ದೇಶಪ್ರಮುಖ ಸುದ್ದಿಮನರಂಜನೆ

ಡ್ರಗ್ಸ್ ಪ್ರಕರಣ : ನಟ ಶಾರುಖ್ ಖಾನ್ ಪುತ್ರನಿಗೆ ಜಾಮೀನು

ದೇಶ(ಮುಂಬೈ),ಅ.28:- ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಧನದಲ್ಲಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್​ ಖಾನ್​ ಹಾಗೂ ಇತರ ಇಬ್ಬರಿಗೆ ಬಾಂಬೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಸತತ ಎರಡು ದಿನಗಳ ಸುದೀರ್ಘ ವಿಚಾರಣೆ ಬಳಿಕ ಬಾಂಬೆ ಹೈಕೋರ್ಟ್, ಆರೋಪಿಗಳಾದ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರಿಗೆ ಜಾಮೀನು ನೀಡಿದೆ.

ಕಳೆದ ಹಲವು ದಿನಗಳಿಂದ ಮುಂಬೈನ ಅರ್ತರ್ ರೋಡ್ ಜೈಲಿನಲ್ಲಿ ಬಂಧಿಯಾಗಿರುವ ಆರ್ಯನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ನಾಳೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಮಾದಕ ವಸ್ತುಗಳ ಬಳಕೆ, ಮಾರಾಟ ಸೇರಿದಂತೆ ಅನೇಕ ಆರೋಪಗಳನ್ನು ಆರ್ಯನ್ ಖಾನ್ ಮೇಲೆ ಎನ್ ಸಿ ಬಿ ಹೊರಿಸಿದೆ.

ಆರ್ಯನ್ ಖಾನ್ ಪರ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು, ”ಹೋಟೆಲ್‌ನಲ್ಲಿ ಬೇರೆ ಬೇರೆ ಕೊಠಡಿಗಳಲ್ಲಿ ಜನರು ಧೂಮಪಾನ ಮಾಡುತ್ತಿದ್ದರೆ, ಹೋಟೆಲ್‌ನಲ್ಲಿರುವವರೆಲ್ಲರೂ ಪಿತೂರಿ ನಡೆಸುತ್ತಿದ್ದಾರೆ ಎಂದು ಅರ್ಥವೇ? ಅದನ್ನು ಪಿತೂರಿ ಎಂದು ಕರೆಯಲು ಯಾವುದೇ ಆಧಾರ ಇಲ್ಲ ಎಂದರು.
ಆರ್ಯನ್ ಖಾನ್ ಚಿಕ್ಕ ವಯಸ್ಸಿನ ಹುಡುಗನಾಗಿದ್ದಾನೆ. ಹಾಗಾಗಿ ಅವನನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ನಿಲಯಕ್ಕೆ ಕಳುಹಿಸಬೇಕಿತ್ತು. ಅಲ್ಲದೇ ಆರ್ಯನ್ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ ಎಂದು ವಾದಿಸಿದರು.
ಆರೋಪಿಗಳ ಪರವಾಗಿ ಮುಕುಲ್ ರೋಹಟಗಿ, ಅಮಿತ್ ದೇಸಾಯಿ ಮತ್ತು ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ವಾದ ಮಾಡಿದರೆ ಎನ್‌ಸಿಬಿ ಪರವಾಗಿ ಎಎಸ್‌ಜಿ ಅನಿಲ್ ಸಿಂಗ್ ಅವರು ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಮೂವರು ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: