ಕರ್ನಾಟಕಪ್ರಮುಖ ಸುದ್ದಿಮೈಸೂರು

ಒಮಿಕ್ರಾನ್ ಮೈಸೂರು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ,ಆತಂಕ ಪಡುವ ಅಗತ್ಯವಿಲ್ಲ : ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು,ನ.30:- ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ, ಶಾಸಕ ಜಿ ಟಿ ದೇವೇಗೌಡ ಇಬ್ಬರು ಒಂದು ರೀತಿ ಲವ್ ಬರ್ಡ್ಸ್ ತರ‌ ಆಗಿದ್ದಾರೆ. ಇಬ್ಬರಿಗೂ ಯಾವಾಗ ಲವ್ ಆಗುತ್ತೆ, ಯಾವಾಗ  ಡಿವೋರ್ಸ್ ಆಗುತ್ತೆ ಅನ್ನೋದು ಅವರಿಗೇ ಗೊತ್ತು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಲೇವಡಿ ಮಾಡಿದರು.

ಮೈಸೂರಿನಲ್ಲಿಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು  ಅವರಿಬ್ಬರು ಯಾವಾಗ ಚೆನ್ನಾಗಿರ್ತಾರೋ, ಯಾವಾಗ ಕಿತ್ತಾಡ್ಕೋತಾರೋ‌ ಗೊತ್ತಿಲ್ಲ ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಸಂಕಲ್ಪ ಮಾಡಿ ಪೂಜೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಪೂಜೆ ಮಾಡಿದ ತಕ್ಷಣ ಯಾರೂ ಮುಖ್ಯಮಂತ್ರಿ ಆಗಲ್ಲ. ಪೂಜೆ ಮಾಡಿ ಮುಖ್ಯಮಂತ್ರಿ ಆಗೋ ಹಾಗಿದ್ದಿದ್ದರೆ  ಎಲ್ಲರೂ ಪೂಜೆ ಮಾಡಿಸುತ್ತಾ ಇದ್ದರು. ದೇವಸ್ಥಾನದ ಪೂಜೆಗೆ ಅಹ್ವಾನ ನೀಡಿದ್ದಾರೆ, ಹೀಗಾಗಿ ಅವರ ಜೊತೆಯಾಗಿ ಹೋಗಿದ್ದಾರೆ ಅಷ್ಟೇ. ನಾನೂ ಸಹ ಪೂಜೆಗೆ ಹೋಗಿ ಬಂದಿದ್ದೇನೆ. ಸಂಕಲ್ಪ ಮಾಡಿದ ಮಾತ್ರಕ್ಕೆ ಯಾರೂ ಕೂಡ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದೆ, ಅಲ್ಲೀವರೆಗೂ ಏನಾಗುತ್ತೋ ನೋಡೋಣ ಎಂದರು.

ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ  ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ.  ಎಲ್ಲಾ ಕಡೆ ಪಂಚಾಯಿತಿ ಮಟ್ಟದಲ್ಲಿ ಮತ ಕೇಳಿದ್ದೇವೆ. ನಾವು ಕೂಡ ಯಾರಿಗೂ ಎರಡನೇ ಪ್ರಾಶಸ್ತ್ಯ ಮತ ಕೇಳ್ತಿಲ್ಲ. ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಗೆಲ್ಲುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.

ಯಡಿಯೂರಪ್ಪನವರು ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲ ಕೋರುತ್ತಿರುವ ವಿಚಾರ ಕ್ಕೆ ಪ್ರತಿಕ್ರಿಯಿಸಿ  ಎಲ್ಲೆಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಿಲ್ಲವೋ ಅಂತಹ ಕಡೆಗಳಲ್ಲಿ ಮಾತ್ರ ಬೆಂಬಲ ಕೇಳ್ತಿದ್ದಾರೆ. ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಇರೋದ್ರಿಂದ ಆ ಪ್ರಶ್ನೆ ಇಲ್ಲಿ ಬರುವುದಿಲ್ಲ. ಇಲ್ಲಿ ಜೆಡಿಎಸ್ ಸಹಕಾರ ಕೋರುವ ವಿಚಾರ ನಮ್ಮ ಮುಂದಿಲ್ಲ ಎಂದರು.  ಜೆಡಿಎಸ್ ಅಭ್ಯರ್ಥಿ ಸಿ ಎನ್ ಮಂಜೇಗೌಡ ವಿರುದ್ದ ತಾವು ಮಾಡಿರುವ ಆರೋಪಕ್ಕೆ ಈಗಲೂ ಬದ್ಧ. ಅಗತ್ಯ ಬಿದ್ದಾಗ ಅವರು ಮಾಡಿರುವ ಅಕ್ರಮದ ದಾಖಲೆಗಳನ್ನು ಹೊರಹಾಕ್ತೇನೆ. ಮಂಜೇಗೌಡ ಬರೆದಿರುವ ಬಹಿರಂಗ ಪತ್ರ ನನ್ನ ಕೈ ಸೇರಿಲ್ಲ. ಪತ್ರ ಬಂದ ಬಳಿಕ ನಾನು ಅದಕ್ಕೆ ಉತ್ತರಿಸುತ್ತೇನೆ ಎಂದು ತಿಳಿಸಿದರು.

ಕೋವಿಡ್ ರೂಪಾಂತರಿ ಒಮಿಕ್ರಾನ್ ಮೈಸೂರು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ. ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇವೆ. ರಾಜ್ಯದ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಸಂಬಂಧ ಸಿಎಂ ಅವರು ನೇರವಾಗಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಹೆಚ್ಚಿನ ನಿಗಾ ವಹಿಸಿದ್ದಾರೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: