ಕರ್ನಾಟಕಪ್ರಮುಖ ಸುದ್ದಿ

ಕೊರೊನ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಯಶಸ್ವಿ : ಉಮಾಶಂಕರ್

ರಾಜ್ಯ(ದಾವಣಗೆರೆ),ಅ.29:- ಕೋವಿಡ್-19 ರ ಮೂರನೇ ಅಲೆ ಸಂಭಾವ್ಯ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಪ್ರಮಾಣವನ್ನು ಹೆಚ್ಚಿಸಿ ಶೇ.100 ರಷ್ಟು ಪ್ರಗತಿ ಸಾಧಿಸಬೇಕು. ಆರೋಗ್ಯ ಇಲಾಖೆಯೊಂದಿಗೆ ಎಲ್ಲಾ ಇಲಾಖೆಗಳು ಕೈ ಜೋಡಿಸಿ ಮುಂದಿನ ದಿನಗಳಲ್ಲಿ ವ್ಯಾಕ್ಸಿನೇಷನ್ ಬಗೆಗೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಿ ಹೆಚ್ಚು ಪ್ರಚಾರ ಮಾಡಬೇಕು ಹಾಗೂ ಕೊರೊನಾ ನಿರ್ವಹಣೆಯಲ್ಲಿ ಎಲ್ಲಾ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಮುಕ್ತ ರಾಜ್ಯವನ್ನಾಗಿ ಮಾಡುವಲ್ಲಿ ಅನೇಕ ಜಿಲ್ಲೆಗಳು ಪ್ರಗತಿ ಸಾಧಿಸಿದ್ದು, ದಾವಣಗೆರೆ ಜಿಲ್ಲೆ ಮೊದಲ ಡೋಸ್ ವ್ಯಾಕ್ಸಿನೇಷನ್ ಪಡೆಯುವಲ್ಲಿ ಶೇ.83 ರಷ್ಟು ಗುರಿ ಸಾಧಿಸಿದ್ದು, ರಾಜ್ಯದ ಸರಾಸರಿ ಹತ್ತಿರವಿದೆ. ಜನರ ಆರೋಗ್ಯ ಸುರಕ್ಷತೆಯ ದೃಷ್ಟಿಯಿಂದ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಜೊತೆಗೂಡಿ ವ್ಯಾಕ್ಸಿನೇಷನ್ ಪ್ರಮಾಣ ಹೆಚ್ಚಳ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ ಲಸಿಕೆ ನೀಡಲು 12,23,002 ಗುರಿ ನಿಗಧಿಪಡಿಸಲಾಗಿದೆ. ಅದರಲ್ಲಿ 10,10,043 ಜನರಿಗೆ ಯಶಸ್ವಿಯಾಗಿ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಶೇ.83 ಹಾಗೂ ಎರಡನೇ ಡೋಸ್ ಶೇ.38 ರಷ್ಟು ಪ್ರಗತಿ ಸಾಧಿಸಲಾಗಿದೆ. ಚನ್ನಗಿರಿ ಶೇ.96, ದಾವಣಗೆರೆ ಶೇ.81, ಹರಿಹರ ಮತ್ತು ಹೊನ್ನಾಳಿ ಶೇ.80, ಜಗಳೂರು ಶೇ.74 ರಷ್ಟು ಮೊದಲ ಡೋಸ್ ಪಡೆದುಕೊಂಡಿದೆ. ದಾವಣಗೆರೆ ಭಾಷಾ ನಗರ, ಅಜಾದ್ ನಗರ, ಗಾಂಧಿ ನಗರ, ಎಸ್.ಎಂ.ಪಿ ನಗರ ಸೇರಿದಂತೆ ಜಗಳೂರು ತಾಲ್ಲೂಕುಗಳಲ್ಲಿ ವ್ಯಾಕ್ಸಿನೇಷನ್ ಪ್ರಮಣ ಕಡಿಮೆ ಇದ್ದು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೋವಿಡ್ ಲಸಿಕಾ ಮೇಳಗಳನ್ನು ಆಯೋಜಿಸುವ ಮೂಲಕ ಪ್ರಗತಿ ಸಾಧಿಸಲಾಗುತ್ತಿದೆ. ಆದರೂ ಕೂಡ ಈ ಭಾಗದ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಸಹಕರಿಸುತ್ತಿಲ್ಲ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ವಿಜಯ ಮಹಾಂತೇಶ ಮಾತನಾಡಿ, ಜಿಲ್ಲಾದ್ಯಂತ ಈಗಾಗಲೇ ಸಾಕಷ್ಟು ಲಸಿಕಾ ಮೇಳಗಳನ್ನು ಏರ್ಪಡಿಸಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯ ಯಾವ ಗ್ರಾಮದಲ್ಲಿ ಮೊದಲ ಡೋಸ್ ಮತ್ತು ಎರಡನೇ ಡೋಸ್ ತೆಗೆದುಕೊಂಡಿಲ್ಲ ಎಂಬ ಮೈಕ್ರೋಪ್ಲಾನ್ ತಯಾರಿ ಮಾಡಿ ವ್ಯಾಕ್ಸಿನೇಷನ್ ನೀಡಲು ತಂಡ ರಚನೆ ಮಾಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅನುಷ್ಠಾನ ಮಾಡಲಾಗಿದೆ. ಪ್ರತಿಯೊಂದು ಗ್ರಾಮಗಳಿಗೆ ಭೇಟಿ ನೀಡಿ ಎಲ್ಲ ರೀತಿಯ ಐಇಸಿ ಚಟುವಟಿಕೆಗಳನ್ನು ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ವ್ಯಾಕ್ಸಿನೇಷನ್ ಕುರಿತು ಈಗಾಗಲೇ ಸಾಕಷ್ಟು ಲಸಿಕಾ ಮೇಳ ಏರ್ಪಡಿಸಿ ಮನೆಮನೆಗೆ ತೆರಳಿ ವ್ಯಾಕ್ಸಿನೇಷನ್ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಸಾರ್ವಜನಿಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡುವ ಮೂಲಕ ತಪ್ಪಿಸಿಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್ ಲಿಂಕ್ ನ ಸಹಾಯದಿಂದ ಲಸಿಕೆ ಹಾಕಿಸಿಕೊಂಡಿದ್ದರ ಮಾಹಿತಿ ತಿಳಿದು ಜನರನ್ನು ಓಲೈಸಿ ಲಸಿಕೆ ಹಾಕಿಸುತ್ತಿದ್ದೇವೆ ಎಂದು ಸಮಸ್ಯೆ ಕುರಿತು ವಿವರಿಸಿದರು.
ಜಗಳೂರು ತಹಶೀಲ್ದಾರ್ ಮಾತನಾಡಿ, ತಾಲ್ಲೂಕಿನ ಹಲವರಲ್ಲಿ ಮೂಢನಂಬಿಕೆಗಳು ಹಾಗೂ ತಪ್ಪು ನಂಬಿಕೆಗಳು ಹೆಚ್ಚಾಗಿರುವುದರಿಂದ ವ್ಯಾಕ್ಸಿನೇಷನ್ ಪೂರೈಸುವಲ್ಲಿ ವಿಫಲವಾಗುತ್ತಿದ್ದೇವೆ. ಸಾಕಷ್ಟು ಲಸಿಕೆ ಮೇಳಗಳು, ಜಾಗೃತಿ ಅಭಿಯಾನ, ಊರಿನ ಮುಖಂಡರ ಮೂಲಕವು ಪ್ರಚಾರ ಕಾರ್ಯ ಹಮ್ಮಿಕೊಳ್ಳುತ್ತಿದ್ದೇವೆ. ಖುದ್ದಾಗಿ ಮನೆ ಬಾಗಿಲಿಗೆ ಹೋದರು ಸಹ ಜನರು ಸ್ಪಂದಿಸುತ್ತಿಲ್ಲ ಎಂದರು.
ಎಸ್.ಆರ್.ಉಮಾಶಂಕರ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಜನರಿಗೆ ಅರಿವು ಮೂಡಿಸಿದಾಗ ಮಾತ್ರ ಜನರು ಮುಂದೆ ಬರುತ್ತಾರೆ. ಜಿಲ್ಲೆಯಲ್ಲಿ ಅತಿ ಹೆಚ್ಚು ವ್ಯಾಕ್ಸಿನೇಷನ್ ಪಡೆದ ತಾಲ್ಲೂಕು, ಗ್ರಾಮಗಳ ಕುರಿತು ಹೆಚ್ಚು ಪ್ರಚಾರ ಮಾಡಿ. ವ್ಯಾಕ್ಸಿನೇಷನ್ ಬಗೆಗೆ ಹೆಚ್ಚು ಜಾಹಿರಾತು, ಪೋಸ್ಟರ್ ಬಿಡುಗಡೆ ಮಾಡಿ. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜನರಿಗೆ ಅರಿವು ಮೂಡಿಸಿ. ಕೇವಲ ಆರೋಗ್ಯ ಇಲಾಖೆಯಲ್ಲದೇ ಇತರೆ ಇಲಾಖೆಗಳು ಕೈ ಜೋಡಿಸಬೇಕು ಎಂದರು.
ಮುAದುವರೆದು ಮಾತನಾಡಿ, ರಾಜ್ಯದಲ್ಲಿ 15 ಜಿಲ್ಲೆಗಳು ಶೇ.90 ರಷ್ಟು ವ್ಯಾಕ್ಸಿನೇಷನ್ ಗುರಿ ಸಾಧಿಸಿರುವಾಗ, ಬೇರೆ ಜಿಲ್ಲೆಗಳಿಗೆ ಯಾಕೆ ಸಾಧ್ಯವಿಲ್ಲ. ವ್ಯಾಕ್ಸಿನೇಷನ್ ಪ್ರಮಾಣ ಹೆಚ್ಚಳಕ್ಕಾಗಿ ವ್ಯವಸ್ಥಿತ ಯೋಜನೆ ರೂಪಿಸಿಕೊಂಡು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಆಯಾ ತಾಲ್ಲೂಕು, ಗ್ರಾಮ, ವಾರ್ಡ್ಗಳಲ್ಲಿರುವ ಮುಖಂಡರ ಮೂಲಕ ವ್ಯಾಕ್ಸಿನೇಷನ್ ಕುರಿತು ಹೆಚ್ಚು ಪ್ರಚಾರ ಮಾಡಬೇಕು. ಆರೋಗ್ಯ ಅಧಿಕಾರಿಗಳ ತಂಡ ಮಾಡಿ ಪ್ರತಿ ದಿನವೂ ಅವರಿಗೆ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾರ್ಗದರ್ಶನ ನೀಡಿ ಫೀಲ್ಡ್ ಸಮಸ್ಯೆ ಬಗೆಹರಿಸುವಂತೆ ಎಚ್ಚರವಹಿಸಬೇಕು. ಕೆಳಹಂತದ ಅಧಿಕಾರಿಗಳಿಗೆ ಧೈರ್ಯ ತುಂಬಿ ಅವರಿಗೆ ಅಗತ್ಯವಾದ ಸಲಹೆ ನೀಡಬೇಕು. ಸಕರಾತ್ಮಕ ಜಾಹಿರಾತುಗಳನ್ನು ಹೆಚ್ಚಾಗಿ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಅನುಗ್ರಹ ಯೋಜನೆಯಡಿ ಮೃತಪಟ್ಟ ಕುರಿಗಳಿಗೆ ಪರಿಹಾರ ಒದಗಿಸುವ ಅನುಗ್ರಹ ಯೋಜನೆಗಳನ್ನು ಪ್ರಸಕ್ತ ಸಾಲಿನಿಂದ ಮುಂದುವರೆಸಲು ಸರ್ಕಾರ ಆದೇಶ ನೀಡಿದ್ದು, ಅನುಗ್ರಹ ಯೋಜನೆಗಾಗಿ ಅರ್ಜಿಗಳನ್ನು ಸಂಗ್ರಹಿಸಬೇಕು. ಕಂದಾಯ ಇಲಾಖೆಗೆ ಸಂಬAಧಿಸಿದAತೆ ಅನೇಕ ಪ್ರಕರಣಗಳು ಬಾಕಿ ಇದ್ದು, ತ್ವರಿತವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಸಾರ್ವಜಿಕರನ್ನು ಅಲೆದಾಡಿಸಬಾರದು ಎಂದು ತಿಳಿಸಿದರು.
ಎಡಿಸಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ, ಅಕ್ಟೋಬರ್ ತಿಂಗಳಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಒಂದು ಸಾವು ಸಂಭವಿಸಿದ್ದು ಪರಿಹಾರ ಕೊಟ್ಟಿದ್ದೇವೆ. 9 ಕುರಿ, 3 ಹಸು ಸೇರಿದಂತೆ 9 ಜಾನುವಾರು ಪ್ರಾಣಹಾನಿಯಾಗಿದೆ. ಮನೆಹಾನಿ 184 ಪೂರ್ಣ ಹಾನಿಯಾಗಿದೆ. 280 ಎಕ್ಟೇರ್ ಬೆಳೆ ಹಾನಿಯಾಗಿದ್ದು, ತೋಟಗಾರಿಕೆ, ಕೃಷಿ ಇಲಾಖೆಗಳಿಂದ ಸರ್ವೇ ಮಾಡಿ ಪರಿಹಾರ ಒದಗಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಸೆಪ್ಟೆಂಬರ್ ತಿಂಗಳವರೆಗೆ ಶೇ.65 ರಷ್ಟು ಮಳೆ ಕೊರತೆಯಿದ್ದು, ಅಕ್ಟೋಬರ್ ತಿಂಗಳಲ್ಲಿ ಶೇ.120 ರಷ್ಟು ಜಾಸ್ತಿ ಮಳೆಯಾಗಿದೆ. ಹಾಗೂ ತೊಗರಿ ಬೆಳೆ ಈ ವರ್ಷ ಚೆನ್ನಾಗಿದ್ದು ಮೆಕ್ಕೆ ಜೋಳದ ವಿಸ್ತೀರ್ಣ ಕಡಿಮೆಯಾಗಿದೆ. ತೊಗರಿಯನ್ನು ಅಕ್ಕಡಿ ಬೆಳೆಯಾಗಿ ಪ್ರಚುರ ಪಡಿಸಿದ್ದು ರೈತರು ಒಲವು ತೋರಿಸುತ್ತಿದ್ದಾರೆ. ಹಾಗೂ ಸಾವಯವ ಮತ್ತು ನೈಸರ್ಗಿಕ ಕೃಷಿಯತ್ತ ರೈತರು ಆಸಕ್ತಿ ತೋರುತ್ತಿದ್ದಾರೆ. ಬೆಳೆ ವಿಮೆಗೆ ಈಗಾಗಲೇ 21 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ. ಬೆಳೆ ವಿಮೆಯು 7 ವರ್ಷಗಳ ಸರಾಸರಿಯ ಮುಖಾಂತರ ಲೆಕ್ಕ ಹಾಕಿ ವಿಮೆ ನೀಡಲಾಗುತ್ತಿದೆ.
ಜಿ.ಪಂ ಉಪಕಾರ್ಯದರ್ಶಿ ಆನಂದ್ ಮಾಹಿತಿ ನೀಡಿ, ನರೇಗದಡಿ 31 ಲಕ್ಷ ಮಾನವ ದಿನಗಳ ಗುರಿ ಇದ್ದು, ಈಗಾಗಲೇ 21 ಲಕ್ಷ ಮಾನವ ದಿನಗಳು ಸೃಜನೆ ಮಾಡಲಾಗಿದೆ ಎಂದರು.
ಎಸ್.ಆರ್.ಉಮಾಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಕೊರತೆ ಇಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಮಸ್ಯೆಯೂ ಇಲ್ಲ. ಶಿಕ್ಷಣ, ಮಾಹಿತಿ, ಸಂವಹನಕ್ಕೆ ಅನುದಾನ ನೀಡಲಾಗಿದ್ದು ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಾಗಿದೆ. ಪ್ರಕೃತಿ ವಿಕೋಪದ ಅಡಿಯಲ್ಲಿ ಈಗಾಗಲೇ ಅತಿವೃಷ್ಟಿ ,ತ್ತು ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಅರ್ಹ ಫಲಾನುಭವಿಗಳಿಗೆ ಪರಿಹಾರ ಸೌಲಭ್ಯ ದೊರಕಿಸಬೇಕು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ನೈಜ ಹಾನಿ ಪ್ರಮಾಣ ಪರಿಶೀಲಿಸಿ ಪರಿಹಾರ ದೊರಕಿಸಿಕೊಡಬೇಕು. ಶಿಥಿಲಗೊಂಡಿರುವ ಶಾಲಾ ಕಟ್ಟಡಗಳನ್ನು ಅತಿವೃಷ್ಟಿ ಕೋಟಾದಲ್ಲಿ ಸೇರಿಸಿ ಅನುದಾನ ತೆಗೆದುಕೊಂಡು ಅಭಿವೃದ್ಧಿಗೊಳಿಸಿ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಸಮಾಜ ಕಲ್ಯಾಣ ಇಲಾಖಾ ಉಪನಿರ್ದೇಶಕಿ ಕೌಸರ್ ರೇಷ್ಮ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ಸುಖಂದ್, ಡಿಹೆಚ್‌ಓ ಡಾ.ನಾಗರಾಜ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: