ಕರ್ನಾಟಕಪ್ರಮುಖ ಸುದ್ದಿ

ಎಲ್ಲರಿಗೂ ಸಂವಿಧಾನದ ಅರಿವು ಅಗತ್ಯ: ಎ.ಎನ್ ನಳಿನಕುಮಾರಿ

ರಾಜ್ಯ(ಮಂಡ್ಯ).ನ 26:- ಸಾರ್ವಜನಿಕರಿಗೆ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸಂವಿಧಾನ ದಿನಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎನ್ ನಳಿನಕುಮಾರಿ ಹೇಳಿದರು.

ನಗರದ ನೆಹರು ಯುವ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಭಾರತದ ಸಂವಿಧಾನ ದಿನಾಚರಣೆ ಹಾಗೂ ಸಾರ್ವಜನಿಕ ಭಾಗವಹಿಸುವಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ದೇಶದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಸಂವಿಧಾನದ ಅಡಿಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಸಂವಿಧಾನದಲ್ಲಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಸಂವಿಧಾನದ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಬಹು ಜಾತಿ, ಧರ್ಮ, ಸಂಸ್ಕೃತಿ, ಭಾಷೆ ಇತ್ಯಾದಿಗಳ ಬೃಹತ್ ದೇಶವಾದ ಭಾರತಕ್ಕೆ ಒಂದು ಸತ್ವಯುತವಾದ, ಸುಸ್ಥಿರವಾದ ಸಂವಿಧಾನವನ್ನು ರಚಿಸುವುದು ಸುಲಭದ ಕೆಲಸವಲ್ಲ ಅಂತಹ ಮಹತ್ವದಕೆಲಸವನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಮಾಡಿದರು ಎಂದರು.

ನಾವೀಗ ನೋಡುತ್ತಿರುವ ಜಗತ್ತಿನ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾದ ಭಾರತ ಸಂವಿಧಾನದ ರೂಪವನ್ನು ಕೊಟ್ಟಿದ್ದು, ಕರಡು ರಚನಾ ಸಭೆಯ ಅಧ್ಯಕ್ಷರಾದ ಡಾ. ಬಿ.ಆರ್.ಅಂಬೇಡ್ಕರ್. ಅದಕ್ಕೇ ಈ ದೇಶದ ಜನ ಅವರನ್ನು ‘ಸಂವಿಧಾನ ಶಿಲ್ಪಿ’ ಎಂದು ಕರೆಯುತ್ತಾರೆ ಎಂದರು.

ಸಂವಿಧಾನ ನಮಗೆ ಎಲ್ಲಾ ರೀತಿಯ ಹಕ್ಕನ್ನು ಕೊಟ್ಟಿದೆ. ಅದೇರೀತಿ ಕರ್ತವ್ಯವನ್ನೂ ವಹಿಸಿದೆ. ನಾವು ಹೇಗೆ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳತ್ತೇವೆ ಅದೇ ರೀತಿ ಸಂವಿಧಾನ ನೀಡಿರುವ ಕರ್ತವ್ಯಗಳನ್ನು ಪಾಲನೆ ಮಾಡಬೇಕು. ತಮ್ಮ ಮೂಲ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.

ದೇಶದ ಪ್ರತಿಯೊಬ್ಬ ನಾಗರಿಕರೂ ಸಂವಿಧಾನ ಅಧ್ಯಯನ ಮಾಡುವ ಮೂಲಕ ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಹಕ್ಕು ಮತ್ತು ಕರ್ತವ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನೂ ಸಮಾನವಾಗಿ ಕಾಣಬೇಕು ಎಂದರು‌.

ಸರ್ವ ಧರ್ಮದ ಏಕತೆಯನ್ನು ಸಾರುವ ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೆಬ್ ಸಿಟಿಯ ವಿವೇಕ್ ,
ಹಿಂದಿಭವನದ ಅಧ್ಯಕ್ಷರಾದ ವಿನಯ್, ರಾಷ್ಟ್ರೀಯ ಯುವಪ್ರಶಸ್ತಿ ಪುರಸ್ಕೃತೆ ಅನುಪಮ, ನೆಹರು ಯುವಕೇಂದ್ರದ ಲೆಕ್ಕಾಧಿಕಾರಿ ಎಚ್ ಎಂ ಬಸವರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: