ಕರ್ನಾಟಕಪ್ರಮುಖ ಸುದ್ದಿ

ಕೋಪಗೊಂಡ ಪತ್ನಿಯಿಂದ ಪತಿಯ ಮೇಲೆ ಗುಂಡಿನ ದಾಳಿ

ಪ್ರಮುಖಸುದ್ದಿ,ರಾಜ್ಯ(ಬೆಂಗಳೂರು) ಮೇ.5:-  ಕಾರಿನಲ್ಲಿ ಬರುತ್ತಿರುವಾಗ ಕೋಪಗೊಂಡ  ಪತ್ನಿ  ಗಂಡನ ಮೇಲೆಯೇ ಗುಂಡು ಹಾರಿಸಿದ ಘಟನೆ ಹೊಸೂರು ಮುಖ್ಯ ರಸ್ತೆ ಹೆಬ್ಬಗೋಡಿ ಬಳಿ ಶುಕ್ರವಾರ ಸಂಜೆ ನಡೆದಿದೆ.

ಎಚ್.ಎಸ್‍ಆರ್ ಲೇಔಟ್‍ನಲ್ಲಿರುವ ಕಂಪೆನಿಯೊಂದರ ಸಿಇಒ ಸಾಯಿರಾಂ ಮೇಲೆ ಪತ್ನಿ ಹಂಸ ಗುಂಡು ಹಾರಿಸಿದ್ದಾಳೆ. ಗಂಭೀರವಾಗಿ ಗಾಯಗೊಂಡಿರುವ ಸಾಯಿರಾಂ ಅವರನ್ನು ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪತ್ನಿ ಹಂಸಳನ್ನು ಈಗ ಬಂಧಿಸಿದ್ದಾರೆ.

ಘಟನೆಯ ವಿವರ: ಹೊಸೂರಿನಿಂದ ಬೆಂಗಳೂರಿಗೆ ದಂಪತಿ ಕಾರಿನಲ್ಲಿ ಬರುತ್ತಿದ್ದರು. ಬೆಂಗಳೂರಿನ ಹೊರವಲಯದ ಅತ್ತಿಬೆಲೆ ಸಮೀಪದ ಎಸ್.ಕೆ ಗಾರ್ಡನ್ ರೆಸ್ಟೋರೆಂಟ್‍ನಲ್ಲಿ ಇವರಿಬ್ಬರು ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಬಳಿಕ ಅಲ್ಲಿಯೇ ಗಲಾಟೆ ಮಾಡಿಕೊಂಡು ಹೊರಟಿದ್ದಾರೆ. ಗಲಾಟೆ ಜೋರಾದಾಗ ಸಾಯಿರಾಂ ಹಂಸಳಿಗೆ ಹೊಡೆದಿದ್ದಾರೆ. ಗಲಾಟೆ ಜೋರಾಗುತ್ತಿದ್ದಂತೆ ವೀರಸಂದ್ರ ಸಿಗ್ನಲ್‍ನಲ್ಲಿ ಕಾರು ನಿಲ್ಲಿಸಿದ್ದಾಗ ಹೆಂಡತಿ ಗಂಡನ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಿದ್ದಾಳೆ. ಸಿಗ್ನಲ್ ನಲ್ಲಿ ಈ ದೃಶ್ಯವನ್ನು ನೋಡಿದ ಪಕ್ಕದಲ್ಲಿದ್ದವರು ಸಹಾಯಕ್ಕೆ ಬಂದಾಗ ಅವರ ಮೇಲೂ ಗುಂಡಿನ ದಾಳಿ ಮಾಡಲು ಹಂಸ ಮುಂದಾಗಿದ್ದಾಳೆ. ಅಂಬುಲೆನ್ಸ್ ಬಂದ ಮೇಲೆ ಗಂಡನನ್ನು ಕರೆದೊಯ್ಯದಂತೆ ಪಟ್ಟು ಹಿಡಿದು ಕುಳಿತಿದ್ದಳು. ಕೊನೆಗೆ ಪೊಲೀಸರು ಆಕೆಯನ್ನು ಮನ ಒಲಿಸಿ ಅಂಬುಲೆನ್ಸ್ ನಲ್ಲಿ ಸಾಯಿರಾಂ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಸಾಯಿರಾಂ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ಗುಂಡುಗಳು ಹೊಟ್ಟೆಯಲ್ಲಿದ್ದು ಆಪರೇಷನ್ ನಡೆಸಿದ್ದಾರೆ. – (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: