
ಮೈಸೂರು
ಅಂಗಡಿಗೆ ಬಂದು ಭೇಟಿ ಮಾಡುತ್ತೇನೆ ಎಂದಿದ್ದರು ; ಈಗ ಅವರೇ ಇಲ್ಲ’ ಮೈಸೂರಿನಲ್ಲಿ ಅಪ್ಪು ಅಭಿಮಾನಿ ಕಂಬನಿ
ಮೈಸೂರು,ನ.4:- ಚಂದನವನದ ನಟ ಪುನೀತ್ ರಾಜ್ ಕುಮಾರ್ ಇತ್ತೀಚೆಗೆ ನಿಧನರಾಗಿದ್ದು, ಅಭಿಮಾನಿಗಳಿಗೆ ಸಾಕಷ್ಟು ನೋವಾಗಿದೆ. ಅಕಾಲಿಕ ಮರಣದಿಂದಾಗಿ ಲಕ್ಷಾಂತರ ಅಭಿಮಾನಿಗಳ ಕನಸು ಕೂಡ ನುಚ್ಚು ನೂರಾಗಿದೆ.
ಮೈಸೂರಿನ ದೇವರಾಜ ಮೊಹಲ್ಲಾದಲ್ಲಿನ ಬಿ.ಕೆ.ಸ್ಟ್ರೀಟ್ ನಲ್ಲಿರುವ ಫ್ರೆಂಡ್ಸ್ ಸ್ಟಿಚ್ ನ ಮಾಲಕ, ಅಗ್ರಹಾರದ ನಿವಾಸಿ ಸಾಗರ್ ಅವರ ಕನಸು ಕೂಡ ನುಚ್ಚು ನೂರಾಗಿದೆ. ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಅಂಗಡಿಗೆ ಬಂದರೆ ಕೇಕ್ ಕತ್ತರಿಸಿ ಬೃಹತ್ ಹಾರ ಹಾಕಿ ಸೆಲಬ್ರೇಟ್ ಮಾಡಬೇಕು ಎಂದುಕೊಂಡಿದ್ದ ಅವರ ಆಸೆ ಆಸೆಯಾಗಿಯೇ ಉಳಿದಿದೆ.
ಸಾಗರ್ ಅವರ ಬಳಿ ಪುನೀತ್ ರಾಜ್ ಕುಮಾರ್ ಅವರು ಯುವರತ್ನ ಚಿತ್ರದ ಚಿತ್ರೀಕರಣದ ವೇಳೆ ನಿಮ್ಮ ಅಂಗಡಿಗೆ ಬಂದು ನಿಮ್ಮ ಬಳಿ ಬಟ್ಟೆ ಹೊಲಿಸುವುದಾಗಿ ಹೇಳಿದ್ದರಂತೆ. ಪೃಥ್ವಿ ಸಿನಿಮಾ ವೇಳೆಯೂ ಇಲ್ಲಿಯೇ ಪುನೀತ್ ರಾಜ್ ಕುಮಾರ್ ಬಟ್ಟೆ ಹೊಲಿಸಿದ್ದರಲ್ಲದೆ, ಇನ್ನೊಮ್ಮೆ ಬರುವುದಾಗಿ ತಿಳಿಸಿದ್ದರಂತೆ. ಇದೀಗ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ.
ಈ ಕುರಿತು ಸಾಗರ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಪೃಥ್ವಿ ಚಿತ್ರದಿಂದ ನಮಗೆ ಅಪ್ಪು ಪರಿಚಯವಾದರು. ಡಬ್ಬಲ್ ರೋಡ್ ನಲ್ಲಿ ಸತೀಶ ಅಂತ ಇದ್ದಾರೆ ಅವರ ಮೂಲಕ ಅಪ್ಪು ಪರಿಚಯವಾದರು. ಮೈಸೂರಿಗೆ ಪ್ರತಿ ಸಲ ಬಂದಾಗಲು ಸತೀಶ್ ಕರೆ ಮಾಡುತ್ತಿದ್ದರು. ನಾನು ಹೋಗಿ ಭೇಟಿಯಾಗುತ್ತಿದ್ದೆ. ಹೀಗೆ ‘ಫೃಥ್ವಿ’ ಫಿಲ್ಮ್ ಗೆ ಅರ್ಜೆಂಟ್ ಒಂದು ಶರ್ಟ್ ಬೇಕು ಅಂದ ತಕ್ಷಣ ಸತೀಶ್ ಅವರು ಕರೆದುಕೊಂಡು ಹೋಗಿದ್ದರು. ಶರ್ಟ್ ರೆಡಿ ಮಾಡಿ ಕೊಟ್ಟಿದ್ದೆ. ಶರ್ಟ್ ತೆಗೆದುಕೊಂಡು ಹೋಗಿ ಕೊಟ್ಟಾಗ ಶರ್ಟ್ ತುಂಬಾ ಚೆನ್ನಾಗಿ ಆಗಿದೆ. ಪಿಟ್ಟಿಂಗ್ ಸರಿಯಾಗಿ ಇದೆ. ಒಂದಲ್ಲ, ಒಂದು ದಿನ ನಿಮ್ಮ ಅಂಗಡಿಗೆ ಬಂದು ಭೇಟಿ ಮಾಡುತ್ತೇನೆ ಎಂದಿದ್ದರು. ಕೇಕ್, ಹಾರ ತಂದು ಭರ್ಜರಿಯಾಗಿ ಸೆಲೆಬ್ರೆಟ್ ಮಾಡಬೇಕು ಅಂತ ಅಂದುಕೊಂಡಿದ್ದೆ. ಆದರೆ ಅವರೇ ಇಲ್ಲ ಈಗ. ‘ಯುವರತ್ನ’ ಚಿತ್ರದ ಚಿತ್ರೀಕರಣ ವೇಳೆ ಅವರನ್ನು ಭೇಟಿ ಮಾಡಲು ಹೋಗಿದ್ದೆ. ಅವರು ಚಿತ್ರೀಕರಣ ಮುಗಿಸಿ ಬಂದು ಅವರ ಜೊತೆ ನನ್ನ ಫೋಟೋ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಿದ್ದರು. ಅದನ್ನು ಅವರೇ ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರು ಎಂದು ಗದ್ಗದಿತರಾದರು. ಅವರು ಎಲ್ಲೂ ಹೋಗಿಲ್ಲ. ನಮ್ಮ ಜೊತೆ ನಮ್ಮ ಅಂಗಡಿಯಲ್ಲೇ ಇದ್ದಾರೆ. ಪ್ರತದಿನ ಬೆಳಿಗ್ಗೆ ಬಂದ ತಕ್ಷಣ ಅವರ ಫೋಟೋಕ್ಕೆ ಒಂದು ಹೂ ಹಾಕಿಯೇ ನಾನು ನನ್ನ ದಿನದ ಕೆಲಸ ಆರಂಭಿಸುತ್ತೇನೆ. ಅವರ ಜನ್ಮದಿನದಂದು ನಾನೂ ಕೂಡ ನೇತ್ರದಾನ ಮಾಡುತ್ತೇನೆ ಎಂದು ತಿಳಿಸಿದರು.
ಈಗಲೂ ಕೂಡ ಅಪ್ಪು ಅಭಿಮಾನಿಗಳಲ್ಲಿ ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.