ಮೈಸೂರು

ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳು ನೈತಿಕತೆ ಪ್ರದರ್ಶಿಸಲಿ

ಮೈಸೂರು,ನ.27 :- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು. ಈ ಹೊತ್ತಿನಲ್ಲಿ ರಾಜಕೀಯ ಪಕ್ಷಗಳು ನೈತಿಕತೆಯನ್ನು ಪ್ರದರ್ಶಿಸಲಿ, ಸಮಾಜಕ್ಕೆ ನೈತಿಕತೆಯ ಪಾಠ ಹೇಳಬೇಕಾದವರು ಅನೈತಿಕ ವರ್ತನೆ ತೋರುವುದು ಸರಿಯಲ್ಲ ಎಂದು ಮೈಸೂರು ನಗರ ಜೆಡಿಎಸ್ ಘಟಕ ಸಲಹೆ ನೀಡಿದೆ.
ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಮೈಸೂರು ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು. ಈ ಹೊತ್ತಿನಲ್ಲಿ ರಾಜಕೀಯ ಮೇಲಾಟಗಳು ಸಹಜ, ಆದರೆ ಸಮಾಜಕ್ಕೆ ನೈತಿಕತೆಯ ಪಾಠ ಹೇಳಬೇಕಾದವರು ಅನೈತಿಕ ವರ್ತನೆ ತೋರುವುದು ಸರಿಯಲ್ಲ ಎಂದರು.
ಮೈಸೂರು –ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದು ಗೆಲುವು ಸಾಧಿಸಿ ವಿಧಾನಪರಿಷತ್ ಸದಸ್ಯರಾಗಿದ್ದ ಸಂದೇಶ್ ನಾಗರಾಜ್ ಅವರು ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಹೇಳಿರುವುದು ಅವರ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗುತ್ತಿದೆ, ಮಾಜಿ ಪ್ರಧಾನಿ ದೇವೇಗೌಡರ ಗರಡಿಯಲ್ಲಿ ಪಳಗಿದ ಅವರು ಜೆಡಿಎಸ್ ನ ಎಲ್ಲ ಬಗೆಯ ಗೌರವಾಧರಗಳನ್ನು ಪಡೆದರೂ, ತಮಗೂ ಪಕ್ಷಕ್ಕೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿರುವುದು ಇವತ್ತಿನ ರಾಜಕೀಯ ಅಧೋಗತಿಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಸಂದೇಶ್ ನಾಗರಾಜ್ ಅವರಿಗೆ ಮಾಜಿ ಪ್ರಧಾನಿ ದೇವೇಗೌಡರ ಮೇಲೆ ಗೌರವ ಇದ್ದಲ್ಲಿ ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೇಷರತ್ತಾಗಿ ಬೆಂಬಲಿಸಬೇಕು ಎಂದು ಮನವಿಯನ್ನು ಮಾಡುತ್ತೇವೆ . ಒಂದು ವೇಳೆ ತಮ್ಮ ಹಠಮಾರಿ ಧೋರಣೆ ಮುಂದುವರಿಸಿದ್ದೇ ಆದಲ್ಲಿ ಅವರ ಕುಟುಂಬದವರು ಯಾರಾದರೂ ಭವಿಷ್ಯದಲ್ಲಿ ಚುನಾವಣೆಗೆ ನಿಂತ ವೇಳೆ ಜೆಡಿಎಸ್ ಪ್ರತೀಕಾರ ತೆಗೆದುಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಚ್ಚರಿಕೆಯನ್ನು ರವಾನಿಸಿದರು.
ಪ್ರಸಕ್ತ ಚುನಾವಣೆಯಲ್ಲಿ ಮತದಾನ ಮಾಡುವ ಮತದಾರರು ಪ್ರಬುದ್ಧರಿರುವುದರಿಂದ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಅವರು ನಿಸ್ಸಂಶಯವಾಗಿ ಗೆಲುವು ಸಾಧಿಸಲಿದ್ದಾರೆ , ಅಲ್ಲದೆ ನಮ್ಮ ಪಕ್ಷದ ಏಳೂ ಮಂದಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಫಾಲ್ಕನ್ ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: