ಮೈಸೂರು

ಧ್ಯೇಯ ದೊಡ್ಡದಾಗಿದ್ದರೆ ಮಾತ್ರ ಗುರಿ ತಲುಪಲು ಸಾಧ್ಯ :  ಪ್ರೊ. ಹೆಚ್.ಎಂ. ರಾಜಶೇಖರ್

ಮೈಸೂರು, ಡಿ.2:- ನಗರದ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಿನ್ನೆ ಲಕ್ಷ್ಮಿಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕರ್ನಾಟಕ ಸರ್ಕಾರ ನಡೆಸಲಿರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾ ಉಚಿತ ತರಬೇತಿ ಶಿಬಿರವನ್ನು ಮೈಸೂರು ವಿಶ್ವವಿದ್ಯಾನಿಲಯದ ಎಮಿರೇಟಿಸ್ ಪ್ರಾಧ್ಯಾಪಕ ಪ್ರೊ. ಹೆಚ್.ಎಂ ರಾಜಶೇಖರ್  ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು  ಪತ್ರಿಕೆ, ನಿಯತಕಾಲಿಕೆ, ಸಂಶೋಧನಾ ಲೇಖನ, 24 ಗಂಟೆ ಓದಬೇಕು, ಓದುವಾಗ ಭಾಷೆ ಬೇಕು, ಇವತ್ತಿನ ದಿನಗಳಲ್ಲಿ ಓದುವುದನ್ನು ಕಲಿಯಬೇಕು ಇವತ್ತಿನ ದಿನಗಳಲ್ಲಿ ಓದುವುದು ಕಡಿಮೆಯಾಗಿದೆ. ಯಾವುದೇ ಭಾಷೆಗೆ ಜಾತಿ, ಧರ್ಮವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಹ ಮನಸ್ಸಿಟ್ಟು ಓದಬೇಕು. ಹಿಂದಿಯು ಸಹ ಒಂದು ಭಾಷೆಯಾಗಿ ಓದಬೇಕು. ಹಲವಾರು ಜನರು ಅದನ್ನು ರಾಜಕೀಯಕ್ಕೆ ಮಾತ್ರ ಬಳಕೆ ಮಾಡಿ ಪ್ರಚಾರ ಮಾಡುತ್ತಾರೆ. ಅದನ್ನು ಬಿಟ್ಟು ಒಂದು ಜ್ಞಾನ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾತ್ರ ಗಮನವಿಟ್ಟು ಓದಬೇಕು ಎಂದರು.

ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ. ತಂತ್ರಜ್ಞಾನವನ್ನು ಉಪಯೋಗಿಸುವ ಕಲೆಯನ್ನು ತಿಳಿದು ಅದಕ್ಕೆ ಬೇಕಾಗುವ ರೀತಿಯಲ್ಲಿ ಬಳಕೆ ಮಾಡಬೇಕು.

ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸ್ವಯಂ ನಿರ್ಧಾರ ಮಾಡಿಕೊಳ್ಳಬೇಕು. ಉತ್ತರ ಭಾರತದ ಜನರಿಗೆ ಭಾಷೆಯ ಮೇಲೆ ಹಿಡಿತ ಇರುವ ಹಾಗೇ ದಕ್ಷಿಣ ಭಾಗದ ಜನರಲ್ಲಿ ಭಾಷೆಯ ಮೇಲೆ ಹಿಡಿತವಿಲ್ಲ. ಮೊದಲು ಎಲ್ಲಾ ಭಾಷೆಯನ್ನು ಮಾತನಾಡುವಂತೆ ಶಿಕ್ಷಣಕ್ಕಾಗಿ ಓದಬೇಕು.

ಬರೆಯುವುದು ಒಂದು ಕಲೆ ಅದನ್ನು ಯಾರೂ ಸಹ ಬಿಡಬಾರದು. ಬರವಣಿಗೆ ಬಹಳ ಮುಖ್ಯ. ಆದ್ದರಿಂದ ಮೊಬೈಲ್‍ ನಲ್ಲಿ ಓದುವುದನ್ನು ಬಿಟ್ಟು ಬರವಣಿಗೆಯ ಮೂಲಕ ತಮ್ಮ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಅವರು ನಿಜವಾಗಿಯೂ ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ ಮಾತನಾಡಿ  ಕಲಿಯುವುದಕ್ಕೆ ಇರುವ ಸುಖವು ಜಗತ್ತಿನ ಎಲ್ಲಾ ಸುಖಕ್ಕೆ ಸಮಾನವಾಗಿದೆ, ಶಿಕ್ಷಣದ ಆಯಾಮವು ಬೇರೆ ಬೇರೆಯಾಗಿದ್ದು ಯೋಚನೆ ಮಾಡುವ ಕ್ರಮವನ್ನು ಬದಲಾವಣೆ ಮಾಡಿದರೆ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ. ಭಾರತೀಯರಾದ ನಾವು ಶಿಕ್ಷಣವನ್ನು ಒಂದು ಉನ್ನತ ಮಾರ್ಗದಲ್ಲಿ ಜಾರಿ ಮಾಡಿಲ್ಲ, ಅದನ್ನು ವಿದೇಶಿಗರಿಂದ ಬಂದ ಮಾರ್ಗದಲ್ಲೇ ಕಲಿಯುತ್ತಿದ್ದೇವೆ ಎಂದು ತಿಳಿಸಿದರು.

ಎಲ್ಲಾ ಇಂದ್ರಿಯಗಳಿಗೂ ಗ್ರಹಿಸುವ ಶಕ್ತಿ ಇರುತ್ತದೆ ಆದರೆ ನಾವು ಇಂದಿನ ಶಿಕ್ಷಣವನ್ನು ಮೆದುಳಿಗೆ ತುಂಬುವ ಕೆಲಸ ಮಾಡುತ್ತಿದ್ದೇವೆ. ಶಿಕ್ಷಣ ಎನ್ನುವುದು  ಅನುಭವದ ಮೂಲಕ ಕಲಿಯಬೇಕು, , ನಮಗೆ ಅರ್ಥವಾಗದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಹಾಗೂ ಹೇಗೆ ಸುಲಭವಾಗಿ ಗ್ರಹಿಸಬೇಕು ಎಂದು ಸ್ವಯಂ ಮೆದುಳು ನಮಗೆ ದಾರಿ ಮಾಡುತ್ತದೆ. ಆದ್ದರಿಂದ ಮೆದುಳಿಗೆ ಭಾರವನ್ನು ಹಾಕದೆ ಇಷ್ಟ ಪಡುವುದನ್ನು ಕಲಿತರೆ ಮಾತ್ರ ಮೆದುಳು ನಮಗೆ ಸಹಕಾರ ನೀಡುತ್ತದೆ.

ಓದುವುದು ಆನಂದದ ಕೆಲಸವಾಗಿರುತ್ತದೆ. ಅದನ್ನು ಸಂತೋಷದಿಂದ ಸ್ವ ಇಚ್ಛೆಯಿಂದ ಕಲಿತರೆ ಮಾತ್ರ ಶಿಕ್ಷಣದ ಮಹತ್ವ ನಮಗೆ ತಿಳಿಯುತ್ತದೆ. ಓದುವ ಕ್ರಮವನ್ನು ಕಂಡು ಹಿಡಿದುಕೊಂಡರೆ ಮಾತ್ರ ಶಿಕ್ಷಕರಾಗಲು ಅರ್ಹತೆ ಪಡೆದಂತೆ. ತಂತ್ರಜ್ಞಾನ ಅದ್ಬುತ. ಆದರೆ ಅದಕ್ಕೆ ದಾಸರಾಗಬಾರದು. ಅದು ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತದೆ. ನಮ್ಮ ಜ್ಞಾನವನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಅಭ್ಯಾಸ ಮಾಡಬೇಕು. ಪುಸ್ತಕದ ಬಗ್ಗೆ ತಿಳಿದುಕೊಂಡಿದ್ದರೆ ಅದನ್ನು ಬಹುಬೇಗ ಗ್ರಹಿಸುವ ಸಾಮಥ್ರ್ಯವನ್ನು ಹೊಂದಿರುತ್ತೇವೆ ಎಂದು ಹೇಳಿದರು.

ಸಮಾರಂಭದಲ್ಲಿ ಮೈಸೂರು ಐಜಿ ಕಛೇರಿಯ ಡಿವೈಎಸ್‍ಪಿ ಬಿ.ಬಿ.ಲಕ್ಷ್ಮೇಗೌಡ, ಪ್ರೊ. ವಿ.ಜಯಪ್ರಕಾಶ್, ಪ್ರೊ. ಗೋವಿಂದರಾಜು, ಡಾ. ಎಸ್‍ಬಿಎಂ ಪ್ರಸನ್ನ, ಡಾ. ಉಮೇಶ್ ಬೇವಿನಹಳ್ಳಿ, ಕೆ.ವೈ ನಾಗೇಂದ್ರ, ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಹೆಚ್. ಬಾಲಕೃಷ್ಣ ಇತರರು ಇದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: