ಕರ್ನಾಟಕಪ್ರಮುಖ ಸುದ್ದಿ

ಬೆಳೆ ಹಾನಿ; ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ಕ್ರಮಕೈಗೊಳ್ಳಿ: ಜಿಲ್ಲಾಧಿಕಾರಿ

ರಾಜ್ಯ(ಮಂಡ್ಯ).ನ 27 :- ಪ್ರಕೃತಿ ವಿಕೋಪಗಳಿಂದಾಗಿ ಜಿಲ್ಲೆಯಲ್ಲಿ ಬೆಳೆ ಹಾನಿಯುಂಟಾಗಿದ್ದು, ಬೆಳೆ ವಿಮಾ ನೋಂದಾಯಿಸಿರುವ ರೈತರ ಬೆಳೆ ನಷ್ಟಕ್ಕೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಮಾರ್ಗಸೂಚಿಯನ್ವಯ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಿಲ್ಲಾ ಮಟ್ಟದ ಜಂಟಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಂದ ಬೆಳೆ ನಷ್ಟದ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು, ಇದುವರೆವಿಗೂ 466 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ-ಪ್ರಧಾನ ಮಂತ್ರಿ ಪಸಲ್ ಬೀಮಾ ಯೋಜನೆಯಡಿ ನೋಂದಾಯಿಸಿರುವ ರೈತರ ಬೆಳೆಗಳು ನವೆಂಬರ್ 16 ರಿಂದ ನವೆಂಬರ್ 24 ರವರೆಗೆ ಬಿದ್ದ ಅಕಾಲಿಕ ಮಳೆಯಿಂದಾಗಿ ನಷ್ಟವಾಗಿರುವ ಬಗ್ಗೆ ವರದಿಯಾಗಿದ್ದು, ಸದರಿ ಯೋಜನೆಯ ಮಾರ್ಗಸೂಚಿಯನ್ವಯ ಬೆಳೆ ನಷ್ಟ ಸಂಭವಿಸಿದ 72 ಗಂಟೆಯೊಳಗಾಗಿ ರೈತರು ವಿಮಾ ಸಂಸ್ಥೆ ಅಥವಾ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿ ಎಂದರು.
ರೈತರಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ನವೆಂಬರ್ 27 ಮತ್ತು 28 ರಂದು ಸಾರ್ವತ್ರಿಕ ರಜಾ ದಿನಗಳಂದು ಜಿಲ್ಲೆಯ ಎಲ್ಲಾ 31 ಹೋಬಳಿ ರೈತ ಸಂಪರ್ಕ ಕೇಂದ್ರಗಳು ಹಾಗೂ ಎಲ್ಲಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದರು.
ಬೆಳೆ ವಿಮೆಗೆ ನೋಂದಾಯಿಸಿರುವ ಬೆಳೆ ನಷ್ಟವಾಗಿರುವ ರೈತರು ನವೆಂಬರ್ 30 ಒಳಗಾಗಿ ಅರ್ಜಿಯನ್ನು ವಿಮಾ ಸಂಸ್ಥೆ ಅಥವಾ ಕೃಷಿ ಇಲಾಖೆಗೆ ಸಲ್ಲಿಸಿ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಬಿ.ಎಸ್ ಚಂದ್ರಶೇಖರ್, ತೋಟಗಾರಿಕೆ ಉಪನಿರ್ದೇಶಕರಾದ ಡಿ.ಮಂಜುನಾಥ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ನರೇಶ್ ಎನ್.ಟಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: