ಮೈಸೂರು

ಕನ್ನಡ ಭಾಷೆಯು ಮನೆಯೊಳಗೆ ಸೀಮಿತವಾಗಿರದೆ ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳಗುವಂತೆ ಮಾಡಬೇಕಿದೆ : ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು,ಡಿ.1:- ಕನ್ನಡ ಭಾಷೆಯು ಮನೆಯೊಳಗೆ ಸೀಮಿತವಾಗಿರದೆ ರಾಷ್ಟ್ರೀಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳಗುವಂತೆ ಮಾಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಇಂದು ಮಾನಸಗಂಗೋತ್ರಿಯ  ಕುವೆಂಪು ಅಧ್ಯಯನ ಸಂಸ್ಥೆ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ  ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ಒಂದು ದಿನದ ಉತ್ಸವವಲ್ಲ, ಬದುಕಿನುದ್ದಕ್ಕೂ ಕನ್ನಡವನ್ನು ಪ್ರೀತಿಸುತ್ತ ಕನ್ನಡಾಂಬೆಯ ಸೇವೆಯನ್ನು ನಾವುಗಳೆಲ್ಲರೂ ಮಾಡುವಂತಾಗಬೇಕು ಎಂದರು.

ನಮ್ಮ ಮಕ್ಕಳನ್ನು ಕನ್ನಡದಲ್ಲಿಯೇ ಅಭ್ಯಸಿಸುವಂತೆ ಪ್ರೇರೇಪಿಸಿ ಕನ್ನಡವನ್ನು ಇನ್ನೂ ಎತ್ತರಕ್ಕೆ ಏರಿಸಬೇಕು. ಬೇರೆ ಭಾಷೆಯ ಬಗ್ಗೆ ಅರಿವಿರಬೇಕು. ಆದರೆ ಕನ್ನಡ ಭಾಷೆಯೇ, ನಮ್ಮ ಮೊದಲ ಭಾಷೆಯಾಗಿರಬೇಕು. ಅದರಲ್ಲೇ ವ್ಯವಹರಿಸಿದಾಗ ಮಾತ್ರ ನಮ್ಮ ಭಾಷೆಯು ರಾಜ್ಯಗಳಲ್ಲಿ ಮತ್ತು ದೇಶದಲ್ಲಿ ಬಳಕೆಗೆ ಮತ್ತು ಬೆಳಕಿಗೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿ೦ದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ  ಉದ್ದೇಶದಿ೦ದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕರ್ನಾಟಕ   ಏಕೀಕರಣವಾಗಲು ನಾಡಿನ ಹಲವು ಕವಿಗಳು. ಸಾಹಿತಿಗಳು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರ, ಈ ಸಾಧಕರು ಸಾರಿದಂತಹ ಸಾಧನೆಯನ್ನು ನಾವುಗಳು ಮನಗಂಡು ಕನ್ನಡವನ್ನು ಕಲಿಯಬೇಕು. ನಮ್ಮ ಮಕ್ಕಳಿಗೂ ಮುಂದಿನ ಪೀಳಿಗೆಗೂ ಇದರ ಮಹತ್ವವನ್ನು ಸಾರುವಂತಹ ಕೈಂಕರ್ಯವನ್ನು ಕೈಗೊಂಡಾಗ ಮಾತ್ರ ಕನ್ನಡವನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ ಎಂದರು.

ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್, ಅನಕೃ, ಕೆ.ಶಿವರಾಮ ಕಾರಂತ, ಕುವೆ೦ಪು, ಮಾಸ್ತಿ ವೆಂಕಟೇಶ  ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ.ಎಂ ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್, ಗೋರೂರು  ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ ಸೇರಿದಂತೆ ನೂರಾರು ಮಹನೀಯರು, ಲಕ್ಷಾಂತರ ಜನರ ಹೋರಾಟದ ಫಲವಾಗಿ ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ ಎಂದು ತಿಳಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇನ್ನು ಮುಂದೆ ಪ್ರತಿ ವರ್ಷವು ಕನ್ನಡ ರಾಜ್ಯೋತ್ಸವದ ದಿನದಂದೇ ಕನ್ನಡ ರಾಜ್ಯೋತ್ಸವವನ್ನು ಹಮ್ಮಿಕೊಂಡು ಆ ದಿನ ಒಂದು ಕೃತಿಗಳ ಬಿಡುಗಡೆ ಅಥವಾ ಗ್ರಂಥಗಳ ಬಿಡುಗಡೆ ಕಾರ್ಯಕ್ರಮವನ್ನು, ಹಾಗೂ ಕನ್ನಡದಲ್ಲಿ ಸಾಧನೆಗೈದಿರುವ ಸಾಹಿತಿಗಳಿಗೆ ವಿದ್ಯಾರ್ಥಿಗಳಿಗೆ ಅಭಿನಂದನೆಯನ್ನು ಸಲ್ಲಿಸುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: