ಕರ್ನಾಟಕಪ್ರಮುಖ ಸುದ್ದಿ

ಹೆಚ್‍ಐವಿ ಸೋಂಕಿತರಿಗೆ ಸಾಮಾಜಿಕ ತಾರತಮ್ಯ ಸಲ್ಲದು : ಡಾ. ಗಂಗಾಧರ್

ರಾಜ್ಯ(ದಾವಣಗೆರೆ) ಡಿ. 2 :- ಹೆಚ್‍ಐವಿ ಸೋಂಕಿತರೊಂದಿಗೆ ಕುಳಿತು ಊಟ ಮಾಡಿದರೆ ಅಥವಾ ಒಂದೇ ಮನೆಯಲ್ಲಿ ವಾಸವಿದ್ದ ಮಾತ್ರಕ್ಕೆ ಸೋಂಕು ಇತರರಿಗೆ ಹರಡುವುದಿಲ್ಲ. ಹೀಗಾಗಿ ಹೆಚ್‍ಐವಿ ಸೋಂಕಿತರನ್ನು ಸಾಮಾಜಿಕವಾಗಿ ದೂರವಿರಿಸುವುದು ಸರಿಯಲ್ಲ ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ಕೆ.ಹೆಚ್. ಗಂಗಾಧರ್ ಹೇಳಿದರು.
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಇಲಾಖೆ, ಎನ್‍ಎಸ್‍ಎಸ್, ಎನ್‍ಸಿಸಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ  ಏರ್ಪಡಿಸಲಾದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಚ್‍ಐವಿ, ಏಡ್ಸ್ ಸೋಂಕು ಹೊಂದಿರುವವರ ಜೊತೆಯಲ್ಲಿ ಕುಳಿತರೆ, ಜೊತೆಯಲ್ಲಿ ಊಟ ತಿಂಡಿ, ಬಟ್ಟೆ ಹಂಚಿಕೊಳ್ಳುವುದರಿಂದ, ಸೊಳ್ಳೆ ಕಚ್ಚುವುದರಿಂದ, ಒಂದೇ ಸ್ನಾನದ ಮನೆ, ಅಡುಗೆ ಮನೆ, ಶೌಚಾಲಯ ಬಳಸುವುದರಿಂದ ಸೋಂಕು ಇತರರಿಗೆ ಹರಡುವುದಿಲ್ಲ. ಸೋಂಕಿತರೊಂದಿಗೆ ಅಸುರಕ್ಷಿತ ಲೈಂಗಿಕತೆ, ಸೋಂಕಿತರಿಂದ ಪಡೆಯುವ ರಕ್ತದಾನದಿಂದ, ಸಂಸ್ಕರಣೆ ಮಾಡದ ಸೂಜಿ, ಸಿರಿಂಜ್ ಬಳಕೆಯಿಂದ ಹೆಚ್‍ಐವಿ ಸೋಂಕು ಇತರರಿಗೆ ಹರಡುತ್ತದೆ. ಹೀಗಾಗಿ ಸೋಂಕಿತರನ್ನು ಸಾಮಾಜಿಕವಾಗಿ ದೂರವಿರಿಸುವುದು, ತಿರಸ್ಕರಿಸುವುದು ಸರಿಯಲ್ಲ. ಹೆಚ್‍ಐವಿ ಸೋಂಕಿತರು ವೈದ್ಯರ ಸಲಹೆಯಂತೆ ಸರಿಯಾದ ಕ್ರಮದಲ್ಲಿ ನಿತ್ಯ ಔಷಧ ಸೇವನೆಯಿಂದ ಹಾಗೂ ಆರೋಗ್ಯಕರ ಜೀವನ ಶೈಲಿ ಅನುಸರಿಸಿದರೆ ಸಾಮಾನ್ಯರಂತೆ ಬದುಕಬಹುದು ಎಂದರು.
‘ಅಸಮಾನತೆಗಳನ್ನು ಕೊನೆಗೊಳಿಸಿ- ಏಡ್ಸ್ ಕೊನೆಗೊಳಿಸಿ. ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ’ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತಿದೆ. ಹೆಚ್‍ಐವಿ ಸೋಂಕಿತರ ಸಂಖ್ಯೆಯಲ್ಲಿ ದಾವಣಗೆರೆ ಜಿಲ್ಲೆ ರಾಜ್ಯದಲ್ಲಿ 13 ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಳೆದ 2007 ರಿಂದ 2021 ರ ಅಕ್ಟೋಬರ್ ಅಂತ್ಯದವರೆಗೆ ಒಟ್ಟು 6.24 ಲಕ್ಷ ಜನರಿಗೆ ಹೆಚ್‍ಐವಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 12270 ಜನರಲ್ಲಿ ಸೋಂಕು ಇರುವುದು ಕಂಡುಬಂದಿದೆ. ಇದೇ ಅವಧಿಯಲ್ಲಿ 4.72 ಲಕ್ಷ ಗರ್ಭಿಣಿಯರಿಗೆ ಹೆಚ್‍ಐವಿ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 543 ಗರ್ಭಿಣಿಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೆಚ್‍ಐವಿ ಸೋಂಕಿತರಿಗೆ ಈ ಮೊದಲು ಉತ್ತಮ ಚಿಕಿತ್ಸೆಗೆ ಬೆಂಗಳೂರಿಗೆ ಶಿಫಾರಸು ಮಾಡಬೇಕಿತ್ತು. ಆದರೆ ಇದೀಗ ದಾವಣಗೆರೆ ಜಿಲ್ಲೆಯಲ್ಲಿಯೇ ಸೋಂಕಿತರಿಗೆ ಉತ್ತಮವಾದ ಹಾಗೂ ಉಚಿತವಾಗಿ ಚಿಕಿತ್ಸೆ ನೀಡುವ ಸೌಲಭ್ಯ ಲಭ್ಯವಿದೆ. ಜಿಲ್ಲೆಯಲ್ಲಿ ಈವರೆಗೆ ಎಆರ್‍ಟಿ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಒಟ್ಟು 13905 ಸೋಂಕಿತರು ನೊಂದಣಿ ಮಾಡಿಕೊಂಡಿದ್ದಾರೆ. ಪ್ರಸ್ತುತ 1925 ಪುರುಷರು ಹಾಗೂ 2528 ಮಹಿಳೆಯರು, 162 ಮಕ್ಕಳು ಎಆರ್‍ಟಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 3899 ಜನ ಹೆಚ್‍ಐವಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಡಾ. ಗಂಗಾಧರ್ ಹೇಳಿದರು.
ಹೆಚ್‍ಐವಿ/ಏಡ್ಸ್ ಸಾಮಾಜಿಕ ಕಳಕಳಿ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಕುರಿತು ಮಾತನಾಡಿದ ಬಿಎಸ್‍ಸಿ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಅಣ್ಣೇಶ ಪಿ. ಅವರು, ಹೆಚ್‍ಐವಿ ಸೋಂಕಿತರು, ಸೋಂಕು ದೃಢಪಟ್ಟ ಕೂಡಲೆ ಜೀವನವೇ ಮುಗಿದುಹೋಯಿತು ಎಂಬ ರೀತಿ ಆತಂಕಪಡುತ್ತಾರೆ. ಸೋಂಕು ಇರುವವರೆಲ್ಲರೂ ತಕ್ಷಣ ಸಾಯುವುದಿಲ್ಲ. ದೈನಂದಿನ ಚಟುವಟಿಕೆ, ಆರೋಗ್ಯಕರ ಜೀವನಶೈಲಿ, ಉತ್ತಮ ಆಹಾರ ಕ್ರಮ ಅಳವಡಿಸಿಕೊಂಡರೆ, ಸಾಮಾನ್ಯರಂತೆಯೇ ಅವರೂ ಬದುಕಬಹುದು. ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ, ಕೂಡಲೆ ಸ್ವಯಂ ಪ್ರೇರಿತವಾಗಿ ಪರೀಕ್ಷೆಗೆ ಒಳಗಾಗುವುದು ಬಹುಮುಖ್ಯ. ಪರೀಕ್ಷೆಗೆ ಅಥವಾ ಮಾಹಿತಿ ನೀಡಲು ಹಿಂಜರಿಯುವುದರಿಂದ ವೈಯಕ್ತಿಕ ಹಾಗೂ ಕುಟುಂಬಕ್ಕೆ ನಷ್ಟ. ಹೆಚ್‍ಐವಿ ಸೋಂಕಿತರು ಕೂಡ ಕೋವಿಡ್ ನಿರೋಧಕ ಲಸಿಕೆ ಪಡೆಯಲು ಯಾವುದೇ ತೊಂದರೆಯಿಲ್ಲ. ಈ ಕುರಿತು ಅನೇಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲಾಗುತ್ತಿದೆ. ಸೋಂಕಿತರನ್ನು ಕುಟುಂಬದವರು ದೂರ ಮಾಡುವುದು ಸರಿಯಲ್ಲ. ಆತ್ಮಸ್ಥೈರ್ಯ ಸೋಂಕಿತರನ್ನು ದೀರ್ಘಾಯುಷಿಗಳನ್ನಾಗಿಸುತ್ತದೆ. 2030 ರೊಳಗೆ ದೇಶವನ್ನು ಏಡ್ಸ್ ಮುಕ್ತಗೊಳಿಸುವ ಗುರಿಯಿದ್ದು, ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ದೇಶವನ್ನು ಏಡ್ಸ್ ಮುಕ್ತಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ. ನೀಲಕಂಠ ಅವರು ಮಾತನಾಡಿ, ಹೆಚ್‍ಐವಿ/ಏಡ್ಸ್ ರೋಗಕ್ಕೆ ಇದುವರೆಗೂ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಸೋಂಕು ಬಾರದಂತೆ ಮುಂಜಾಗ್ರತೆ ವಹಿಸುವುದು ಒಂದೇ ಮನುಕುಲಕ್ಕೆ ಸದ್ಯದ ಮಟ್ಟಿಗೆ ಇರುವ ದಾರಿ. ಸೋಂಕಿತರಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಬೆಂಬಲ ದೊರೆತಾಗ ಮಾತ್ರ, ಅವರೂ ಕೂಡ ಸಮಾಜದಲ್ಲಿ ಸಹಜ ಬದುಕು ಕಂಡುಕೊಳ್ಳಲು ಸಾಧ್ಯ ಎಂದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ಜಯಪ್ರಕಾಶ್, ಎಆರ್‍ಟಿ ಪ್ಲಸ್ ಕೇಂದ್ರದ ನೋಡಲ್ ಅಧಿಕಾರಿ ಡಾ. ಜಿ. ಶಿವರಾಜ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆ ನಿವಾಸಿ ವೈದ್ಯಾಧಿಕಾರಿ ಡಾ. ಮಂಜುನಾಥ ಪಾಟೀಲ್, ಡಾ. ಡಿ.ಹೆಚ್. ಗೀತಾ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಕಲಾವಿದ ರವಿಕುಮಾರ್ ತಂಡದಿಂದ ಏಡ್ಸ್ ಜಾಗೃತಿ ಕುರಿತು ಕಿರುನಾಟಕವನ್ನು ಇದೇ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.
ಏಡ್ಸ್ ನಿಯಂತ್ರಣ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ವಿವಿಧ ಸಂಸ್ಥೆಗಳಿಗೆ, ಕಾಲೇಜುಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು. ಏಡ್ಸ್ ಜಾಗೃತಿ ಕುರಿತು ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಚಿತ್ರಕಲೆ, ಕ್ವಿಜ್ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: