
ಕರ್ನಾಟಕಪ್ರಮುಖ ಸುದ್ದಿಮೈಸೂರು
ಬಿಟ್ ಕಾಯಿನ್ : ಸಮಗ್ರ ತನಿಖೆಗೆ ವಾಟಾಳ್ ನಾಗರಾಜ್ ಒತ್ತಾಯ
ಮೈಸೂರು, ನ.11:- ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ನವರು ಮೈಸೂರು ಭಾಗದಲ್ಲಿ ನನಗೆ ಒಂದು ಸ್ಥಾನ ಬಿಟ್ಟು ಕೊಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
ಮೈಸೂರಿನಲ್ಲಿಂದು ಮಾತನಾಡಿದ ಅವರು ಹಿಂದಿನಿಂದಲೂ ನಾನು ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದೇನೆ. ಎಸ್.ಎಂ ಕೃಷ್ಣ ರಾಜಶೇಖರ ಮೂರ್ತಿ, ಧೃವನಾರಾಯಣ್ ಅವರಿಗೆ ಮತ ಹಾಕಿದ್ದೇನೆ ಎಂದರು.
ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ನನ್ನನ್ನು ಪರಿಷತ್ ಗೆ ನಾಮನಿರ್ದೇಶನ ಮಾಡಲು ಮೈಸೂರು ಭಾಗದ ಜನರು ಒತ್ತಾಯ ಮಾಡಿದ್ದರು. ಹೀಗಾಗಿ ಮೈಸೂರಿನ ಎರಡು ಸ್ಥಾನಗಳಲ್ಲಿ ನನಗೆ ಒಂದು ಸ್ಥಾನವನ್ನು ಕೊಟ್ಟು ಬೆಂಬಲಿಸಬೇಕು. ನಾನು 60 ವರ್ಷಗಳಿಂದ ಕನ್ನಡ ಪರ ಹೋರಾಟಗಾರ. ನಾನು ಕಾಂಗ್ರೆಸ್ ನಿಂದ ಟಿಕೇಟ್ ಕೇಳುವುದು ಸೂಕ್ತವಲ್ಲ ಎಂದು ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆ ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಉಚಿತ ಕಡಲೆಕಾಯಿ ನೀಡುವ ಮೂಲಕ ಪ್ರತಿಭಟನೆ ನಡೆಸಿದರು.
ಮೈಸೂರಿನ ಆರ್ ಗೇಟ್ ಬಳಿ ಸಾರ್ವಜನಿಕರಿಗೆ ಉಚಿತವಾಗಿ ಕಡಲೆಕಾಯಿ ನೀಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹೋಟೆಲ್ ಊಟ ತಿಂಡಿಗಳಲ್ಲೂ ಬೆಲೆ ಏರಿಕೆಯಾಗಿದೆ ಹೀಗಾಗಿ ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪ್ರತಿಭಟಿಸಿದರು.
ಬಿಟ್ ಕಾಯಿನ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಾಟಾಳ್ ನಾಗರಾಜ್ ಅಯ್ಯೋ ನನಗೆ ಬಿಟ್ ಕಾಯನ್ ಅಂದ್ರೇನೇ ಗೊತ್ತಿಲ್ಲ. ಅದೇನಿದ್ದರೂ ದರೋಡೆಕೋರರಿಗೆ ಮಾತ್ರ ಗೊತ್ತು ಎಂದರು.
ಬಿಟ್ ಕಾಯಿನ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕು. ಯಾರೇ ಶಾಮೀಲಾಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಿಟ್ ಕಾಯಿನ್ ಅಂದರೆ ಅದರ ಸ್ವರೂಪ ಅರ್ಥ ಮಾಡಿಕೊಳ್ಳೋದೆ ಒಂದು ದೊಡ್ಡ ಸಾಹಸವಾಗಿದೆ. ಇದು ದರೋಡೆಕೋರರಿಗೆ ಮಾತ್ರ ಗೊತ್ತಿರೊದು , ಬಿಟ್ ಕಾಯಿನ್ ಪ್ರಪಂಚದ ಉದ್ದಗಲಕ್ಕೂ ನಡೆದಿದೆ, ಈ ಸೋಂಕು ಕರ್ನಾಟಕಕ್ಕೂ ಬಂದುಬಿಟ್ಟಿದೆ. ಇದು ಸಮಗ್ರವಾಗಿ ತನಿಖೆಯಾಗಲಿ, ಕೇಂದ್ರ ಸರ್ಕಾರವೇ ತನಿಖೆಗೆ ಆದೇಶ ಕೊಡಲಿ, ತನಿಖೆ ಸಿಬಿಐ ಅವರಿಗೆ ವಹಿಸಿ ಎಂದು ಒತ್ತಾಯಿಸಿದರು. (ಎಸ್.ಎಂ,ಎಸ್.ಎಚ್)