ಮೈಸೂರು

ಕಾಂಗ್ರೆಸ್ ಭವನ ನಿವೇಶನ ಹಿಂಪಡೆಯುವಂತೆ ರಕ್ಷಣಾ ವೇದಿಕೆ ಒತ್ತಾಯ

ಮೈಸೂರು,ಮೇ.5 : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಿಬಂಧನೆಗಳನ್ನು ಗಾಳಿಗೆ ತೂರಿ ಕಾಂಗ್ರೆಸ್ ಭವನ ನಿರ್ಮಿಸುತ್ತಿರುವ ನಿವೇಶನವನ್ನು ಹಿಂಪಡೆದು ಕೇಂದ್ರ ರೈಲ್ವೆ ನಿಲ್ದಾಣ ವಿಸ್ತರಣೆಗೆ ಬಳಸಿಕೊಳ್ಳುವಂತೆ ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮಕುಮಾರ್ ಒತ್ತಾಯಿಸಿದರು.

ಶುಕ್ರವಾರ, ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಸುಮಾರು 11 ಸಾವಿರ ಚದರ ಅಡಿ ನಿವೇಶನವನ್ನು ಮಾಲೀಕರಾದ ಭೂದೇವಿ ಫಾರಂನವರಿಂದ ಸ್ವಾಧೀನಪಡಿಸಿಕೊಂಡು 1967ರಲ್ಲಿ ವಾರ್ಷಿಕ ರೂ.12ರೂ ನಂತೆ ಸಿಐಟಿಬಿಯವರು ಡಿ.ದೇವರಾಜ ಅರಸ್ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ದತ್ತಿಗೆ ಗುತ್ತಿಗೆಯಾಧಾರದಲ್ಲಿ ನೀಡಿತ್ತು. ಸಂಸ್ಥೆಯು ಷರತ್ತುಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 1980ರಲ್ಲಿ ನಗರ ಜಿಲ್ಲಾ ಕಾಂಗ್ರೆಸ್ ಕಮಿಟಿಗೆ ಮಂಜೂರು ಮಾಡಿತ್ತು, ಅಂದಿನಿಂದ ಇಂದಿನವರೆಗೆ ಸುಮಾರು 37 ವರ್ಷಗಳ ಕಾಲ ನಿವೇಶನವನ್ನು ಬಳಸಿಕೊಂಡಿದ್ದಲ್ಲದೇ ಪ್ರಾಧಿಕಾರದ ನಿಬಂಧನೆಗಳನ್ನು ಮೀರಿದೆ, ಇಂದು ಏಕಾಏಕಿ ಭವನ ನಿರ್ಮಾಣಕ್ಕೆ ಮುಂದಾಗಿದ್ದು ಇದು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ನಿವೇಶನದ ಮಂಜೂರಾತಿಯನ್ನು ರದ್ದುಗೊಳಿಸಿ ರೈಲ್ವೆ ಇಲಾಖೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿದರು.

ಗುತ್ತಿಗೆ ನಿಯಮಗಳನ್ನು ಉಲ್ಲಂಘಿಸಿ ಕಾಂಗ್ರೆಸ್ ಕಮಿಟಿ ಕಾನೂನು ಬಾಹಿರವಾಗಿ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಅಕ್ಷಮ್ಯ, 2012ರಲ್ಲಿಯೇ ರೈಲ್ವೆ ಇಲಾಖೆಯು ಸ್ಥಳದ ಅಗತ್ಯತೆಗೆ ಅಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷ್ಯಿಸಿದೆ, ಆದ್ದರಿಂದ ತಕ್ಷಣವೇ ಆ ಜಾಗವನ್ನು ರೈಲ್ವೆ ಇಲಾಖೆಗೆ ವರ್ಗಾಯಿಸಿ ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಬೇಕೆಂದು ಆಗ್ರಹಿಸಿದರು. ಪ್ರಭಾವಿ ರಾಜಕೀಯ ಪಕ್ಷಕ್ಕೆ ಸೇರಿದ ಜಾಗವೆಂದು ಮೂಡಾ ಕ್ರಮ ಜರುಗಿಸದೆ ಕೈಕಟ್ಟಿ ಕುಳಿತಿದೆ ಹಾಗೂ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತನ್ನ ಪ್ರಭಾವದಿಂದ ಕಾನೂನು ಬಾಹಿರ ಭವನ ನಿರ್ಮಿಸುತ್ತಿದ್ದು ಜಿಲ್ಲಾಧಿಕಾರಿಗಳು ತಕ್ಷಣವೇ ಈ ಬಗ್ಗೆ ಸೂಕ್ತ ಕಠಿಣ ಕ್ರಮ ಜರುಗಿಸಬೇಕೆಂದು ಕೋರಿದರು. ಮನವಿಯನ್ನು ಮುಂದಿನ 15 ದಿನಗಳೊಳಗೆ ಪುರಸ್ಕರಿಸಿ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಉಗ್ರ ಕಾನೂನು ಹೋರಾಟಕ್ಕೆ ಮೈಸೂರು ರಕ್ಷಣಾ ವೇದಿಕೆ ಮುಂದಾಗಲಿದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕಾರ್ಯದರ್ಶಿ ರಾಕೇಶ್ ಭಟ್, ಉಪಾಧ್ಯಕ್ಷ ಕುಮಾರ್ ಗೌಡ, ಸಲಹೆಗಾರ ಎಂ.ಎ.ಮೋಹನ್ ಮತ್ತು ಚನ್ನಬಸವಣ್ಣ  ಹಾಜರಿದ್ದರು. -(ವರದಿ: ಕೆ.ಎಂ.ಆರ್-ಎಸ್.ಎಚ್)

Leave a Reply

comments

Related Articles

error: