ಮೈಸೂರು

ಕೆಸರೆಯಲ್ಲಿ ನಿರ್ಮಾಣ ವಾಗುತ್ತಿರುವ ದೊಡ್ಡಪ್ರಾಣಿ ಗಳ ವಧಾಕೇಂದ್ರಕ್ಕೆ ವಿರೋಧ

ಮೈಸೂರು,ನ.27 : – ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಿ ಕಾನೂನು ಜಾರಿಯಾಗಿದೆ ಹೀಗಿರುವಾಗ ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ನಗರದ ಕೆಸರೆಯಲ್ಲಿ ನಿರ್ಮಾಣವಾಗುತ್ತಿರುವ ದೊಡ್ಡಪ್ರಾಣಿಗಳ ವಧಾಕೇಂದ್ರಕ್ಕೆ ಕಸಾಯಿಖಾನೆ ವಿರೋಧಿ ಹೋರಾಟ ಸಮಿತಿ ವಿರೋಧಿಸಿದೆ.
ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಸಾಯಿಖಾನೆ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮೈ.ಕಾ. ಪ್ರೇಮ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಗೋಹತ್ಯೆಯನ್ನು ನಿಷೇಧಿಸಿ ಕಾನೂನು ಜಾರಿಯಾಗಿದೆ, ಹೀಗಿರುವಾಗ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ನಗರದ ಕೆಸರೆಯಲ್ಲಿ ಆಧುನಿಕ ಯಂತ್ರಗಳನ್ನು ಬಳಸಿ ದೊಡ್ಡ ಪ್ರಾಣಿಗಳನ್ನು ವಧಿಸಲೆಂದೇ ಬೃಹತ್ ಕಸಾಯಿಖಾನೆಯನ್ನು ನಿರ್ಮಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಗೋಹತ್ಯೆಗೆ ನಿಷೇಧವಿರುವಾಗ ದಿನಕ್ಕೆ 150 ರಿಂದ 200 ಸಂಖ್ಯೆಯಲ್ಲಿ ಯಾವ ದೊಡ್ಡ ಪ್ರಾಣಿ ಸಿಗುತ್ತದೆ ಎಂದು ಈ ಕಸಾಯಿ ಖಾನೆ ನಿರ್ಮಿಸಿದ್ದಾರೆ.? ಇಷ್ಟು ದೊಡ್ಡ ಜಾಗ ನೀಡಿರುವುದರ ಹುನ್ನಾರಾವಾದರೂ ಏನು ಎಂದು ಪ್ರಶ್ನಿಸಿದರು.
ಅನಧಿಕೃತವಾಗಿ ಗೋಹತ್ಯೆ ಮಾಡಿ ಮಾಂಸ ಮಾರುವವರಿಗೆ ಪಶುವೈದ್ಯರ ಪ್ರಮಾಣಪತ್ರ ಮೂಲಕ ಅಧಿಕೃತವಾಗಿ ಹತ್ಯೆ ಮಾಡಲು ಹಿಂಬಾಗಿಲು ಮೂಲಕ ಸಹಕಾರ ಕೊಡುವುದು ಇದರ ಉದ್ದೇಶವಾಗಿರುವಂತಿದೆ ಎಂದಿದ್ದಾರೆ.
ನಾಲೆಯ ಪಕ್ಕದಲ್ಲಿ ನಿರ್ಮಾಣ ಮಾಡುತ್ತಿರುವುದರಿಂದ ರಕ್ತ, ತ್ಯಾಜ್ಯವೆಲ್ಲ ನಾಲೆಗೆ ಸೇರುವ ಅಪಾಯ ಎದುರಾಗಲಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೋಗ ರುಜಿನಗಳು ಕಾಡಲಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಟ್ಟಡವನ್ನು ಜೈಲು ಮಾದರಿಯಲ್ಲಿ ನಿರ್ಮಿಸುತ್ತಿದ್ದು, ಕದ್ದ ಹಸುಗಳನ್ನು ಸಂಗ್ರಹಿಸಿಡಲು ಸೂಕ್ತ ಎನಿಸುವಂತಿದೆ , ಇದು ಪೊಲೀಸ್ ಇಲಾಖೆಗೂ ಸಂಕಷ್ಟ ತಂದಿಡಲಿದೆ ಎಂದು ಕಾಮಗಾರಿ ಅತ್ಯಂತ ಗೌಪ್ಯವಾಗಿ ನಡೆಯುತ್ತಿದೆ. ಹಾಗಾಗಿಯೇ ಸ್ಥಳದಲ್ಲಿ ಕಾಮಗಾರಿ ವಿವರ , ಅಂದಾಜು ವೆಚ್ಚ, ಗುತ್ತಿಗೆದಾರನ ಮಾಹಿತಿ ಸೇರಿದಂತೆ ಯಾವುದೇ ಫಲಕವನ್ನು ಹಾಕಿಲ್ಲ ಎಂದು ಹೇಳಿದ್ದಾರೆ.
ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಕಸಾಯಿಖಾನೆ ನಿರ್ಮಾಣವನ್ನು ಕೂಡಲೇ ನಿಲ್ಲಿಸದಿದ್ದರೆ , ಬೃಹತ್ ಹೋರಾಟ ನಡೆಸಲು ನಾವು ಸಿದ್ಧರಾಗಿದ್ದೇವೆ. ಈಗಾಗಲೇ ಸ್ಥಳೀಯ ಹಳೆಕೆಸರೆ ಹಾಗೂ ಸುತ್ತಮುತ್ತಲಿನ ನಾಗರೀಕರು ಮತ್ತು ಮುಖಂಡರು ನಮ್ಮ ಹೋರಾಟಕ್ಕೆ ಬೆಂಬಲವನ್ನು ಘೋಷಿಸಿದ್ದಾರೆ. ಈ ಹಿಂದೆ ದೇವಾಸ್ಥಾನಗಳನ್ನು ಒಡೆದು ಜನಾಕ್ರೋಶದಿಂದ ಎಚ್ಚೆತ್ತುಕೊಂಡಿರಿ, ಈಗ ಜನಾಕ್ರೋಶ ಎದುರಿಸುವ ಮುನ್ನವೇ ಎಚ್ಚೆತ್ತುಕೊಳ್ಳುವಿರಾ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ , ಸಂಜಯ್, ರಾಕೇಶ್ ಭಟ್, ಮಾದೇಶ್, ರೇವಣ್ಣ , ಮಾಲಿನಿ ಪಾಲಾಕ್ಷ, ಪ್ರಶಾಂತ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್. ಎಂ)

Leave a Reply

comments

Related Articles

error: