ಮೈಸೂರು

ಜಿ.ಟಿ.ದೇವೇಗೌಡರ ಕುಟುಂಬದವರೇ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾದರೂ ಅಚ್ಚರಿಪಡಬೇಕಿಲ್ಲ : ಶಾಸಕ ಸಾ.ರಾ.ಮಹೇಶ್

ಮೈಸೂರು,ನ.13:-   ನಮ್ಮ ನಾಯಕರಾದ ಶಾಸಕ ಜಿ.ಟಿ.ದೇವೇಗೌಡರ ನೇತೃತ್ವದಲ್ಲೇ ವಿಧಾನಪರಿಷತ್ ಚುನಾವಣೆ ಎದುರಿಸಲಿದ್ದು, ಅವರ ಕುಟುಂಬದವರೇ ಅಭ್ಯರ್ಥಿ ಆದರೂ ಆಶ್ಚರ್ಯ ಪಡಬೇಕಿಲ್ಲ ಎಂದು    ಶಾಸಕ ಸಾ.ರಾ.ಮಹೇಶ್ ಮಾರ್ಮಿಕವಾಗಿ  ನುಡಿದರು.

ಇಂದು ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ  ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ್ ಅವರನ್ನು ಜಿ.ಡಿ.ಹರೀಶ್ ಗೌಡ, ಮಾಜಿ ಸಂಸದರ ಪುತ್ರ, ಶಾಸಕ ಕೆ.ಮಹದೇವ್ ಅವರ ಪುತ್ರ ಚಾಮುಂಡಿ ಬೆಟ್ಟದಲ್ಲಿ ಬರ ಮಾಡಿಕೊಂಡಿದ್ದಾರೆ. ಹೀಗಾಗಿ ಜಿ.ಟಿ.ದೇವೇಗೌಡರು ಇಂದಿಗೂ ನಮ್ಮ ಪಕ್ಷದ ಶಾಸಕರೇ ಆಗಿದ್ದಾರೆ. ಹೀಗಾಗಿ ಇನ್ನೊಂದೆರಡು ದಿನಗಳಲ್ಲಿ ಪಕ್ಷದ ಸಭೆ ನಡೆಸಿ ಅವರ ಕುಟುಂಬದಿಂದಲೇ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಚರ್ಚೆಗಳು ನಡೆಯುತ್ತವೆ ಎಂದರು.

ಅವರು ಇಂದಿಗೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹೀಗಾಗಿ ಅವರಿಗಾಗಿ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ. ಶೀಘ್ರವೇ ಅವರೊಂದಿಗೂ ಚರ್ಚಿಸಲಾಗುವುದು. ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಸುತ್ತೇವೆ. ಕಾಂಗ್ರೆಸ್ ಗೆ ನಮ್ಮ ಪಕ್ಷದ ಶಾಸಕರ ನೇತೃತ್ವದಲ್ಲಿ ಚುನಾವಣೆ ಎದುರಿಸುವ ದುಸ್ಥಿತಿ ಬಂದಿದೆ ಎಂದು ವ್ಯಂಗ್ಯ ವಾಡಿದರು.

ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಜೆಡಿಎಸ್ ತೊರೆಯಲು ಮುಂದಾಗಿರುವ ಹಿನ್ನೆಲೆ ಪ್ರತಿಕ್ರಿಯಿಸಿ ಸಂದೇಶ್ ನಾಗರಾಜ್ ಅವರು ಯಾವತ್ತು ಚುನಾವಣೆ ಆಯಿತೋ ಅಂದಿನಿಂದಲೂ ನಮ್ಮ ಜೊತೆ ಎಲ್ಲಿದ್ದಾರೆ. ಅವರು ನಮ್ಮ ಜೊತೆ ಗುರ್ತಿಸಿಕೊಂಡಿಲ್ಲ. ಈಗ ಆ ವಿಚಾರ ಅಪ್ರಸ್ತುತ. ಸಂದೇಶ್ ನಾಗರಾಜ್ ರಿಂದ ತೆರವಾಗುವ ಸ್ಥಾನಕ್ಕೆ ಎದುರಾಗಿರುವ ಚುನಾವಣೆಗೆ ಸಜ್ಜಾಗಿದ್ದೇವೆ. ನಮ್ಮ ಪಕ್ಷದಲ್ಲಿ ಐದು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕಡೆಗೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆಯಾಗಬಹುದು. ನಮ್ಮ ಪಕ್ಷದ ಜನಪ್ರತಿನಿಧಿಗಳು ಮೈಸೂರು ಜಿಲ್ಲೆಯಲ್ಲಿ ಹೆಚ್ಚಿರುವುದರಿಂದ ಗೆಲ್ಲುತ್ತೇವೆ ಎಂದರು.

ಬಿಟ್ ಕಾಯಿನ್ ಹಗರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ ನನಗೆ ಬಿಟ್ ಕಾಯಿನ್ ಅಂದರೇನೆ ಗೊತ್ತಾಗಿದ್ದು 15 ದಿನದ ಹಿಂದೆ. ನನಗೆ ಬಿಟ್ ಕಾಯಿನ್ ಗೊತ್ತಿಲ್ಲ‌. ಅದರ ಬೆಲೆಯೂ ಗೊತ್ತಿಲ್ಲ. ಜನರಿಗೆ ವೈಟ್ ಮನಿ, ಬ್ಲಾಕ್ ಮನಿ ಗೊತ್ತಿತ್ತು. ಆದರೆ ಬಿಟ್ ಮನಿ ಗೊತ್ತಿರಲಿಲ್ಲ. ಈಗ ಗೊತ್ತಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಆರ್. ಲಿಂಗಪ್ಪ ಇನ್ನಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: