ಮೈಸೂರು

ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನೆ

ಮೈಸೂರು,ನ.18:- ಸರ್ಕಾರಿ ಕೋಟಾದಡಿಯಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಖಂಡಿಸಿ ರಾಜ್ಯಾದ್ಯಂತ ಅಖಿಲಭಾರತೀಯ ವಿದ್ಯಾರ್ಥಿ ಪರಿಷತ್ ಪ್ರತಿಭಟನೆಗೆ ಕರೆ ನೀಡಿದ್ದು ಮೈಸೂರಿನ ಗನ್ ಹೌಸ್ ವೃತ್ತದ  ಬಳಿ ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಾತನಾಡಿ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಸರ್ಕಾರಿ ಕೋಟಾದ ಇಂಜಿನಿಯರಿಂಗ್ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಿಂದ 83,526 ರೂ.ಹಾಗೂ 90.060ರೂ. ಗಳನ್ನು ನಿಗದಿಪಡಿಸಲಾಗಿದೆ. ಹಿಂದಿನ ವರ್ಷ ಈ ಶುಲ್ಕವು 58,806 ರೂ.ಹಾಗೂ 65,340ರೂ. ನಿಗದಿಪಡಿಸಲಾಗಿತ್ತು. ಆದರೆ ಸರ್ಕಾರವು 2021-2022ನೇ ಸಾಲಿನಿಂದ 20,000ರೂ.ಕಾಲೇಜುಗಳ ಇತರ ಶುಲ್ಕ ಹಾಗೂ ಸ್ಕಿಲ್ ಲ್ಯಾಬ್ ಸೌಲಭ್ಯಕ್ಕಾಗಿ 10,000ರೂ ನಿಂದ 20,000ರೂಪಾಯಿಯವರೆಗೆ ಹೆಚ್ಚುವರಿ ಶುಲ್ಕ  ವಸೂಲಿಗೆ ಸರ್ಕಾರ ಕಾಲೇಜುಗಳಿಗೆ ಅವಕಾಶ ನೀಡಿದೆ. ಇದರಿಂದಾಗಿ 40ಸಾವಿರ ರೂ.ವರೆಗೆ ಹೆಚ್ಚುವರಿಯಾಗಿ ವಿದ್ಯಾರ್ಥಿಯು ನೀಡಬೇಕಾಗಿದೆ. ಸರ್ಕಾರ ಈ ಹಿಂದಿನ ವರ್ಷಗಳಲ್ಲಿ ಕಾಲೇಜುಗಳಲ್ಲಿ ಈ ರೀತಿ ಹೆಚ್ಚಿನ ಶುಲ್ಕ ಪಡೆಯದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಶುಲ್ಕ ನಿಯಂತ್ರಣ ಸಮಿತಿಯ ಮೂಲಕ ಕಡಿವಾಣ ಹಾಕಲಾಗಿತ್ತು. ಸರ್ಕಾರವೇ ಈ ಎಲ್ಲ ಹೆಚ್ಚುವರಿ ಶುಲ್ಕಗಳನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿ ಕಾಲೇಜುಗಳಿಗೆ ನೀಡುತ್ತಿದೆ ಎಂದು ಆರೋಪಿಸಿದರು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಶುಲ್ಕಗಳಿಗೂ ಹಾಗೂ ಸರ್ಕಾರಿ ಅನುದಾನಿತ ಇಂಜಿನಿಯರಿಂಗ್ ಕಾಲೇಜಿನ ಶುಲ್ಕಗಳಿಗೂ 40ಸಾವಿರ ರೂಪಾಯಿಗಳವರೆಗೆ ಹೆಚ್ಚಳ ಮಾಡಲಾಗಿದೆ. ಕೋವಿಡ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಪೋಷಕರಿಗೆ ಸರ್ಕಾರ ಪರೋಕ್ಷವಾಗಿ ಹೆಚ್ಚಳ ಮಾಡಿರುವ ಶುಲ್ಕ ಹೊರೆಯಾಗಲಿದೆ ಎಂದರು.

ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಪೋಷಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಶುಲ್ಕ ಹೆಚ್ಚಳಕ್ಕೆ ಹೊರಡಿಸಿರುವ ಆದೇಶವನ್ನು  ತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ, ಜಿಲ್ಲಾ ಸಂಚಾಲಕ ಮಲ್ಲಪ್ಪ, ನಗರ ಕಾರ್ಯದರ್ಶಿ ಶಿವು, ತಾಲೂಕು ಸಂಚಾಲಕ ಕಿರಣ್, ಜೀವನ್, ಶ್ರೇಯಸ್, ನಮೃತ, ನಿಶ್ಚಿತ, ಮನೋಜ್, ಶ್ರೀಕಂಠ, ದಿನೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: