ಕರ್ನಾಟಕಪ್ರಮುಖ ಸುದ್ದಿ

ನೋಸ್ಕಾಲ್ಪೆಲ್ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕರೆ

ರಾಜ್ಯ(ದಾವಣಗೆರೆ) ನ.30:- ನೋ-ಸ್ಕಾಲ್ಪೆಲ್ ವ್ಯಾಸೆಕ್ಟಮಿ ನೋವು ರಹಿತವಾದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯಾಗಿದ್ದು ಪುರುಷತ್ವಕ್ಕೆ ಯಾವುದೇ ರೀತಿಯ ಧಕ್ಕೆ ಬರುವುದಿಲ್ಲ. ಆದ ಕಾರಣ ಪುರುಷರು ಮುಜುಗರವಿಲ್ಲದೇ ಮುಂದೆ ಬರಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಹೇಳಿದರು.
ನಗರದ ನಿಟುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಭಾರತ್ ಕಾಲೋನಿ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಪಾಕ್ಷಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೋ-ಸ್ಕಾಲ್ಪೆಲ್ ವ್ಯಾಸೆಕ್ಟಮಿ ಪುರುಷರಿಗೆ ಇದೊಂದು ಸರಳ ವಿಧಾನವಾಗಿದ್ದು ಕುಟುಂಬ ಯೋಜನೆ ಕಾರ್ಯಕ್ರಮದಲ್ಲಿ ಪುರುಷರು ಹೆಚ್ಚು ಭಾಗಿಯಾಗಬೇಕು. ಅರ್ಹ ಫನಾನುಭವಿಗಳಿಗೆ ನ.21 ರಿಂದ 27 ರವರೆಗೆ ಜಿಲ್ಲೆಯಲ್ಲಿ ಜಾಗೃತಿ ಅಭಿಯಾನ ನಡೆಸಲಾಗಿದ್ದು, ನ.28 ರಿಂದ ಡಿ.04 ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನೋ-ಸ್ಕಾಲ್ಪೆಲ್ ವ್ಯಾಸೆಕ್ಟಮಿ ಶಿಬಿರ ನಡೆಯಲಿದೆ ಎಂದು ತಿಳಿಸಿದರು.
ನೋ-ಸ್ಕಾಲ್ಪೆಲ್ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆಯು ಸುರಕ್ಷತ, ಸುಲಭ ವಿಧಾನವಾಗಿದ್ದು, ವೃಷಣದಲ್ಲಿ ಉತತ್ಪಿಯಾಗುವ ವೀರ್ಯಾಣುಗಳು ಮಹಿಳೆಯರ ಗರ್ಭಕೋಶಕ್ಕೆ ತಲುಪದಂತೆ ಮಾಡುತ್ತದೆ. ಈ ಚಿಕಿತ್ಸೆಯು ಗಾಯವಿಲ್ಲದ, ಹೊಲಿಗೆ ಇಲ್ಲದ ಶಸ್ತ್ರಚಿಕಿತ್ಸೆಯಾಗಿದ್ದು 5 ರಿಂದ 10 ನಿಮಿಷದೊಳಗಾಗಿ ಚಿಕಿತ್ಸೆ ಮುಗಿಯುತ್ತದೆ. ನಂತರ ಹಿಂದಿನಂತೆ ಎಲ್ಲಾ ಕೆಲಸ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ತಹಸಿಲ್ದಾರ್ ಬಿ.ಎನ್. ಗಿರೀಶ್ ಮಾತನಾಡಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರವಾರು ಅರ್ಹ ಫಲಾನುಭವಿಗಳನ್ನು ಗುರುತಿಸಿ ಶಿಬಿರಕ್ಕೆ ಕರೆತರುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಿದರು.
ಪಾಕ್ಷಿಕದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್. ಉಮಾಪತಿ, ಡಾ.ವಿದ್ಯಾ, ಡಾ.ಸುನಿತಾ, ಗಾಯತ್ರಮ್ಮ, ವೆಂಕಟಚಾಲ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: