ಮೈಸೂರು

ಮಹಾಜನ ಕಾಲೇಜಿನಲ್ಲಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ

ಮೈಸೂರು, ಅ. 28: – ಕನ್ನಡ ಕಾಯಕ ವರ್ಷಾಚರಣೆಯ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿರುವ ಕನ್ನಡ ರಾಜೋತ್ಸವ ಅಭಿಯಾನದ ಅಂಗವಾಗಿ ಲಕ್ಷ ಲಕ್ಷ ಕಂಠಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಪ್ರತಿಭಾ-ವೇದಿಕೆಯ ಸಹಯೋಗದೊಂದಿಗೆ ನಡೆಸಲಾಯಿತು.
ಕನ್ನಡದ ನೆಲ, ಜಲವನ್ನು ಉಳಿಸಿ, ಕನ್ನಡವನ್ನು ಪ್ರೀತಿಸಿ, ಅನ್ಯ ಭಾಷೆಯ ಬಂಧುಗಳಿಗೂ ಕನ್ನಡವನ್ನು ಗೌರವಿಸುವ, ಪ್ರೀತಿಸುವ ಮನೋಧರ್ಮವನ್ನು ಬೆಳಸಬೇಕೆಂದು ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕನ್ನಡ ನಾಡು-ನುಡಿ ಬಗೆಗೆ ಪ್ರೀತಿಯಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಸರ್ಕಾರದ ಈ ಕಾರ್ಯಕ್ರಮ ಅನುಕರಣೀಯ ಮತ್ತು ನಾಡು ನುಡಿಯ ಬೆಳವಣಿಗೆಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಶ್ಲಾಘನೀಯವೆಂದರು. ಕನ್ನಡ ಭಾಷೆಯನ್ನು ದೈನಂದಿನ ಚಟುವಟಿಕೆಗಳಲ್ಲಿ ಹಾಗೂ ವ್ಯವಹಾರದಲ್ಲಿ ಕಡ್ಡಾಯವಾಗಿ ಬಳಸುವ ಬಗ್ಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನಾಡು ನುಡಿಯನ್ನು ಬಿಂಬಿಸುವ ರಾಷ್ಟ್ರಕವಿ ಕುವೆಂಪು, ನಿಸಾರ್ ಅಹಮ್ಮದ್ ಮತ್ತು ಖ್ಯಾತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರ ಗೀತೆಗಳನ್ನು ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಶೈಕ್ಷಣಿಕ ಸಲಹೆಗಾರರಾದ ಡಾ. ಎಸ್.ಆರ್. ರಮೇಶ್ ಅವರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್.ಆರ್. ತಿಮ್ಮೇಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗ ಮತ್ತು ಪ್ರತಿಭಾ ವೇದಿಕೆಯ ಸಂಚಾಲಕರಾದ ನಾಗೇಶ ಎಂ ಅವರು ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ವಿನೋದಮ್ಮ ಅವರು ವಂದಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಾಂಪ್ರದಾಯಿಕ ಉಡುಗೆ ಧರಿಸಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: