ಕರ್ನಾಟಕಪ್ರಮುಖ ಸುದ್ದಿಮೈಸೂರು

ಐದನೇ ಸ್ಥಾನ ಪಡೆದ ಸ್ವಚ್ಛನಗರಿ ಮೈಸೂರು – ಬಿಕ್ಕಿ ಬಿಕ್ಕಿ ಅಳಬೇಕಿಲ್ಲ?

ಮೈಸೂರು (ಸುದ್ದಿ ವಿಶ್ಲೇಷಣೆ) ಮೇ 5 :- ನಮ್ಮ ಮೈಸೂರು ನಗರಿಗೆ ಸತತ ಮೂರನೇ ಬಾರಿ ಕೇಂದ್ರ ಸರ್ಕಾರವು ಕೊಟ್ಟಿರುವ ‘ಕರ್ನಾಟಕದಲ್ಲೇ ಸ್ವಚ್ಛ ನಗರ’ ಎನ್ನುವ ಬಿರುದು ಅಂದುಕೊಂಡರೆ ಅದು ಸಂತಸದ ಸಂಗತಿ ಅಲ್ಲವೇ? ನಾವೇನೂ ಬಿಕ್ಕಿ ಬಿಕ್ಕಿ ಅಳಬೇಕಿಲ್ಲ. ಹಿಂದೆ 74 ನಗರಗಳೊಡನೆ ಸ್ಪರ್ಧಿಸಿದ್ದೆವು ಆದರೆ ಈ ಬಾರಿ 441 ನಗರಗಳೊಡನೆ ಸ್ಪರ್ಧೆ ನಡೆದಿತ್ತು. ಅಲ್ಲದೆ ಈ ಬಾರಿಯ ಸ್ಪರ್ಧೆಯ ಮಾನದಂಡಗಳು  ಹೇಗಿದ್ದವು? ಎಲ್ಲೊ ಇದ್ದ ಇಂದೋರ್ ನಗರ ಮೊದಲನೇ ಸ್ಥಾನವನ್ನು ಹೇಗೆ ಗಿಟ್ಟಿಸಿಕೊಂಡಿತು? ಅದಕ್ಕೆ ಕಾರಣಗಳೇನು ಎನ್ನುವುದು ಅಪ್ರಸ್ತುತ.

ಒಟ್ಟಾರೆ ಒಂದು ಬಿರುದು ಬಂದಿದೆ, ಸಂಭ್ರಮಿಸೋಣ. ಈ ಬಿರುದಿಗೆ ಕಾರಣಕರ್ತೃಗಳಾದ ಪೌರಕಾರ್ಮಿಕರಿಗೆ, ಈ ನಿಟ್ಟಿನಲ್ಲಿ ಶ್ರಮಿಸಿದ ಅಧಿಕಾರಿ ವರ್ಗದವರಿಗೆ ಮತ್ತು ಸಂಬಂಧಪಟ್ಟ ಎಲ್ಲರಿಗೂ ಮೈಸೂರು ನಗರದ ನಾಗರಿಕರ ಪರವಾಗಿ ಅಭಿನಂದನೆಗಳು.

ಮುಂದಿನ ವರ್ಷಗಳಲ್ಲಿ ನಮ್ಮ ನಗರಿ ಪುನಃ ಮೊದಲನೇ ಸ್ಥಾನಕ್ಕೆ ಜಿಗಿಸುವ ನಿಟ್ಟಿನಲ್ಲಿ ಶ್ರಮಿಸೋಣ, ಮೈಸೂರಿನ ಕೊಪ್ಪಲು, ಕೇರಿಗಳು ಮತ್ತು ಮೊಹಲ್ಲಾಗಳಲ್ಲಿಯೂ ಸಹ ಸ್ವಚ್ಛತೆ ಪಸರಿಸುವಂತೆ ನಾಗರೀಕರರಿಗೆ ಮನವರಿಕೆ ಮಾಡಿಕೊಟ್ಟು, ಅವರೂ ಸಹ ಸಕ್ರಿಯವಾಗಿ, ಮನೆ ಮನೆ ತ್ಯಾಜ್ಯವನ್ನು ಹಸಿ ಕಸ ಮತ್ತು ಒಣ ಕಸಗಳಾಗಿ ವಿಂಗಡಿಸಿ ಪೌರ ಕಾರ್ಮಿಕರಿಗೆ ಕೊಡುವ ನಿಟ್ಟಿನಲ್ಲಿ ಮನಃಪೂರ್ತಿ ತಮ್ಮನ್ನು ತಾವೇ ತೊಡಗಿಸಿಕೊಂಡರೆ, ಇದು ಸಾಧ್ಯ. ಅಂತೆಯೇ ಪಾಲಿಕೆಯೂ ಸಹ ಪೌರ ಕಾರ್ಮಿಕರು ಮನಃಪೂರ್ತಿ ಕಸದ ವಿಲೇವಾರಿ ಬಗ್ಗೆ ತೊಡಗಿಸಿಕೊಳ್ಳಲು ಸಹಾಯವಾಗುವಂತೆ ಅವರಿಗೆ ಬೇಕಾದ ಗ್ಲೋವ್ಸ್, ಬೂಟ್ಸ್, ಕಸ ಸಾಗಾಣಿಕೆಗೆ ಸುಲಭವಾಗುವಂತೆ ಟೈಯರ್‍ಗಳು ಇರುವ ತಳ್ಳುವ ಗಾಡಿಗಳು ಮತ್ತು ಕಾಲ ಕಾಲಕ್ಕೆ ಅವುಗಳ ನಿರ್ವಹಣೆ ಮುಂತಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟರೆ, ಅವರಲ್ಲಿಯೂ ಸಹ ಇಂದಿಗಿಂತ ಹೆಚ್ಚಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.

ಇವುಗಳ ಬಗ್ಗೆ ಪಾಲಿಕೆಯೂ ಸಹ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ಭಾರತೀಯ ಗುಣಮಟ್ಟ ಮಂಡಳಿ ಈ ಸ್ಪರ್ಧೆಯ ಬಗ್ಗೆ ವಿಧಿಸಿರುವ ಮಾನದಂಡಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಅವರೂ ಸಹ ಈ ಸ್ಪರ್ಧೆಯಲ್ಲಿ ಸಕಾರಾತ್ಮಕವಾಗಿ ಭಾಗವಹಿಸುವಂತೆ ಬೇಕಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರಲ್ಲೂ ಸ್ವಚ್ಛತಾ ಆಪ್ ಗೆ ಉತ್ತರಿಸುವ ನಿಟ್ಟಿನಲ್ಲಿ ಇನ್ನೂ ಶ್ರಮವಹಿಸಬೇಕಾಗಿದೆ, ಅಲ್ಲದೆ, ಮುಖ್ಯವಾಗಿ ನಗರದ ವ್ಯಾಪ್ತಿಯಲ್ಲಿ  ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ಅವುಗಳ ಸ್ವಚ್ಛತೆಯ ನಿರ್ವಹಣೆ ಮತ್ತು  ಇಂದಿಗೂ ಕೊಳಚೆ ಪ್ರದೇಶಗಳಲ್ಲಿ ಮಕ್ಕಳು ಚರಂಡಿಗಳಲ್ಲಿ ಮತ್ತು ಖಾಲಿ ಪ್ರದೇಶ  ಮುಂತಾದವುಗಳಲ್ಲಿ ಬಹಿರ್ದೆಶೆ ತಡೆಯುವ ನಿಟ್ಟಿನಲ್ಲಿ ಮತ್ತು ಅಲ್ಲೂ ಸಹ ಶೌಚಾಲಯಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ, ನಗರ ಪಿತೃಗಳು, ಶಾಸಕರು ಮತ್ತು ಸಂಸದರು  ಎಲ್ಲರೂ ಕೈ ಜೋಡಿಸಿ ನಿಷ್ಠೆಯಿಂದ ನಮ್ಮೂರನ್ನು ತಮ್ಮ ಮನೆಯಂತೆ ಸ್ವಚ್ಛವಾಗಿ ಇಡುವ ನಿಟ್ಟಿನಲ್ಲಿ ಶ್ರಮಿಸಿದರೆ ಒಳ್ಳೆಯದು.

ಪಾಲಿಕೆಯು ಮುಂದಿನ ದಿನಗಳಲ್ಲಿ ಈ ಬಿರುದಿಗೆ ಮಾತ್ರವಲ್ಲ, ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿಯೂ ಸಹ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ಅದನ್ನು ವೈಜ್ನ್ಯಾನಿಕವಾಗಿ ಪರಿಷ್ಕರಿಸುವ ಬಗ್ಗೆಯೂ ಸಹ ಆವಿಷ್ಕಾರಿಕ ಯೋಜನೆಗಳನ್ನು ಹಮ್ಮಿಕೊಳ್ಳುವುದು ಉತ್ತಮ.  ಆದುದರಿಂದ ತ್ಯಾಜ್ಯವಸ್ತುಗಳನ್ನು ವಾರ್ಡ್ ಮಟ್ಟಗಳಲ್ಲಿಯೇ ವಿಲೇವಾರಿ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ನಾನು 2010 ರಲ್ಲಿ ರಚಿಸಲಾಗಿದ್ದ ಘನತ್ಯಾಜ್ಯವಸ್ತುಗಳನ್ನು 2020ರ ವೇಳೆಗೆ ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದನ್ನು ಜೆಎನ್-ನರ್ಮ್ ಸಮಿತಿಯ ಸದಸ್ಯನಾಗಿ ಕೆ.ಆರ್. ಮಾರುಕಟ್ಟೆಯಲ್ಲಿ

5 ದಿನ ಸಮೀಕ್ಷೆ ಮಾಡಿ ಟನ್`ಗಟ್ಟಲೆ ದೊರಕುವ ಹಸಿ ಕಸವನ್ನು ಪಕ್ಕದಲ್ಲಿರುವ ಕೆ.ಆರ್. ಆಸ್ಪತ್ರೆಯ ಆವರಣದ ಒಂದು ಮೂಲೆಯಲ್ಲಿ ಅಥವಾ ಕರ್ಜನ್ ಪಾರ್ಕ್ ಮೂಲೆಯಲ್ಲಿ ಗೊಬ್ಬರವಾಗಿ ಪರಿವರ್ತಿಸುವ ಘಟಕವನ್ನು ಪ್ರಾರಂಭಿಸುವ ಸಲಹೆಯನ್ನು ನೀಡಿದ್ದೆ. ಅಂತೆಯೇ ನಗರದ ವಿವಿಧ ಬಡಾವಣೆಗಳಲ್ಲಿರುವ ಪಾರ್ಕ್`ಗಳ ಒಂದು ಮೂಲೆಯಲ್ಲಿ ಸುತ್ತ ಮುತ್ತಲ ಪ್ರದೇಶದ ಹಸಿ ಕಸವನ್ನು ಸಂಸ್ಕರಿಸಿ ಗೊಬ್ಬರ ಮಾಡಿ ಪೌರ ಕಾರ್ಮಿಕರ ಮೂಲಕವೇ ವಾರ್ಡಿನ ಜನಗಳಿಗೆ ಪ್ಯಾಕೆಟ್ ಮಾಡಿ ಮಾರಾಟ ಮಾಡಿದರೆ ಜನರು ತಮ್ಮ ಮನೆಗಳಲ್ಲಿರುವ ಹೂವಿನ ಕುಂಡಗಳಿಗೆ ಉಪಯೋಗಿಸಲು ಸಹಕಾರಿಯಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ, ಈ ತರಹದ ಸಂಸ್ಕರಣಾ ಘಟಕಗಳಲ್ಲದೆ, ನಗರದ ಪ್ರತಿಷ್ಠಿತ ಎನ್.ಐ.ಇ.ನಲ್ಲಿರುವ ಕ್ರೈಸ್ಟ್ ಸಂಸ್ಥೆಯ ಸಹಾಯದಿಂದ ಅಡುಗೆ ಅನಿಲ ತಯಾರು ಮಾಡುವ ಘಟಕಗಳನ್ನು ಅಲ್ಲಲ್ಲಿ ಅಳವಡಿಸಿ ಸುತ್ತ ಮುತ್ತಲ ಜನಗಳಿಗೆ ವಿಲೇವಾರಿ ಮಾಡಿದರೆ ಅಥವಾ ಸರ್ಕಾರಿ ಹಾಸ್ಟೆಲ್ ಗಳಿಗೆ ವಿಲೇವಾರಿ ಮಾಡಿದರೆ, ತ್ಯಾಜ್ಯವನ್ನು ನಗರ ಸುತ್ತ ಮುತ್ತ ಇರುವ ಗ್ರಾಮಗಳ ಹತ್ತಿರ ಬಿಸಾಡಿ ಅಲ್ಲಿಯ ಮುಗ್ಧ ಜನರ ಆರೋಗ್ಯ ಹಾಳುಮಾಡುವದನ್ನು ತಡೆಯ ಬಹುದು.

ಅಲ್ಲದೆ ಪಾಲಿಕೆ/ಅಧಿಕಾರೀ ವರ್ಗದವರಿಂದ ಮಾತ್ರವೇ ನಮ್ಮ ಮುಂದಿನ ಕನಸು ನನಸಾಗುವುದು ಸಾಧ್ಯವಾಗಬೇಕಾದರೆ,  ಸಾರ್ವಜನಿಕರ ಸಕ್ರಿಯ ಸಹಕಾರ ಅತಿ ಮುಖ್ಯ. ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರು ನಿತ್ಯವೂ ‘ಕಸ ಕೊಡ್ರವ್ವಾ… ಕಸ ಕೊಡೀ..’ ಎಂದು ಬಂದಾಗ ನೀವು ಕೊಡುವ ಕಸವು ಮಿಶ್ರಕಸ ಆಗಿದ್ದ ಪಕ್ಷದಲ್ಲಿ, ಅದನ್ನು ನಿಮ್ಮ ಮನೆ ಮುಂದೇ ಸುರಿದು, ಹಸೀ ಕಸ ಮಾತ್ರ ಕೊಂಡೊಯ್ಯುವಂತೆ ಮತ್ತು ಒಣ ಕಸವನ್ನು ವಾರಕ್ಕೊಮ್ಮೆ ಕೊಂಡೊಯ್ಯುವಂತೆ ಮಾಡುವ ಆದೇಶಗಳು ಪಾಲಿಕೆಯ ವತಿಯಿಂದ ಹೊರಬೀಳುವುದು ದೂರ ಇಲ್ಲ.

ಇವೆಲ್ಲವನ್ನೂ ಮನಗಂಡು ಜನತೆಯೂ ಸಹ ಕೈ ಜೋಡಿಸುವ ಮಹತ್ಕಾರ್ಯ ಮಾಡಿದರೆ, ಮುಂದಿನ ವರ್ಷವೇ ನಮ್ಮ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ. ಐತಿಹಾಸಿಕ ಸುಂದರ ನಗರಿಯನ್ನು ಮನೆಯಾಗಿ ಮಾಡಿಕೊಂಡಿರುವ ವಾಣಿಜ್ಯ, ವ್ಯಾಪಾರೀ ಬಹುರಾಷ್ಟ್ರೀಯ ಸಂಸ್ಥೆಗಳೂ ಸಹ ತಮ್ಮ ತಮ್ಮ ಕೈಲಾದಷ್ಟು ಸಹಾಯ ನೀಡಿದರೆ ಅಂದರೆ ಪೌರಕಾರ್ಮಿಕರಿಗೆ ಅತಿಮುಖ್ಯವಾಗಿ ಬೇಕಾಗಿರುವ ಪರಿಕರಗಳನ್ನು ಮತ್ತು ಮಿನಿ-ಟ್ರಕ್ ಗಳನ್ನು ಬಳುವಳಿಯಾಗಿ ಪಾಲಿಕೆಗೆ ಕೊಟ್ಟರೆ ಮತ್ತು ಅವುಗಳನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಿಕೊಂಡು ನಗರವನ್ನು ಸ್ವಚ್ಛವಾಗಿ ಇಟ್ಟರೆ, ಮುಂದಿನ ದಿನಗಳಲ್ಲಿ ಮೈಸೂರು ನಗರ ಅಖಂಡ ಭಾರತದಲ್ಲಿ ಮೊದಲನೇ ಸ್ವಚ್ಛ ನಗರಿಯಾಗಿ ಪುನಃ ರಾರಾಜಿಸುವುದರಲ್ಲಿ ಸಂದೇಹವಿಲ್ಲ.

– ವಸಂತಕುಮಾರ್ ಮೈಸೂರುಮಠ
(ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ)

Leave a Reply

comments

Related Articles

error: