ಕರ್ನಾಟಕಪ್ರಮುಖ ಸುದ್ದಿ

ವಿವಿಧ ಧಾರ್ಮಿಕ ಮುಖಂಡರ ಸಭೆ ಕೋವಿಡ್ ನಿರೋಧಕ ಲಸಿಕೆ ಪಡೆಯಲು ಸಹಕರಿಸಿ: ಡಾ.ಬಿ.ಸಿ.ಸತೀಶ

ರಾಜ್ಯ(ಮಡಿಕೇರಿ) ನ.30:-ಕೊಡಗು ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಅಭಿಯಾನ ಸಂಬಂಧಿಸಿದಂತೆ ಪ್ರಥಮ ಲಸಿಕೆಯನ್ನು ಶೇ.97.9 ರಷ್ಟು ಹಾಗೂ ಎರಡನೇ ಲಸಿಕೆಯಲ್ಲಿ ಶೇ.73.14 ರಷ್ಟು ಮಂದಿ ಪಡೆದಿದ್ದು, ಪ್ರಥಮ ಮತ್ತು ದ್ವಿತೀಯ ಹಂತದ ಲಸಿಕೆ ಶೇ.100 ರಷ್ಟು ಪ್ರಗತಿ ಸಾಧಿಸಲು ಎಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೋರಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಮುಖಂಡರ ಜೊತೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 4 ಲಕ್ಷ ಜನರಲ್ಲಿ ಪ್ರಥಮ ಮತ್ತು ದ್ವಿತೀಯ ಹಂತದ ಲಸಿಕೆಯನ್ನು ಕಡ್ಡಾಯವಾಗಿ ಪಡೆದು, ಶೇಕಡವಾರು ಪ್ರಗತಿ ಸಾಧಿಸಬೇಕು. ಆ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಮುಖಂಡರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು.
ನವೆಂಬರ್ ಅಂತ್ಯದೊಳಗೆ ಶೇ.100 ರಷ್ಟು ಪ್ರಗತಿ ಸಾಧಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಥಮ ಹಂತದ ಲಸಿಕೆ ಪಡೆದಿರುವವರು ಎರಡನೇ ಲಸಿಕೆ ಪಡೆಯಬೇಕು. ಎರಡನೇ ಹಂತದ ಲಸಿಕೆ ಪಡೆಯುವಂತಾಗಲು ಹತ್ತಿರದವರಿಗೆ ಮಾಹಿತಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
‘ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ‘ಓಮಿಕ್ರಾನ್’ ದಕ್ಷಿಣ ಆಪ್ರಿಕಾ, ಇಂಗ್ಲೆಂಡ್, ಜರ್ಮನಿ, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ಬೆಲ್ಜಿಯಂ ಹೀಗೆ ಹಲವು ರಾಷ್ಟ್ರಗಳಲ್ಲಿ ಹರಡಿದ್ದು, ಈ ಬಗ್ಗೆ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಪಡೆಯುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಕೋರಿದರು.’
ಜಿಲ್ಲೆಯ ಕುಟ್ಟ, ಮಾಕುಟ್ಟ, ಕರಿಕೆ ಚೆಕ್‍ಪೋಸ್ಟ್‍ಗಳಲ್ಲಿ ಸರ್ಕಾರದ ನಿರ್ದೇಶನದಂತೆ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಬುಧವಾರ ಮತ್ತು ಶುಕ್ರವಾರ ಲಸಿಕಾ ಮೇಳ ನಡೆಯುತ್ತಿದೆ. ಜೊತೆಗೆ ಇತರ ದಿನಗಳಲ್ಲಿಯೂ ಲಸಿಕಾ ಕಾರ್ಯಕ್ರಮ ಜರುಗುತ್ತಿದೆ. ಆದ್ದರಿಂದ ಈ ಅವಕಾಶವನ್ನು ಬಳಸಿಕೊಳ್ಳುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಸತೀಶ ಅವರು ಹೇಳಿದರು.
ಜಿಲ್ಲೆಯ ಕೆಲವು ಕಡೆ ಕೋವಿಡ್ ನಿರೋಧಕ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಲಸಿಕಾ ಮೇಳಕ್ಕೆ ಹೋಗಿ ಸಾಲಿನಲ್ಲಿ ನಿಂತು ಲಸಿಕೆ ಪಡೆಯಲು ಹಿಂದೆ ಸರಿಯುತ್ತಿರುವ ಬಗ್ಗೆ ಮಾಹಿತಿ ಇದೆ. ಮನೆಗೆ ಬಂದು ಲಸಿಕೆ ನೀಡುವಂತಾಗಲಿ ಎಂಬುದು ಕೇಳಿ ಬರುತ್ತಿದೆ. ಆ ನಿಟ್ಟಿನಲ್ಲಿ ಮಂದಿರ, ಮಸೀದಿ ಮತ್ತು ಚರ್ಚ್‍ಗಳಿಗೂ ತೆರಳಿ ಲಸಿಕೆ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಕೊಡಗು ಜಿಲ್ಲೆ ಶೈಕ್ಷಣಿಕವಾಗಿ ಮುಂದೆ ಇದೆ. ಆ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಪಡೆಯುವಂತಾಗಬೇಕು. ಕೊಡಗು ಜಿಲ್ಲೆ ಲಸಿಕಾ ಪ್ರಗತಿಗೆ ಎಲ್ಲರೂ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅವರು ಕೋರಿದರು.
ವಕ್ಫ್ ಮಂಡಳಿ ಅಧ್ಯಕ್ಷರಾದ ಕೆ.ಎ.ಯಾಕೂಬ್ ಅವರು ಮಾತನಾಡಿ ಕೋವಿಡ್ ನಿರೋಧಕ ಲಸಿಕೆ ಪಡೆಯುವಂತಾಗಲು ಪ್ರತೀ ಜಮಾಯತ್‍ಗೆ ಮಾಹಿತಿ ನೀಡಲಾಗಿದೆ. ಶೇ.100 ರಷ್ಟು ಲಸಿಕಾ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮತ್ತೊಬ್ಬ ಪ್ರತಿನಿಧಿ ಕೆ.ಎಸ್.ಖಾಜಿ ಅವರು ಪ್ರಾರ್ಥನಾ ಮಂದಿರದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡುವಂತಾಗಬೇಕು ಎಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಲಸಿಕಾ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಗೋಪಿನಾಥ್ ಅವರು ತಮಗೆ ಅಗತ್ಯವಿರುವ ಕಡೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು. ಆ ನಿಟ್ಟಿನಲ್ಲಿ ಸಹಕರಿಸುವಂತೆ ಅವರು ಕೋರಿದರು.
ಕುಶಾಲನಗರ, ಮಡಿಕೇರಿ, ಗೋಣಿಕೊಪ್ಪ, ಸೋಮವಾರಪೇಟೆ, ವಿರಾಜಪೇಟೆ ಮತ್ತಿತರ ಪಟ್ಟಣ/ನಗರ ಪ್ರದೇಶಗಳಲ್ಲಿ ಕೋವಿಡ್ ನಿರೋಧಕ ಲಸಿಕೆ ಪಡೆಯುವಂತೆ ಸಹಕರಿಸಲು ಕೋರಿದರು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷರಾದ ಕೃಷ್ಣಮೂರ್ತಿ ಅವರು ತಾಲ್ಲೂಕು ಮಟ್ಟದಲ್ಲಿಯೂ ಧಾರ್ಮಿಕ ಮುಖಂಡರ ಸಭೆ ಮಾಡಿ ಲಸಿಕೆ ಪಡೆಯಲು ಮನವರಿಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಪಟ್ಟಣ ಪಂಚಾಯತ್ ಸದಸ್ಯರೊಬ್ಬರು ಸರ್ಕಾರದ ನಿಯಮಗಳನ್ನು ಚೆಕ್‍ಪೋಸ್ಟ್‍ಗಳಲ್ಲಿ ಪಾಲಿಸುವುದರ ಜೊತೆಗೆ ಮಾನವೀಯತೆಯನ್ನು ತೋರಬೇಕು. ಚೆಕ್‍ಪೋಸ್ಟ್‍ಗಳಲ್ಲಿ ರ್ಯಾಟ್ ಪರೀಕ್ಷೆಯನ್ನು ಮಾಡಿ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಅವರು ಕೋರಿದರು.
ಮೊಹಮ್ಮದ್ ಹಾಜಿ, ಹನೀಫ್, ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಮಾತನಾಡಿ ಕೋವಿಡ್ ನಿರೋಧಕ ಲಸಿಕೆ ಪಡೆಯುವಂತಾಗಲು ಜಿಲ್ಲಾಡಳಿತದ ಜೊತೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಯತಿರಾಜು, ಪೌರಾಯುಕ್ತರಾದ ರಾಮದಾಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕವಿತಾ, ನಂದಿನಿ, ವಿವಿಧ ಧಾರ್ಮಿಕ ಮುಖಂಡರು ಇತರರು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: