ಕ್ರೀಡೆದೇಶಪ್ರಮುಖ ಸುದ್ದಿವಿದೇಶ

7ನೇ ಬಾರಿಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ

ದೇಶ(ನವದೆಹಲಿ),ನ.30:- ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ಬ್ಯಾಲನ್ ಡಿ’ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೆಸ್ಸಿ ದಾಖಲೆಯ ಏಳನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. 34 ವರ್ಷದ ಮೆಸ್ಸಿ ಈ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಪೋರ್ಚುಗಲ್‌ ನ ಸ್ಟಾರ್ ಫುಟ್‌ ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಬೇಯರ್ನ್ ಮ್ಯೂನಿಚ್ ಸ್ಟಾರ್ ರಾಬರ್ಟ್ ಲೆವಾಂಡೋಸ್ಕಿ ಅವರನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮೊದಲು ಮೆಸ್ಸಿ 2009, 2010, 2011, 2012, 2015 ಮತ್ತು 2019 ರಲ್ಲಿ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು. ಬೇರೆ ಯಾವ ಆಟಗಾರರೂ ಕೂಡ ಇಷ್ಟು ಬಾರಿ ಈ ಪ್ರಶಸ್ತಿ ಗೆದ್ದಿಲ್ಲ.
ಮೆಸ್ಸಿ ನಂತರ, ಕ್ರಿಸ್ಟಿಯಾನೊ ರೊನಾಲ್ಡೊ ಹೆಚ್ಚು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2008, 2013, 2014, 2016, 2017 ವರ್ಷಗಳಲ್ಲಿ ರೊನಾಲ್ಡೊ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದಲ್ಲದೆ ಜೊಹಾನ್ ಕ್ರೂಫ್, ಮೈಕೆಲ್ ಪ್ಲಾಟಿನಿ, ಮಾರ್ಕೊ ವ್ಯಾನ್ ಬಾಸ್ಟನ್ 3-3 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಫ್ರೆಂಚ್ ಬೆಕನ್‌ ಬೌರ್, ರೊನಾಲ್ಡೊ ನಜಾರಿಯೊ, ಅಲ್ಫ್ರೆಡೊ ಡಿ ಸ್ಟೆಫಾನೊ, ಕೆವಿನ್ ಕೀಗನ್, ಕಾರ್ಲ್ ಹೈಂಜ್ 2-2 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಬ್ಯಾಲನ್ ಡಿ’ಓರ್ ಪ್ರಶಸ್ತಿಗಳನ್ನು ಫ್ರೆಂಚ್ ಫುಟ್‌ ಬಾಲ್ ಮ್ಯಾಗಜೀನ್ ಬ್ಯಾಲನ್ ಡಿ’ಓರ್ ನೀಡುತ್ತದೆ. ಈ ಪ್ರಶಸ್ತಿಯನ್ನು ಪ್ರತಿ ವರ್ಷ ಕ್ಲಬ್ ಮತ್ತು ರಾಷ್ಟ್ರೀಯ ತಂಡದಿಂದ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ನೀಡಲಾಗುತ್ತದೆ. ಇದು 1956 ರಲ್ಲಿ ಪ್ರಾರಂಭವಾಯಿತು. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ಸ್ಟಾನ್ಲಿ ಮ್ಯಾಥ್ಯೂಸ್ ಅವರಿಗೆ ನೀಡಲಾಯಿತು. ಅಂದಿನಿಂದ ಪ್ರತಿ ವರ್ಷ ನೀಡಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಅಂದರೆ 2018ರಿಂದ ಮಹಿಳಾ ಫುಟ್ಬಾಲ್ ಆಟಗಾರರಿಗೂ ಈ ಪ್ರಶಸ್ತಿ ನೀಡಲಾಗಿತ್ತು.(ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: