ಮೈಸೂರು

ಪ್ರಕೃತಿಯಲ್ಲಿ ಬದುಕಲು ಯೋಗ್ಯತೆ ಇರಬೇಕು : ಡಾ. ಎಸ್.ವಿ. ನರಸಿಂಹನ್

ಮೈಸೂರು,ನ.30:- ಪ್ರಕೃತಿಯಲ್ಲಿ ಬದುಕಲು ಯೋಗ್ಯತೆ ಇರಬೇಕು ಆದರೆ ಮನುಷ್ಯ ಅದನ್ನು ಗಳಿಸುವಲ್ಲಿ ವಿಫಲನಾಗುತ್ತಿದ್ದಾನೆ ಎಂದು ವಿರಾಜಪೇಟೆಯ ಖ್ಯಾತ ವೈದ್ಯರಾದ ಡಾ. ಎಸ್.ವಿ. ನರಸಿಂಹನ್‍ ಅವರು ಹೇಳಿದರು.
ಮೈಸೂರು ಜೆಎಸ್‍ಎಸ್ ಮಹಾವಿದ್ಯಾಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ವತಿಯಿಂದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಏರ್ಪಡಿಸಿದ್ದ ‘ಜ್ಞಾನವಾರಿಧಿ-52’ ಡಿಜಿಟಲ್ ಸಾಪ್ತಾಹಿಕ ಉಪನ್ಯಾಸ ಕಾರ್ಯಕ್ರಮದಲ್ಲಿ “ಜೀವ ವೈವಿಧ್ಯತೆ ಮತ್ತು ಭಾರತೀಯ ಸಂಸ್ಕೃತಿ” ವಿಷಯ ಕುರಿತು ಉಪನ್ಯಾಸ ನೀಡಿದರು. ಪ್ರಕೃತಿಯಲ್ಲಿ ಸಮತೋಲನ ಬಹಳ ಮುಖ್ಯ. ಅದರಲ್ಲಿನ ಆಹಾರ ಸರಪಳಿಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ವಿನಾಶ ಕಟ್ಟಿಟ್ಟ ಬುತ್ತಿ. ಅದು ಪರಿಸರದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಇಲ್ಲಿ ಒಂದು ಜೀವಿಯು ಇನ್ನೊಂದು ಜೀವಿಯನ್ನು ಅವಲಂಬಿಸಿರುತ್ತದೆ. ಇದು ಪ್ರಕೃತಿಯ ನಿಯಮ. ಜೀವಿಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಚಿಕ್ಕ ಜೀವಿಯಿಂದ ಹಿಡಿದು ದೊಡ್ಡ ಜೀವಿಗಳವರೆಗೂ ಪ್ರಕೃತಿಗೆ ಎಲ್ಲವೂ ಅನಿವಾರ್ಯ. ನಾವು ಇಲ್ಲಿ ಇರುವುದು ಅನಿವಾರ್ಯ ಎನ್ನುವುದನ್ನೂ ಪ್ರಕೃತಿಗೆ ಮನವರಿಕೆ ಮಾಡಬೇಕು. ಪ್ರಕೃತಿಗೆ ಮಾನವನ ಕೊಡುಗೆ ಶೂನ್ಯ. ಭಾರತೀಯರು ಪ್ರಕೃತಿಯಲ್ಲಿ ನಂಬಿಕೆಯಿಟ್ಟವರು. ದೈವೀ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಜೀವ ವೈವಿಧ್ಯತೆ ವ್ಯವಸ್ಥೆಯನ್ನು ಭಾರತೀಯರು ತಮ್ಮ ಸಾಮಾಜಿಕ ಜೀವನಕ್ಕೆ ಅಳವಡಿಸಿಕೊಂಡಿದ್ದಾರೆ. ನಮ್ಮಲ್ಲಿ ಎಲ್ಲ ಜೀವಿಗಳಿಗೂ ದೈವತ್ವದ ಸ್ಥಾನವನ್ನು ನೀಡಲಾಗಿದೆ. ಇದು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ತಿಳಿಸಿದರು.
ಉಪನ್ಯಾಸದ ನಂತರ ವೀಕ್ಷಕರ ಆಯ್ದ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಆನ್‍ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಜಿಜ್ಞಾಸುಗಳು, ಸಾರ್ವಜನಿಕರು ಭಾಗವಹಿಸಿದ್ದರು. ರೂಪ ಗುರುಪ್ರಸಾದ್ ಪ್ರಾರ್ಥಿಸಿದರು. ಕುಮಾರಸ್ವಾಮಿ ವಿರಕ್ತಮಠ ಕಾರ್ಯಕ್ರಮ ನಿರ್ವಹಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: