ಕರ್ನಾಟಕಪ್ರಮುಖ ಸುದ್ದಿಮನರಂಜನೆ

ನಟ ಪುನೀತ್ ನಿಧನಕ್ಕೆ ಸಂಗೀತ ನಿರ್ದೇಶಕ ವಿ.ಮನೋಹರ್ ಕಂಬನಿ

ರಾಜ್ಯ (ಬೆಂಗಳೂರು),ಅ.30 : – ಪುನೀತ್ ರಾಜ್ ಕುಮಾರ್ ನಿಧನರಾಗಿರುವ ಹಿನ್ನಲೆಯಲ್ಲಿ ಅವರ ಅಂತಿಮ ದರ್ಶನ ಪಡೆಯಲು ಕಂಠೀರವ ಕ್ರೀಡಾಂಗಣಕ್ಕೆ ಬಂದಿದ್ದ ಸಂಗೀತ ನಿರ್ದೇಶಕ   ವಿ. ಮನೋಹರ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

25 ವರ್ಷಗಳಿಂದ ನಾನು ಅಪ್ಪು ಅವರನ್ನು ನೋಡುತ್ತಿದ್ದೇನೆ.  ಅವರು ನಾಯಕ ನಟನಾಗುವ ಮೊದಲಿನಿಂದಲೂ ನನಗೆ ಗೊತ್ತು. ನಾನು ಹೀರೋ  ಆಗಬೇಕು ಎನ್ನುವುದರ ಹಿಂದಿನ ಅವರ ಪರಿಶ್ರಮ, ಹಾಗೂ ಯಾವಾಗಲು ಫಿಟ್ ಅಗಿಯೇ ಇದ್ದರು. ವಿಧಿ ಆಟವನ್ನು ಆಡಿ, ಕನ್ನಡನಾಡಿಗೆ  ಒಂದು  ಘೋರವಾದ ನೋವು ನೀಡಿದೆ. ಎಷ್ಟೋ ಬಡಜನರಿಗೆ, ಸಂಘ ಸಂಸ್ಥೆಗಳಿಗೆ ಆಸರೆಯಾಗಿದ್ದರು. ಆ ಒಂದು ಆಸರೆಯೇ ನಮ್ಮಿಂದ ದೂರವಾಗಿದೆ. ಅವರು ದಾನ ಹಾಗೂ ಸಮಾಜ ಸೇವೆ ಮಾಡುತ್ತಿರುವುದನ್ನು  ಯಾರಿಗೂ ಹೇಳುತ್ತಿರಲ್ಲಿಲ್ಲ . ಯಾವತ್ತೂ ಪ್ರಚಾರಕ್ಕೆಂದು  ಮಾಡುತ್ತಿರಲ್ಲಿಲ್ಲ. ಇದು ಅವರಿಗೆ ಅವರ ತಂದೆ ಡಾ. ರಾಜ್ ಕುಮಾರ್ ಅವರಿಂದ ಬಂದಿದ್ದು ಎಂದರು.

ನಾವು ಎಡಗೈಯಲ್ಲಿ ಕೊಟ್ಟಿದ್ದು ಬಲಗೈ ಗೆ ಗೊತ್ತಾಗಬಾರದು ಎನ್ನುವ ಅಪ್ಪಾಜಿಯ ಗುಣ ಅಪ್ಪುವಿನಲ್ಲೂ  ಸಹ ಇತ್ತು. ಅವರು ಮಾಡಿದ ಸೇವೆ ಹಾಗೂ ಸಮಾಜಮುಖಿ ಕೆಲಸಗಳು ನಮಗೆ ಈಗ ಗೊತ್ತಾಗುತ್ತಿದೆ. ಅಪ್ಪುವಿನ ಸಾವಿನ ವಿಷಯವನ್ನು ನಮಗೆ ಜೀರ್ಣಿಸಿಕೊಳ್ಳಲು ಅಗುತ್ತಿಲ್ಲ.  ನಾನು ಮತ್ತು ಅಪ್ಪು ಒಂದು ಅಲ್ಬಮ್ ಸಾಂಗ್  ಕೂಡ ಮಾಡಬೇಕು ಎಂದು ತಯಾರಿ ಮಾಡಿದ್ದೆವು. ಆದರೆ ಈಗ ಅದು ಕನಸಾಗಿಯೇ ಉಳಿದಿದೆ.  ನಮ್ಮ ಇಡೀ ಚಿತ್ರರಂಗಕ್ಕೆ ಅಪ್ಪು ಇಲ್ಲ ಅನ್ನುವುದನ್ನು ನಂಬಲು ಆಗುತ್ತಿಲ್ಲ. ಶರಣರ ಗುಣ ಮರಣದಲ್ಲಿ ಕಾಣು  ಎನ್ನುವ ಮಾತಿದೆ ಅದು ಅಪ್ಪುವಿನ ಸಾವಿನಲ್ಲಿ ನಿಜವಾಗಿದೆ  ಎಂದು ಕಂಬನಿ ಮಿಡಿದರು. (ಎಸ್.ಎಂ)

Leave a Reply

comments

Related Articles

error: