ಕರ್ನಾಟಕಪ್ರಮುಖ ಸುದ್ದಿ

ಬದಲಾವಣೆ ಮೂಲಕ ಪ್ರಯತ್ನಶೀಲರಾಗೋಣ : ಎಂ.ನಂಜುಡಸ್ವಾಮಿ

ಸಾಕ್ಷರತಾ ಕಲಿಕಾ ಕೇಂದ್ರ ಉದ್ಘಾಟನೆ

ರಾಜ್ಯ(ದಾವಣಗೆರೆ), ನ.3 :- ಕಲಿಕೆಯಿಂದ ಬದಲಾವಣೆಗೆ ಸಾಕಷ್ಟು ಅವಕಾಶಗಳಿದ್ದು, ಈ ದಿಶೆಯಲ್ಲಿ ನಾವು ಮೊದಲು ಬದಲಾಗಬೇಕು. ಬದಲಾವಣೆ ಮೂಲಕ ಪ್ರಯತ್ನಶೀಲರಾಗಬೇಕು ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಪೊಲೀಸ್ ಮಹಾನಿರೀಕ್ಷಕರಾದ ಎಂ.ನಂಜುಡಸ್ವಾಮಿ ಹೇಳಿದರು.
ಸೋಮವಾರ ಕನ್ನಡ ರಾಜ್ಯೋತ್ಸವ ಅಂಗವಾಗಿ ಲೋಕಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ದ ಕಲಿಕೆಯಿಂದ ಬದಲಾವಣೆ ಸಾಕ್ಷರತಾ ಕಾರ್ಯಕ್ರಮದ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರಾಗೃಹದಲ್ಲಿರುವ ಬಂಧಿಗಳು ಸಾಕ್ಷರರಾಗಲು ಉತ್ತಮ ಅವಕಾಶವನ್ನು ಸರ್ಕಾರದಿಂದ ಕಲ್ಪಿಸಲಾಗುತ್ತಿದ್ದು, ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಬೇಕು. ಅನಕ್ಷರಸ್ಥ ಬಂಧಿಗಳು ಬಿಡುಗಡೆಯಾಗುವುದರೊಳಗಾಗಿ ಅಕ್ಷರಸ್ಥನನ್ನಾಗಿ ಮಾಡುವುದೇ ಈ ಕಾರ್ಯಕ್ರಮದ ಗುರಿಯಾಗಿದ್ದು, ಎಲ್ಲಾ ಬಂಧಿಗಳು ಮನಸ್ಸಿಟ್ಟು ಕಲಿಕೆ ಕಡೆ ಗಮನಹರಿಸಬೇಕು. ಮನಸ್ಸಿನಿಂದ ಕಲಿತರೆ ಯಾವುದೂ ಅಸಾಧ್ಯವಿಲ್ಲ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರವೀಣ್ ನಾಯ್ಕ ಮಾತನಾಡಿ, ಕಲಿಕಾ ಕೇಂದ್ರದ ಸದುಪಯೋಗ ಪಡೆದು ಸಾಕ್ಷರರಾಗಿ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಬೇಕು ಎಂದರು.
ಕಾರಾಗೃಹದ ಅಧೀಕ್ಷಕರಾದ ಕರ್ಣ.ಬಿ.ಕ್ಷತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಂಧಿಗಳು ಕಲಿಕೆ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಅಕ್ಷರಸ್ಥ ಬಂಧಿಗಳು ಅನಕ್ಷರಸ್ಥ ಬಂಧಿಗಳ ಕಲಿಕೆ ಚಟುವಟಿಕೆಗಳಲ್ಲಿ ನೆರವಾಗಲಿರುವುದು ವಿಶೇಷವಾಗಿದ್ದು, ಅನಕ್ಷರಸ್ಥರು ಮನಸ್ಸಿಟ್ಟು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಕ್ಷರತಾ ಕಲಾ ತಂಡದವರು ಸಾಕ್ಷರತಾ ಗೀತೆಗಳನ್ನು ಹಾಡಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಎಂ.ಗುರುಸಿದ್ಧ ಸ್ವಾಮಿ ಉಪನ್ಯಾಸ ನೀಡಿದರು. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಟಿ.ಅಂಬಣ್ಣ ಸ್ವಾಗತಿಸಿದರು. ಆರ್.ಗಂಗಾಧರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರಾಗೃಹ ಶಿಕ್ಷಕ ಐ.ಎಂ.ಶಶಿಕುಮಾರ ಮತ್ತು ಯುವ ಸ್ಪಂದನದ ಜಿ.ಎನ್.ನೇತ್ರಾವತಿ, ಷಣ್ಮುಖಪ್ಪ, ಕಾರಾಗೃಹದ ಜೈಲರ್‍ಗಳಾದ ಎಂ.ಜಿ.ಬಂಗಾರಿ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: