ಕರ್ನಾಟಕಪ್ರಮುಖ ಸುದ್ದಿ

ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನೀತಿ ಸಂಹಿತೆ ಕಟ್ಟುನಿಟ್ಟಿನಿಂದ ಜಾರಿ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ರಾಜ್ಯ(ಶಿವಮೊಗ್ಗ), ನ.110 : -ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರ ದ್ವೈ ವಾರ್ಷಿಕ ಚುನಾವಣೆಯಲ್ಲಿ ಸಾರ್ವತ್ರಿಕ ಮತದಾನ ರೀತಿಯಲ್ಲಿ ಮಾದರಿ ನೀತಿ ಸಂಹಿತೆ ಅನ್ವಯವಾಗಲಿದ್ದು, ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ನೀತಿ ಸಂಹಿತೆ ತಕ್ಷಣದಿಂದ ಜಾರಿಗೆ ಬಂದಿದ್ದು, ಡಿಸೆಂಬರ್ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದರು.

ಮಾದರಿ ನೀತಿ ಸಂಹಿತೆ ಜನಪ್ರತಿನಿಧಿಗಳಿಗೆ ಮಾತ್ರವಲ್ಲದೆ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ನೀತಿ ಸಂಹಿತೆಗೆ ಯಾವುದೇ ಧಕ್ಕೆಯಾಗದಂತೆ ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಯನ್ನು ವ್ಯವಸ್ಥಿತವಾಗಿ ನಡೆಸಲು ನೋಡಲ್ ಅಧಿಕಾರಿಗಳು ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

ಮತದಾರರ ವಿವರ: ಲೋಕಸಭಾ, ರಾಜ್ಯಸಭಾ, ವಿಧಾನಸಭಾ, ವಿಧಾನ ಪರಿಷತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾನದ ಹಕ್ಕು ಹೊಂದಿರುತ್ತಾರೆ. ಮತದಾರರ ಪಟ್ಟಿಯ ಪರಿಶೀಲನೆ ಕಾರ್ಯವನ್ನು ನಿಗದಿತ ನಮೂನೆಯಲ್ಲಿ ಕೈಗೊಂಡು ಅರ್ಹ ಮತದಾರರ ವಿವರಗಳನ್ನು ತಕ್ಷಣ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ 7 ತಾಲೂಕು ಹಾಗೂ ದಾವಣಗೆರೆ ಜಿಲ್ಲೆಯ 3 ತಾಲೂಕುಗಳು ಪ್ರಸ್ತುತ ಚುನಾವಣೆಯ ವ್ಯಾಪ್ತಿಯಲ್ಲಿದ್ದು, ಒಟ್ಟು 4129 ಮತದಾರರು ಇದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ 23 ಪುರಸಭೆ ಸದಸ್ಯರು ಹಾಗೂ 732 ಗ್ರಾಮ ಪಂಚಾಯತ್ ಸದಸ್ಯರು, ಹೊನ್ನಾಳಿ ತಾಲೂಕಿನ 18 ಪುರಸಭೆ ಹಾಗೂ 323 ಗ್ರಾ.ಪಂ ಸದಸ್ಯರು, ನ್ಯಾಮತಿ ತಾಲೂಕಿನ 190 ಗ್ರಾ.ಪಂ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಈ ಮೂರು ತಾಲೂಕುಗಳಲ್ಲಿ ಒಟ್ಟು 41 ಪುರಸಭೆ ಸದಸ್ಯರು ಹಾಗೂ 1245 ಗ್ರಾ.ಪಂ ಸದಸ್ಯರು ಸೇರಿದಂತೆ 1286 ಮತದಾರರು ಇದ್ದಾರೆ.

ಶಿವಮೊಗ್ಗ ತಾಲೂಕಿನಲ್ಲಿ ಮಹಾನಗರ ಪಾಲಿಕೆಯ 35 ಸದಸ್ಯರು ಹಾಗೂ 456 ಗ್ರಾ.ಪಂ ಸದಸ್ಯರು, ಭದ್ರಾವತಿ ತಾಲೂಕಿನ ನಗರಸಭೆಯ 35 ಸದಸ್ಯರು, 441 ಗ್ರಾ.ಪಂ ಸದಸ್ಯರು, ಸಾಗರ ತಾಲೂಕಿನ 31 ನಗರ ಸಭೆ ಸದಸ್ಯರು, 11 ಪಟ್ಟಣ ಪಂಚಾಯತ್ ಸದಸ್ಯರು, 368 ಗ್ರಾ.ಪಂ ಸದಸ್ಯರು, ಶಿಕಾರಿಪುರ ತಾಲೂಕಿನ 23 ಪುರಸಭೆ ಸದಸ್ಯರು, 17 ಪಟ್ಟಣ ಪಂಚಾಯತ್ ಸದಸ್ಯರು ಹಾಗೂ 453 ಗ್ರಾ.ಪಂ ಸದಸ್ಯರು, ತೀರ್ಥಹಳ್ಳಿ ತಾಲೂಕಿನ 15 ಪಟ್ಟಣ ಪಂಚಾಯತ್ ಸದಸ್ಯರು ಮತ್ತು 336 ಗ್ರಾಮ ಪಂಚಾಯತ್ ಸದಸ್ಯರು, ಸೊರಬ ತಾಲೂಕಿನ 12 ಪ.ಪಂ ಸದಸ್ಯರು ಮತ್ತು 304 ಗ್ರಾ.ಪಂ ಸದಸ್ಯರು ಹಾಗೂ ಹೊಸನಗರ ತಾಲೂಕಿನ 11 ಪ.ಪಂ ಸದಸ್ಯರು ಹಾಗೂ 295 ಗ್ರಾ.ಪಂ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 2653 ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ 2843 ಮತದಾರರು ಇದ್ದಾರೆ.

ಒಟ್ಟಾರೆಯಾಗಿ ಚುನಾವಣೆಯಲ್ಲಿ ಗ್ರಾಮ ಪಂಚಾಯತ್‍ನ 3898 ಸದಸ್ಯರು ಸೇರಿದಂತೆ 4129 ಮತದಾರರು ಮತದಾನದ ಅವಕಾಶ ಹೊಂದಿದ್ದಾರೆ.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಶಿವಮೊಗ್ಗ ಉಪವಿಭಾಗಾಧಿಕಾರಿ ಜಿ.ಪ್ರಕಾಶ್, ಸಾಗರ ಉಪವಿಭಾಗಾಧಿಕಾರಿ ನಾಗರಾಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: