ಕರ್ನಾಟಕಪ್ರಮುಖ ಸುದ್ದಿಮೈಸೂರು

ವಿದೇಶಗಳಲ್ಲಿ ಒಮಿಕ್ರಾನ್ ವೈರಸ್ ಪತ್ತೆ; ಚೆಕ್ ಪೋಸ್ಟ್ ಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸಚಿವ ಎಸ್.ಟಿ.ಸೋಮಶೇಖರ್ ಸೂಚನೆ

ಮೈಸೂರು, ನ. 28:-ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬಂದು ಜನಜೀವನ ಸಹಜ ಸ್ಥಿತಿಗೆ ಮರಳುವ ಸಂದರ್ಭದಲ್ಲಿ ವಿದೇಶದಲ್ಲಿ ಒಮಿಕ್ರಾನ್ ಎಂಬ ರೂಪಾಂತರ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಹೊರ ರಾಜ್ಯಗಳಿಂದ ಆಗಮಿಸುವವರನ್ನು ಚೆಕ್ ಪೋಸ್ಟ್ ಗಳಲ್ಲಿ ಪರೀಕ್ಷೆಗೊಳಪಡಿಸಬೇಕು ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸೂಚನೆ ನೀಡಿದ್ದಾರೆ.

ಚೆಕ್ ಪೋಸ್ಟ್ ಗಳಲ್ಲಿ ದಿನದ 24 ಗಂಟೆ ಶಿಫ್ಟ್ ಗಳಲ್ಲಿ ಕೆಲಸ ಮಾಡಬೇಕು. ಹೊರ ರಾಜ್ಯಗಳಿಂದ ಆಗಮಿಸುವವರು ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿದ್ದಾರೆಯೇ ಎಂದು ಪರಿಶೀಲನೆ ನಡೆಸಬೇಕು. ಜಿಲ್ಲಾಧಿಕಾರಿಗಳು ಖುದ್ದು ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಸರ್ಕಾರಿ ಕಚೇರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು.‌ ಲಸಿಕೆ ಹಾಕಿಸಿಕೊಳ್ಳದವರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು. ಸಭೆ ಸಮಾರಂಭಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂದು ಸಚಿವರು ಸೂಚಿಸಿದ್ದಾರೆ.

ಕೇರಳದಿಂದ ಆಗಮಿಸಿರುವವರ ಮೇಲೆ ನಿಗಾ ವಹಿಸಬೇಕು. ಪ್ರವಾಸಿ ಸ್ಥಳಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕರು ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದಾಗಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ.

16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು. ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7ನೇ ದಿನಕ್ಕೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಬೇಕು ಎಂದು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: