ಮೈಸೂರು

ಕನ್ನಡ ಭಾಷೆ ಬದುಕಿನ ದಿಕ್ಸೂಚಿ ಆಗಬೇಕು  :  ಡಾ. ವೈ.ಡಿ ರಾಜಣ್ಣ

ಮೈಸೂರು,ನ.30:- ಭಾಷಾವಾರು ಪ್ರಾಂತ್ಯಗಳ ರಚನೆಯ ಹಿನ್ನೆಲೆಯಲ್ಲಿ ಕರ್ನಾಟಕ ಉದಯವಾಗಿದೆ ಆದರೆ ಪ್ರಸ್ತುತ ಸಂದರ್ಭದಲ್ಲಿ ಇದು ಭೌಗೋಳಿಕವಾಗಿ ಏಕೀಕೃತ ಗೊಂಡಿದೆ ಭಾವನಾತ್ಮಕ ಇನ್ನೂ ಸಾಧ್ಯಗೊಂಡಿಲ್ಲ  .ಕನ್ನಡ ಆಡಳಿತ ಭಾಷೆಯಾಗಿ , ಉದ್ಯೋಗ ಭಾಷೆ ಆದಾಗ ಕನ್ನಡ ನಿಜ ಅರ್ಥದಲ್ಲಿ ನಮ್ಮ ಬದುಕಿನ ದಿಕ್ಸೂಚಿ ಆಗುವುದಕ್ಕೆ ಸಾಧ್ಯ ಎಂದು ಮೈಸೂರು ಸಾಹಿತ್ಯ ಲೋಕ ಸಂಸ್ಥೆಯ ಅಧ್ಯಕ್ಷರಾದ ಡಾ.ವೈ.ಡಿ ರಾಜಣ್ಣ ಅಭಿಪ್ರಾಯ ಪಟ್ಟರು.

ನಗರದ ರಾಮಕೃಷ್ಣ ನಗರದ ಮುಕ್ತ ಒಡ್ಡೋಲಗ ವೇದಿಕೆ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜಕುಮಾರ್ ನೆನಪು ಕಾರ್ಯಕ್ರಮ ಉದ್ಘಾಟನೆ  ನೆರವೇರಿಸಿ ಮಾತನಾಡಿದ   ಅವರು ಇತ್ತೀಚಿನ ದಿನಗಳಲ್ಲಿ ಕನ್ನಡಪರ ಸಂಘಟನೆಗಳು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ , ಕನ್ನಡಪರ ಸಂಘಟನೆ ಹಾಗೂ ಕಾರ್ಯಕ್ರಮಗಳಿಗೆ ಕೊರತೆ ಇಲ್ಲ ಆದರೆ ವಿದ್ಯಾರ್ಥಿಗಳಲ್ಲಿ , ಯುವ ಜನರಲ್ಲಿ ಕನ್ನಡ ಪ್ರೀತಿ , ಕನ್ನಡ ಪುಸ್ತಕ ಸಂಸ್ಕೃತಿಯ , ಓದಿನ ಅಭಿರುಚಿಯ ವಿಸ್ತಾರದ ಕಡೆ ಕನ್ನಡಪರ ಸಂಘಟನೆಗಳು ಗಮನ ಹರಿಸಬೇಕಿದೆ. ಕನ್ನಡ ಕೊರಳ ಭಾಷೆ ಆಗದೆ ಕರುಳಿನ ಭಾಷೆ ಆಗಬೇಕು. ಹಾಗಾದಾಗ ಮಾತ್ರ ಕನ್ನಡ ಇನ್ನಷ್ಟು ಉಜ್ವಲವಾಗಿ ನೆಲೆ ನಿಲ್ಲಲು ಸಾಧ್ಯ ಎಂದರು.

ಕನ್ನಡ ಮಣ್ಣಿನ ಸಂಸ್ಕೃತಿಯನ್ನು ಪಸರಿಸುವಲ್ಲಿ ಯುವಕರಿಗೆ ಮಾದರಿ ಆಗಿದ್ದವರು ಪುನೀತ್ ರಾಜ್‍ಕುಮಾರ್. ಪುನೀತ್ ಅವರು ಕೇವಲ ಅಭಿನಯಕ್ಕೆ ಸೀವಿತವಾಗದೇ ಸಾಮಾಜಿಕ ಹೊಣೆಗಾರಿಕೆಯ ಯುವ ಕಲಾವಿದರಾಗಿದ್ದರು. ಸಮಾಜದ ವಿವಿಧ ಸ್ತರದ ಬಡವರಿಗೆ , ನಿರ್ಗತಿಕರಿಗೆ , ವೃದ್ಧರಿಗೆ ಆಶ್ರಯದಾತರಾಗಿದ್ದರು.  ಆ ಮೂಲಕ ತಮ್ಮ ಅಸ್ಮಿತೆಯನ್ನು ಬೆಳೆಸಿಕೊಂಡಿದ್ದರು. ಇದು ಇಂದಿನ ಯುವಕರಿಗೆ ಸದಾ ಮಾದರಿ ಹಾಗೂ ಅನುಕರಣೀಯ ಎಂದು ತಿಳಿಸಿದರು

ಮುಕ್ತ ಒಡ್ಡೋಲಗದ ಅಧ್ಯಕ್ಷರಾದ ಎ.ಎಸ್ ನಾಗರಾಜ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಡಾ‌.ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ಡಾ‌‌‌.ಹೆಚ್‌‌.ಎಸ್ ಶಿವಬಸಪ್ಪ,ಸಂಘಟನಾ ಕಾರ್ಯದರ್ಶಿ ಡಾ.ಡಿ‌.ಟಿ ಜಯರಾಂ ಮತ್ತು ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಸ್ಥಳೀಯ ಗಾಯಕರು ನಡೆಸಿಕೊಟ್ಟರು.    ಪುನೀತ್ ನೆನಪಿನ ಗಾಯನ ಆಕರ್ಷಣೆಯಾಗಿ ಮೂಡಿ ಬಂತು.  ಮಹಿಳಾ ಸಂಘಟನೆಗಳು ಹಾಗೂ ಗಣಪತಿ ದೇವಸ್ಥಾನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: