ಕರ್ನಾಟಕಪ್ರಮುಖ ಸುದ್ದಿಮೈಸೂರು

ಸಂಸದೀಯ ಕಾರ್ಯದರ್ಶಿಗಳ ನೇಮಕ ಅಸಾಂವಿಧಾನಿಕ: ಕೆಜೆಪಿಯಿಂದ ಹೈಕೊರ್ಟ್, ರಾಜ್ಯಪಾಲರಿಗೆ ಮೊರೆ

ಸಂವಿಧಾನದ ಪ್ರಕಾರ ಶಾಸಕರ ಸಂಖ್ಯಾಬಲದ ಶೇ.15ರಷ್ಟು ಮಾತ್ರ ಸಚಿವರಿರಬೇಕು ಎಂಬ ನಿಯಮವಿದ್ದರೂ, ರಾಜ್ಯ ಸರ್ಕಾರವು 11 ಜನ ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸಿ ಸಹಾಯಕ ಸಚಿವರಿಗೆ ಸಮಾನವಾದ ಸಂಬಳ ಸೌಲಭ್ಯ ನೀಡುತ್ತಿರುವುದು ಅಸಂವಿಧಾನಿಕವಾಗಿದ್ದು ಈ ಕೂಡಲೇ ರದ್ದುಗೊಳಿಸಬೇಕೆಂದು ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಸಚಿವ ಸ್ಥಾನ ಅವಕಾಶ ವಂಚಿತ ಶಾಸಕರನ್ನು ಸಮಾಧಾನಗೊಳಿಸುವ ನಿಟ್ಟಿನಲ್ಲಿ ಸಚಿವರಿಗೆ ಸಮನಾದ ಹುದ್ದೆ ನೀಡಿರುವುದು ಕಾನೂನಿಗೆ ವಿರುದ್ದ ಎಂದು ಪಕ್ಷ ವಾದಿಸಿದೆ.

ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಉಡುಪಿಯ ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಕಚೇರಿಯ ಗೋವಿಂದ ರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುತ್ತೂರಿನ ಶಕುಂತಲಾ ಶೆಟ್ಟಿ, ಚಿಂಚೋಳಿಯ ಡಾ. ಉಮೇಶ್ ಯಾದವ್, ಆರೋಗ್ಯ ಇಲಾಖೆ; ನಾಗಠಾಣ ಕ್ಷೇತ್ರದ ರಾಜು ಅಲಗೂರು, ವಸತಿ ಇಲಾಖೆ; ಕುಂದಗೋಳದ ಸಿ.ಎಸ್. ಶಿವಳ್ಳಿ, ಸಮಾಜ ಕಲ್ಯಾಣ ಇಲಾಖೆ; ಚಾಮರಾಜನಗರದ ಪುಟ್ಟರಂಗ ಶೆಟ್ಟಿ, ಗ್ರಾಮೀಣ ಅಭಿವೃದ್ಧಿ; ಹುಣಸೂರಿನ ಮಂಜುನಾಥ್, ಕೈಗಾರಿಕೆ ಇಲಾಖೆ; ಸಂಡೂರಿನ ತುಕಾರಾಂ, ಲೋಕೋಪಯೋಗಿ ಇಲಾಖೆ; ಬಿಜಾಪುರದ ಮಕಾಬುಲ್ ಎಸ್. ಭಗವಾನ್, ನಗರಾಭಿವೃದ್ಧಿ ಇಲಾಖೆ; ಶಿರಹಟ್ಟಿಯ ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ, ನೀರಾವರಿ ಇಲಾಖೆ –  ಇದು ಸಂಸದೀಯ ಕಾರ್ಯದರ್ಶಿ ಹುದ್ದೆ ಪಡೆದು ಸಹಾಯಕ ಸಚಿವರ ಸೌಲಭ್ಯ ಪಡೆಯುತ್ತಿರುವವರ ಪಟ್ಟಿ.

ನಿಯಮಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಚಿವ ಸಂಪುಟದ ಸದಸ್ಯರ ಬಲ 35 ಇರಬೇಕು. ಆದರೆ 11 ಜನ ಹೆಚ್ಚುವರಿ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಂಡಿರುವುದರಿಂದ ಸಚಿವರ ಸಂಖ್ಯೆ 45ಕ್ಕೆ ಏರಿದಂತಾಗಿದೆ. ಕಾರ್ಯದರ್ಶಿಗಳ ವೇತನ, ಪ್ರಯಾಣ ಭತ್ಯೆ, ಇಂಧನ – ದೂರವಾಣಿ ಭತ್ಯೆಗಳೊಂದಿಗೆ ವಾರ್ಷಿಕ 5 ಲಕ್ಷ ರೂ ಆತಿಥ್ಯ ಭತ್ಯೆಯನ್ನು ಕೂಡ ನೀಡುತ್ತಿದ್ದು, ಆಯಾಯ ಇಲಾಖೆಗಳೇ ಇದನ್ನು ನೀಡಬೇಕೆಂದು ಸೂಚಿಸಲಾಗಿದೆ. ಇದರಿಂದ ಇಲಾಖೆಗಳಿಗೆ ಆರ್ಥಿಕ ಹೊರೆ ಹೆಚ್ಚುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಬಹುದು.  ಆದ್ದರಿಂದ ರಾಜ್ಯಪಾಲರ ಮಧ್ಯ ಪ್ರವೇಶಿಸಿ ಕೂಡಲೇ ಸಂಸದೀಯ ಕಾರ್ಯದರ್ಶಿಗಳ ಹುದ್ದೆಗಳನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಬೇಕು ಎಂದು ಪಕ್ಷ ಮನವಿ ಮಾಡಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 24 ಜನ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಿಕೊಂಡಿದ್ದರು. ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಹಿನ್ನಲೆಯಲ್ಲಿ  ಕೊಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಮಂಜುಳಾ ಚೆಲ್ಲೂರ್ ಹಾಗೂ ಅಸೀಂಕುಮಾರ್ ಬ್ಯಾನರ್ಜಿ ಅವರಿದ್ದ ಪೀಠ, ಸಂಸದೀಯ ಕಾರ್ಯದರ್ಶಿ ಕಾಯ್ದೆಯನ್ನು ರದ್ದು ಮಾಡಿ ತೀರ್ಪು ನೀಡಿದ್ದರು. ಇದರಂತೆ ರಾಜ್ಯ ಸರ್ಕಾರ ಕೂಡ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲು ಸಾಂವಿಧಾನಿಕವಾಗಿ ಅವಕಾಶ ಇಲ್ಲವಾಗಿದ್ದು, ಕಾನೂನು ಉಲ್ಲಂಘಿಸಿ ನಡೆದಿರುವ ಈ ನೇಮಕವನ್ನು ತಕ್ಷಣ ಅಸಿಂಧುಗೊಳಿಸಬೇಕು ಎಂದು ಪಕ್ಷ ಕೋರಿದೆ.

Leave a Reply

comments

Related Articles

error: