ಮೈಸೂರು

ಮೂಲಭೂತ ಸೌಕರ್ಯವಿಲ್ಲದೆ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಪರದಾಟ :ನಂಜನಗೂಡಿನ ದೊಡ್ಡಕವಲಂದೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅವ್ಯವಸ್ಥೆ

ಮೈಸೂರು,ನ.30:-   ಶೌಚಾಲಯವಿಲ್ಲದೆ   ವಿದ್ಯಾರ್ಥಿಗಳು ಬಯಲಿಗೆ ತೆರಳಬೇಕಾದ ಪರಿಸ್ಥಿತಿ.  ಕುಡಿಯಲು ನೀರಿಲ್ಲ. ಮಳೆ ಬಂದರೆ ಸೋರುವ ಕೊಠಡಿಗಳು. ಉದುರುವ  ಕಾಲೇಜು ಕೊಠಡಿ ಮೇಲ್ಛಾವಣಿ ಇವೆಲ್ಲಕಂಡು ಬರುವುದು ನಂಜನಗೂಡಿನ ದೊಡ್ಡಕವಲಂದೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಲ್ಲಿ  ಯಾವುದೇ ಮೂಲಭೂತ ಸೌಕರ್ಯವಿಲ್ಲ.

ದಶಕಗಳೇ ಕಳೆದರೂ ಆ ಕಾಲೇಜಿನ ವಿದ್ಯಾರ್ಥಿಗಳಿಗೆ ಬಯಲೇ ಶೌಚಾಲಯ, ಕುಡಿಯುವ ನೀರಿಲ್ಲ, ಮಳೆ ಬಂದರೆ ಸೋರುವ ಕೊಠಡಿಗಳು, ಪಾಠ ಕೇಳುವಾಗ ಉದುರಿ ಬೀಳುವ ಮೇಲ್ಛಾವಣಿ ಇದು ವಿದ್ಯಾರ್ಥಿಗಳ ಸ್ಥಿತಿ,  ಇದು ದೇವರಿಗೆ ಪ್ರೀತಿ. ಎನ್ನುವಂತಿದೆ ಈ ಕಾಲೇಜು ಪರಿಸ್ಥಿತಿ.  ಇದು ಶಾಸಕ ಬಿ.ಹರ್ಷವರ್ಧನ್ ಪ್ರತಿನಿಧಿಸುವ ನಂಜನಗೂಡು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ದೊಡ್ಡಕವಲಂದೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಸ್ತುಸ್ಥಿತಿ.

ಚಾಮರಾಜನಗರ ಮತ್ತು ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ದೊಡ್ಡಕವಲಂದೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರ ವ್ಯಾಪ್ತಿಗೂ ಬರುತ್ತದೆ. 1996ರಲ್ಲಿ ದೊಡ್ಡಕವಲಂದೆ ಗ್ರಾಮದಲ್ಲಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾರಂಭಗೊಂಡು  8ನೇ ತರಗತಿಯಿಂದ ದ್ವಿತೀಯ ಪಿಯುಸಿ ಯವರೆಗೆ ಒಟ್ಟಿಗೆ ನಡೆಸಲಾಯಿತು. 2007ರಲ್ಲಿ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ವಿಭಜನೆಗೊಂಡು 8ನೇ ತರಗತಿಯಿಂದ 10ನೇ ತರಗತಿಗೆ ಪ್ರೌಢ ಶಾಲೆ ಎಂದು ನಾಮಕರಣ ಮಾಡಲಾಯಿತು. ನಂತರ ದೊಡ್ಡಕವಲಂದೆ ಹೋಬಳಿಯ ಮಟ್ಟದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಎಂದು ಮುಂದುವರಿದು ನಡೆಯುತ್ತಿದೆ.  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಿದ್ದು,,  ಕಳೆದ 8 ವರ್ಷಗಳಿಂದ ಉತ್ತಮಫಲಿತಾಂಶ ಕೂಡ ಬರುತ್ತಿದೆ ಇನ್ನು ಈ ಕಾಲೇಜಿಗೆ ಅಕ್ಕ ಪಕ್ಕದ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳಿಂದ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಸೈಕಲ್ ತುಳಿದುಕೊಂಡು ಬರುತ್ತಾರೆ.  ಆದರೆ,  ಕಾಲೇಜಿನಲ್ಲಿ ಆ ಮಕ್ಕಳಿಗೆ ಕುಡಿಯುವ ನೀರಿಲ್ಲ, ಶೌಚಾಲಯವಿಲ್ಲ, ವಿದ್ಯಾಭ್ಯಾಸ ಮಾಡಲು ಸಮರ್ಪಕ ಕೊಠಡಿಗಳೂ ಇಲ್ಲ.

ಕುಡಿಯುವ ನೀರಿಗೆ ವಿದ್ಯಾರ್ಥಿಗಳು ಕಾಲೇಜು ಬಳಿಯ ಹೋಟೆಲ್ ಗಳಿಗೆ ಹೋಗಿ ನೀರನ್ನು ಕುಡಿಯುವ ಪರಿಸ್ಥಿತಿ ಇದ್ದು  ಇನ್ನೂ ಹೆಣ್ಣು ಮಕ್ಕಳಿಗೆ ಶೌಚ ಗೃಹವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು  ವಿದ್ಯಾರ್ಥಿನಿಯರ ಗೋಳು ಆ ದೇವರಿಗೆ ಗೊತ್ತು.  ಸರ್ಕಾರ ಕೋಟ್ಯಾಂತರ ಅನುದಾನವನ್ನು ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿದರೂ ಇಲ್ಲಿಯ ತನಕ ತಲುಪಿಲ್ಲ ಎನ್ನುವುದಕ್ಕೆ ಈ ಕಾಲೇಲು  ಸ್ಪಷ್ಟ ಉದಾಹರಣೆಯಾಗಿದೆ  ಎಂಬುದು ಇಲ್ಲಿನ ವಿದ್ಯಾರ್ಥಿಗಳ ವಾದ

ಶೌಚಾಲಯದ ಸಮಸ್ಯೆ ಒಂದೆಡೆಯಾದರೆ  ಮಳೆ ಬಂದರೆ ಕಾಲೇಜಿನ ಕೊಠಡಿಗಳು ಸೋರುತ್ತವೆ ಇದರಿಂದ ಪಾಠ ಪ್ರವಚನಗಳಿಗೆ ತುಂಬಾ ತೊಂದರೆಯಾಗಿದ್ದು, ತಾರಸಿಯ ತೊಕ್ಕೆ ವಿದ್ಯಾರ್ಥಿಗಳ ಮೇಲೆ ಬೀಳುತ್ತದೆ, ಕಟ್ಟಡ ಬಿರುಕು ಬಿಟ್ಟಿದ್ದು ಯಾವಾಗ ಬೇಕಾದರೂ ಕುಸಿದು ಬೀಳುವ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ. ಕೂಡಲೇ ಕಾಲೇಜಿಗೆ ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕೊಠಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಇಲ್ಲಿನ ಸ್ಥಳಿಯರು ಒತ್ತಾಯಿಸಿದ್ದಾರೆ . ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ ಎಂದ ವೇದಿಕೆಗಳ ಮೇಲೆ ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳ ಕಣ್ಣಿಗೆ  ಈ ಕಾಲೇಜು ಕಂಡಿಲ್ಲವೇ ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿದ್ದು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ವಿದ್ಯಾರ್ಥಿಗಳ  ಸಮಸ್ಯೆ  ಬಗೆಹರಿಸಲು ಮುಂದಾಗಬೇಕಿದೆ. (ಕೆ.ಎಸ್,ಎಸ್,ಎಚ್)

Leave a Reply

comments

Related Articles

error: