
ಕರ್ನಾಟಕಪ್ರಮುಖ ಸುದ್ದಿ
ಬೆಳೆ ಹಾನಿ; ಸಮೀಕ್ಷೆಗೆ ಜಂಟಿ ತಂಡ ನಿಯೋಜನೆ
ರಾಜ್ಯ(ಮಡಿಕೇರಿ) ನ.25:-ಪ್ರಸಕ್ತ(2021-22) ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಅಕಾಲಿಕ ಹಾಗೂ ನಿರಂತರ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿಯಾಗಿ ಸ್ಥಳ ತನಿಖೆ ನಡೆಸಿ ಬೆಳೆ ಹಾನಿ ವರದಿ ನೀಡಲು ಕೃಷಿ, ತೋಟಗಾರಿಕೆ ಇಲಾಖೆ, ಕಾಫಿ ಬೋರ್ಡ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳ ತಂಡವನ್ನು ನಿಯೋಜಿಸಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶಿಸಿದ್ದಾರೆ.
ಮಡಿಕೇರಿ, ಭಾಗಮಂಡಲ, ನಾಪೋಕ್ಲು, ಸಂಪಾಜೆ, ಸುಂಟಿಕೊಪ್ಪ, ಕೊಡ್ಲಿಪೇಟೆ, ಶಾಂತಳ್ಳಿ, ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಅಮ್ಮತ್ತಿ, ಪೊನ್ನಂಪೇಟೆ, ಬಾಳೆಲೆ, ಹುದಿಕೇರಿ ಮತ್ತು ಶ್ರೀಮಂಗಲ ಹೋಬಳಿ ವ್ಯಾಪ್ತಿಯಲ್ಲಿ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಿಗರು, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು, ಕಾಫಿ ಮಂಡಳಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ರಚಿಸಿರುವ ತಂಡಗಳು ಕೂಡಲೇ ಬೆಳೆ ಹಾನಿ ಸಂಬಂಧ ಜಂಟಿಯಾಗಿ ಕ್ಷೇತ್ರ ಪರಿಶೀಲನೆ ಮಾಡಿ ಹಾನಿ ಸಂಬಂಧ ಛಾಯಾಚಿತ್ರ ಮತ್ತು ಸೂಕ್ತ ದಾಖಲೆಗಳೊಂದಿಗೆ ದೈನಂದಿನ ವರದಿಯನ್ನು ಸಂಬಂಧಿಸಿದ ತಹಶೀಲ್ದಾರರಿಗೆ ಸಲ್ಲಿಸುವುದು. ಅದರಂತೆ ತಹಶೀಲ್ದಾರರು ನಿಯಮಾನುಸಾರ ಬೆಳೆ ಹಾನಿ ಪ್ರಕರಣಗಳ ಮಾಹಿತಿಯ ಅಧಿಸೂಚನೆ ಹೊರಡಿಸುವುದು.
ಹಾಗೆಯೇ ಅಧಿಸೂಚಿಸಿದ ಬೆಳೆಹಾನಿ ಪ್ರಕರಣಗಳಿಗೆ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲು ಬೆಳೆ ಹಾನಿ ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ ನಿಯಮಾನುಸಾರ ಪರಿಹಾರ ನೀಡಲು ಯಾವುದೇ ಲೋಪ ದೋಷಗಳಾಗದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)