಹೊಂದಬೇಕೆಂದು ತಿಳಿಸಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದ ಶಾರದಾ ವಿಲಾಸ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ.ಬಿ.ಎಂ.ಸುಬ್ರಾಯ , ಇಂದು ಮಕ್ಕಳಿಗೆ ಬೇಕಾಗಿರುವುದು ಶಿಕ್ಷಣದ ಅರಿವು, ಸಮಾಜದ ವಿವಿಧ ಸಂಘ ಸಂಸ್ಥೆಗಳು ಕೊಡುವ ಹತ್ತು ಹಲವು ಕೊಡುಗೆಗಳನ್ನು ಸದುಪಯೋಗಪಡಿಸಿಕೊಂಡು, ವಿದ್ಯಾರ್ಥಿನಿಯರು ಜೀವನದಲ್ಲಿ ಏಳಿಗೆಯನ್ನು ಹೊಂದಿ ಗುರಿ ಮುಟ್ಟಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಎನ್.ಚಂದ್ರಶೇಖರ್, ಆಡಳಿತ ಮಂಡಳಿಯ ಸದಸ್ಯರು ಹಾಗೂ ಇನ್ನರ್ ವ್ಹೀಲ್ ಕ್ಲಬ್‍ನ ನಿಕಟಪೂರ್ವ ಅಧ್ಯಕ್ಷರಾದ ಅನುರಾಧ ನಂದಕುಮಾರ್, ಇನ್ನರ್ ವ್ಹೀಲ್ ಕ್ಲಬ್‍ನ ಮೈಸೂರು ಸೆಂಟ್ರಲ್‍ನ ಅಧ್ಯಕ್ಷೆ ಸಂಧ್ಯ ಸಂಪತ್‍ಕುಮಾರ್, ಮೈಸೂರು ಗೋಲ್ಡ್ ಇನ್ನರ್ ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಪ್ರತಿಭಾರಾವ್, ಮೈಸೂರು ಮಿಡ್‍ಟೌನ್ ಕ್ಲಬ್‍ನ ಅಧ್ಯಕ್ಷೆ ಆಶಾಮಹೇಶ್, ಮೈಸೂರು ನಾರ್ಥ್ ಇನ್ನರ್ ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಶರಣ್ಯ ಡಿ.ಚೌತ, ಮೈಸೂರು ಸೌತ್ ಈಸ್ಟ್ ಕ್ಲಬ್‍ನ ಅಧ್ಯಕ್ಷೆ ವೀಣಾರವೀಂದ್ರ, ಮೈಸೂರು ವೆಸ್ಟ್ ಕ್ಲಬ್‍ನ ಅಧ್ಯಕ್ಷೆ ಎ.ಎನ್.ಭವಾನಿಚಂದ್ರ, ಮೈಸೂರು ಐಸಿರಿ ಕ್ಲಬ್‍ನ ರಾಧಾವಿನಯ್, ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಆರ್.ನರಸಿಂಹ, ಆರ್.ಎಸ್.ಮೋಹನ್‍ಮೂರ್ತಿ, ನಾಗೇಶ್ ಹನಸೋಗೆ, ಎಸ್.ಅಚ್ಚುತ, ಡಾ.ಚಂದ್ರಶೇಖರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಾಯಕಿ ಹಾಗೂ ಉಪನ್ಯಾಸಕಿ, ವಿದುಷಿ ಕಾವ್ಯಶ್ರೀ ಆರ್.ರಾವ್ ಪ್ರಾರ್ಥನೆ ಸಲ್ಲಿಸಿದರೆ, ನಿವೃತ್ತ ಮುಖ್ಯ ಶಿಕ್ಷಕ ವೆಂಕಟರಮಣಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾರದಾ ವಿಲಾಸ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ದೇವಿಕಾ ವಂದಿಸಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರು ಪ್ರತಿ ತಿಂಗಳು ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಹೇಗೆ ಉಪಯೋಗಿಸಬೇಕು ಮತ್ತು ಉಪಯೋಗಿಸಿದ ವಸ್ತುಗಳನ್ನು ಹೇಗೆ ನಾಶಗೊಳಿಸಬೇಕೆಂದು ಸುಡುವ ಯಂತ್ರಗಳ ಮೂಲಕ ವಿದ್ಯಾರ್ಥಿನಿಯರಿಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: