ಮೈಸೂರು

ರಾಜ್ಯ  ಅಭಿವೃದ್ಧಿ ಹೊಂದಲು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ : ಶಾಸಕ ಸಾ.ರಾ. ಮಹೇಶ್‌

ಮೈಸೂರು,ನ.30:-  ರಾಜ್ಯ  ಅಭಿವೃದ್ಧಿ ಹೊಂದಲು, ರೈತರು  ಉಳಿಯಲು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಆದ್ದರಿಂದ ಪ್ರಾದೇಶಿಕ ಪಕ್ಷವಾದ ಜೆಡಿಎಸ್‌   ಅಭ್ಯರ್ಥಿಗೆ  ಅತಿ ಹೆಚ್ಚು ಮತ ನೀಡಿ ಹೆಚ್ಚು ಅಂತರದಿಂದ ಗೆಲ್ಲಿಸುವ ಮೂಲಕ 2023ರ ವಿಧಾನ ಸಭಾ ಚುನಾವಣೆಯಲ್ಲಿ   ಮತ್ತೆ ಜೆಡಿಎಸ್‌   ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಿ ಎಂದು ಶಾಸಕ ಸಾ.ರಾ. ಮಹೇಶ್‌ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕೆ.ಆರ್.ನಗರ ಪಟ್ಟಣದ ಎಚ್‌.ಡಿ. ದೇವೇಗೌಡ   ಸಮುದಾಯದ ಭವನದಲ್ಲಿ ನಿನ್ನೆ ಮೈಸೂರು – ಚಾಮರಾಜನಗರ  ವಿಧಾನ ಪರಿಷತ್‌ ಜೆಡಿಎಸ್‌   ಅಭ್ಯರ್ಥಿ ಸಿ.ಎನ್‌. ಮಂಜೇಗೌಡರ  ಪರವಾಗಿ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೆಚ್‌.ಡಿ. ಕುಮಾರಸ್ವಾಮಿ   ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಕೆ.ಆರ್‌. ನಗರ ತಾಲೂಕಿನ ರೈತರ 100 ಕೋಟಿಗೂ ಹೆಚ್ಚು ಸಾಲ ಮನ್ನಾ ಮಾಡಿದ್ದಾರೆ ಎಂದು ತಿಳಿಸಿದರು.

ಕೆ.ಆರ್‌. ನಗರ   ಮತ್ತು ಸಾಲಿಗ್ರಾಮ ತಾಲೂಕಿನ ಒಟ್ಟು 34 ಪಂಚಾಯಿತಿಗಳಿಂದ 549 ಸದಸ್ಯರಲ್ಲಿ 349 ಹೆಚ್ಚು ಸದಸ್ಯರು ಜೆಡಿಎಸ್‌   ಸದಸ್ಯರಿದ್ದು 25 ಪಂಚಾಯಿತಿಗಳಲ್ಲಿ ನಮ್ಮ ಪಕ್ಷದವರೆ ಅಧ್ಯಕ್ಷರಾಗಿರುವುದರಿಂದ ಆಯಾ ಪಂಚಾಯಿತಿಗಳಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಅಭ್ಯರ್ಥಿಯಾದ ಸಿ.ಎನ್‌. ಮಂಜೇಗೌಡರಿಗೆ   ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ಅವರು ಮನವಿ ಮಾಡಿದರು.

ಹಿಂದೆ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಿ ಆಯ್ಕೆಯಾದವರು 12 ವರ್ಷಗಳಿಂದ ಅಧಿಕಾರ ಉಂಡು ನಮ್ಮ ಪಕ್ಷದ ಕಾರ್ಯಕರ್ತರ ಶ್ರಮದಿಂದ ನಮ್ಮ ನಾಯಕರ ಆರ್ಶೀವಾದಿಂದ ಗೆದ್ದು ನಮಗೆ ಮತ ಕೇಳದೇ ಬಿಜೆಪಿ – ಕಾಂಗ್ರೆಸ್‌ ಗೆ  ಮತ ಕೇಳುತ್ತಿರುವುದು ಎಷ್ಟು ಸರಿ ಅಂತವರಿಗೆ ಮುಂದೆ ಜನರೇ ಪಾಠ ಕಲಿಸುತ್ತಾರೆ ಎಂದು ಸಂದೇಶ ನಾಗರಾಜ್‌   ವಿರುದ್ದ ಪರೋಕ್ಷವಾಗಿ ವಾಗ್ದಾಲಿ ನಡೆಸಿದರು.

ಸಿ.ಎನ್‌. ಮಂಜೇಗೌಡರು ಸೈನಿಕರಾಗಿ ಸೇವೆ ಸಲ್ಲಿಸಿ ಪ್ರಾಮಾಣಿಕವಾಗಿ ತಮ್ಮ ಸೇವೆಯನ್ನು ರಾಜಕೀಯದಲ್ಲಿ   ತೊಡಗಿಸಿಕೊಂಡು, ಗ್ರಾಪಂ ಸದಸ್ಯರಾಗಿ, ಅಧ್ಯಕ್ಷರಾಗಿ, ಎಪಿಎಂಸಿ ಅಧ್ಯಕ್ಷರಾಗಿ, ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ   ಅಭ್ಯರ್ಥಿಯಾಗಿ ಕಡಿಮೆ ಅಂತರದಿಂದ ಪರಾಜಿತರಾಗಿ ಕಾಂಗ್ರೆಸ್‌ ನಿಂದ  ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಬಂದಿರುವ ಇವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮೈಸೂರು – ಚಾಮರಾಜನಗರ ವಿಧಾನ ಪರಿಷತ್‌ ಚುನಾವಣೆಯಲ್ಲಿ   ಸಿ.ಎನ್‌. ಮಂಜೇಗೌಡರು ಅಭ್ಯರ್ಥಿ ಎನ್ನದೇ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ   ಅವರೇ ಅಭ್ಯರ್ಥಿ ಎಂದು ತಿಳಿದು ಮತ ನೀಡಿ ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳು ಲೂಟಿ ಪಕ್ಷಗಳು. ಇವರ ನಾಯಕರನ್ನು ನೋಡಬೇಕಾದರೆ ದೆಹಲಿಗೆ ಹೋಗಬೇಕಾಗುತ್ತದೆ ಎಂದು ಕಿಡಿಕಾರಿದರು. ಜೆಡಿಎಸ್‌ ಪಕ್ಷವನ್ನು ಅಪ್ಪ ಮಕ್ಕಳ ಪಕ್ಷ ಎಂದು ಹೇಳುವ ಕಾಂಗ್ರೆಸ್‌ ಮುಖಂಡರು ರಾಷ್ಟಮಟ್ಟದಲ್ಲಿ ಕಾಂಗ್ರೆಸ್‌ ಅಮ್ಮ ಮಗನ ಪಕ್ಷವೇ? ರಾಜ್ಯದಲ್ಲಿ ಅಪ್ಪ ಮಗನ ಪಕ್ಷ ಎನ್ನ ಬೇಕೇ ಮತ್ತು ಬಿಜೆಪಿಯನ್ನು ಅಣ್ಣ-ತಮ್ಮಂದಿರ ಪಕ್ಷ ಎನ್ನಬೇಕೆ? ಎಲ್ಲ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣ ಇದ್ದೇ ಇದೆ. ಆದರೆ ಯಾವ ಪಕ್ಷದಿಂದ ರಾಜ್ಯದ ಅಭಿವೃದ್ಧಿ ಎಂಬುದು ಮುಖ್ಯ ಎಂದು   ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: