ಮೈಸೂರು

ಉದಾತ್ತ ವ್ಯಕ್ತಿತ್ವದ ಯುವಕರಿಂದ ಸುಭಿಕ್ಷವಾದ ಸಮಾಜ ನಿರ್ಮಾಣ ಸಾಧ್ಯ : ಕರ್ನಲ್ (ಪ್ರೊ.) ವೈ.ಎಸ್. ಸಿದ್ದೇಗೌಡ

ಮೈಸೂರು, ನ.13 :- ಶಿಕ್ಷಣದ ನೈಜವಾದ ಉದ್ದೇಶ ಸದೃಢ ವ್ಯಕ್ತಿಗಳ ನಿರ್ಮಾಣ. ಶೈಕ್ಷಣಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಸದೃಢರಾಗಿರುವವರು ಹಾಗೂ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳನ್ನಾಗಿ ವಿದ್ಯಾರ್ಥಿಗಳನ್ನು ರೂಪಿಸಬೇಕು. ಅಂತಹ ವ್ಯಕ್ತಿಗಳನ್ನು, ಸ್ನೇಹಿತರು, ಕುಟುಂಬ, ಸಮಾಜ ಹಾಗೂ ದೇಶವೇ ಬಯಸುತ್ತದೆ. ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಅಳವಡಿಕೆ ಉತ್ತಮವಾದ ನಿರ್ಧಾರ ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಕರ್ನಲ್ (ಪ್ರೊ.) ವೈ.ಎಸ್. ಸಿದ್ದೇಗೌಡ ಅವರು ನುಡಿದರು.

ಅವರು ಇಂದು ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ (ಸ್ವಾಯತ್ತ) 2021-22ನೇ ಸಾಲಿನ ಪೋಷಕರ ಸಮಾವೇಶದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಉದ್ಘಾಟನಾ ಭಾಷಣ ಮಾಡಿದರು. ನೂತನ ಶಿಕ್ಷಣ ನೀತಿ ಸಮಾಜದಿಂದ ಉಪಯೋಗ ಪಡೆದುಕೊಂಡ ಯುವಕರು ಮತ್ತೆ ಸಮಾಜಕ್ಕೆ ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡುವಂತೆ ರೂಪಿಸುವಲ್ಲಿ ಸಫಲಕಾರಿಯಾಗಲಿದೆ ಎಂದು ಆಶಿಸಿದರು. ಯುವಕರು ಆತ್ಮತೃಪ್ತರಾಗಬೇಕು. ತಮ್ಮ ವೃತ್ತಿಪರ ಜೀವನ ಹಾಗೂ ಕೌಟುಂಬಿಕ ಜೀವನದ ಮಧ್ಯೆ ಸಾಮರಸ್ಯ ಸಾಧಿಸಿ ಸಂತೋಷಕರವಾದ ಜೀವನವನ್ನು ನಡೆಸಬೇಕು ಎಂದು ನುಡಿದರು. ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ, ಮೌಲ್ಯಾಧಾರಿತ ಶಿಕ್ಷಣ ನೀಡಿ. ಯಾವುದೇ ಸಮಸ್ಯೆ ಹೊಸತಲ್ಲ, ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೇ ಇರುತ್ತದೆ ಎಂಬ ಧೋರಣೆಯನ್ನು ರೂಢಿಸಲಿದೆ ಎಂದು ತಿಳಿಸಿದೆ. ಮಕ್ಕಳ ಜೀವನದಲ್ಲಿ ಪೋಷಕರ ಪಾತ್ರ ಅಗಾಧ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ಅವನ ಬಾಲ್ಯದ ಅನುಭವಗಳ ಮೇಲೆ ನಿರ್ಮಿತವಾಗಿರುತ್ತದೆ. ಆದ್ದರಿಂದ ಪೋಷಕರು ತಮ್ಮ ಅತ್ಯುತ್ತಮವಾದ ನಡವಳಿಕೆಯಿಂದ ಒಂದು ಮಾದರಿ ಜೀವನದ ಚಿತ್ರಣವನ್ನು ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಪೋಷಕರ ಸಮಾವೇಶದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪೋಷಕರ ಸಂಘದ ಅಧ್ಯಕ್ಷರಾದ ಶಿವನಾಗಪ್ಪ ಎಸ್. ಅವರು ಮಾತನಾಡಿ, ಖಾಸಗಿ ಸಂಸ್ಥೆಗಳ ಪೈಕಿ ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗೆ ವೈಯುಕ್ತಿಕ ಗಮನ ನೀಡುವಲ್ಲಿ ಮಹಾಜನ ಕಾಲೇಜು ಮುಂಚೂಣಿಯಲ್ಲಿದೆ ಎಂದು ಹೇಳಿದರು. ಪೋಷಕರು ತಮ್ಮ ಮಕ್ಕಳಿಗೆ ದುಬಾರಿಯಾದ ವಾಹನಗಳನ್ನು ಕೊಡಿಸುವ ಬದಲು ಅದೇ ಹಣವನ್ನು ಅವರ ಉಜ್ವಲವಾದ ಭವಿಷ್ಯವನ್ನು ನಿರ್ಮಿಸಲು ಬೇಕಾಗುವಂತಹ ಶಿಕ್ಷಣಕ್ಕೆ ಮೀಸಲಿಡುವಂತೆ ಸೂಚಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಮಹಾಜನ ಕಾಲೇಜು ನಡೆದುಬಂದ ದಾರಿಯನ್ನು ಸ್ಮರಿಸಿ ಸ್ವಾಯತ್ತ ಸಂಸ್ಥೆಯೊಂದರಲ್ಲಿ ವಿದ್ಯಾಭ್ಯಾಸ ಪಡೆಯುವುದರ ಅನುಕೂಲತೆಗಳನ್ನು ತಿಳಿಸಿದರು. ಸ್ವಾಯತ್ತ ಕಾಲೇಜು ಶೈಕ್ಷಣಿಕ ಸ್ವಾತಂತ್ರ್ಯವನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಬೇಕಾಗುವ ಕೌಶಲ್ಯಾಧಾರಿತ ಮತ್ತು ಔದ್ಯೋಗಿಕ ಕ್ಷೇತ್ರ ನಿರೀಕ್ಷಿಸುವಂತಹ ಪಠ್ಯಕ್ರಮ ಹೊಂದಿರುತ್ತದೆ. ಪೋಷಕರ ಪಾತ್ರ ತಮ್ಮ ಮಕ್ಕಳಿಗೆ ವಿದ್ಯಾಸಂಸ್ಥೆಯೊಂದರಲ್ಲಿ ಪ್ರವೇಶಾತಿ ಮಾಡುವುದರೊಂದಿಗೆ ಮುಗಿಯುವುದಿಲ್ಲ ಅವರು ಕಾಲೇಜಿನೊಂದಿಗೆ ನಿರಂತರ ಸಂಪರ್ಕ ಹೊಂದುವುದು ಅತ್ಯವಶ್ಯಕ ಎಂದು ತಿಳಿಸಿ ಬೆಳೆದ ಮಕ್ಕಳನ್ನು ಸ್ನೇಹಿತರಂತೆ ಕಾಣುವುದರಿಂದ ಅವರ ದೈನಂದಿನ ಕಾಲೇಜಿನ ಜೀವನದ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬಹುದು ಎಂದು ಪೋಷಕರಿಗೆ ಕಿವಿ ಮಾತು ಹೇಳಿದರು.
ಮಹಾಜನ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಟಿ. ಮುರಳೀಧರ್ ಭಾಗವತ್ ಮಾತನಾಡಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಹಿನ್ನಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಅಳವಡಿಸಿಕೊಳ್ಳಲು, ಕಾಲೇಜಿಗೆ ಎಲ್ಲಾ ರೀತಿಯ ಬೆಂಬಲ, ಸಹಾಯ ಮತ್ತು ಸೌಕರ್ಯಗಳನ್ನು ಕಾಲೇಜಿಗೆ ಕೊಡುವಲ್ಲಿ ಮಹಾಜನ ವಿದ್ಯಾಸಂಸ್ಥೆಯೂ ಮುಂಚೂಣಿಯಲ್ಲಿರುತ್ತದೆ ಎಂದು ನುಡಿದರು.  ಕೋವಿಡ್-19 ಅಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಯೂ ವಿದ್ಯಾರ್ಥಿಗಳ ಕಲಿಕೆ ನಿರಂತರವಾಗಿರಲೆಂದು ತ್ವರಿತ ಗತಿಯಲ್ಲಿ ಆನ್‍ ಲೈನ್ ಶಿಕ್ಷಣ ವ್ಯವಸ್ಥೆಗೆ ಅಧ್ಯಾಪಕರು ಹೊಂದಿಕೊಂಡಿದ್ದನ್ನು ಸ್ಮರಿಸಿದರು. ಮಹಾಜನ ವಿದ್ಯಾಸಂಸ್ಥೆ ಲಾಭೋದ್ದೇಶವಿಲ್ಲದ ಸಂಸ್ಥೆ, ಶೈಕ್ಷಣಿಕ ಉದ್ದೇಶ ಮಾತ್ರ ಹೊಂದಿಲ್ಲ ಅದೊಂದು ಸಾಂಸ್ಕೃತಿಕ ರಾಯಭಾರಿಯೂ ಹೌದು ಎಂದ ಅವರು  ತಮ್ಮ ಸಂಸ್ಥೆಯ ಪಿಯುಸಿ ಮತ್ತು ಪದವಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರತಿಶತ 95 ಮತ್ತು ಹೆಚ್ಚಿನ ಅಂಕಗಳಿಸಿದಲ್ಲಿ ಅದರ ಮುಂದಿನ ಶೈಕ್ಷಣಿಕ ವರ್ಷ ಅವರಿಗೆ ಉಚಿತ ಶಿಕ್ಷಣವನ್ನು ಕೊಡುವ ಆಶ್ವಾಸನೆಯನ್ನು ನೀಡಿದರು.   ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ, ವಿಕಲ ಚೇತನರಿಗೆ, ಸೈನಿಕರ ಮಕ್ಕಳಿಗೆ, ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕ ಮತ್ತು ಅಧ್ಯಾಪಕೇತರರ ಮಕ್ಕಳಿಗೆ ಅಭಿವೃದ್ದಿ ಶುಲ್ಕದಲ್ಲಿ ವಿನಾಯತಿ ನೀಡಲಾಗುವುದೆಂದು ಘೋಷಿಸಿದರು. ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಉದ್ಯೋಗಸ್ಥರನ್ನಾಗಿ ಮಾಡುವ ಉದ್ದೇಶದಿಂದ ಉನ್ನತ ಶ್ರೇಣಿಯ ಕಂಪನಿಗಳನ್ನು ಕಾಲೇಜಿಗೆ ಕರೆಸುವಲ್ಲಿ ಉದ್ಯೋಗ ಕೋಶ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಎಂಟಿಎ ವಿಭಾಗದ 15 ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗ ಪಡೆದದ್ದನ್ನು ತಿಳಿಸಿದರು. ಸದಾ ವಿದ್ಯಾರ್ಥಿಗಳ ಒಳಿತನ್ನೇ ಬಯಸುವ   ಮುರಳೀಧರ್ ಅವರು ವಿದ್ಯಾರ್ಥಿಗಳು ಉನ್ನತ ಸಾಧನೆಗೈಯಲೆಂದು ಪ್ರೋತ್ಸಾಹಿಸುವ ದೃಷ್ಠಿಯಿಂದ ಈ ಕೊಡುಗೆಯನ್ನು ನೀಡಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳು ಸಂತೋಷದಿಂದ ಸ್ವಾಗತಿಸಿದರು.

ಈ ಸಂದರ್ಭ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಮತ್ತು ಶೈಕ್ಷಣಿಕ ಸಲಹೆಗಾರರಾದ ಡಾ. ಎಸ್.ಆರ್. ರಮೇಶ್ ಅವರು ಉಪಸ್ಥಿತರಿದ್ದರು. ಪೋಷಕರ ಸಂಘದ ಸಂಚಾಲಕರಾದ ಡಾ. ವಿನೋದಮ್ಮ ಸ್ವಾಗತಿಸಿದರು, ಪೂರ್ಣಿಮ ವಂದನಾರ್ಪಣೆ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಅಪಾರ ಸಂಖ್ಯೆಯಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಅಧ್ಯಾಪಕ ಮತ್ತು ಅಧ್ಯಾಪಕೇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: