ಮೈಸೂರು

‘ಗರುಡ ಗಮನ ವೃಷಭ ವಾಹನ’ ಸಿನಿಮಾದಲ್ಲಿ ಮಾದೇಶ್ವರ ಹಾಡಿಗೆ ಅಪಮಾನ : ಕನ್ನಡ ಕ್ರಾಂತಿದಳ ಖಂಡನೆ

ಮೈಸೂರು,ಡಿ.4 :-  ಒಂದು ಮೊಟ್ಟೆಯ ಕಥೆ ಸಿನಿಮಾ ನಾಯಕ ನಟ ರಾಜ್ ಶೆಟ್ಟಿ ಅಭಿನಯದ “ ಗರುಡ ಗಮನ ವೃಷಭ ವಾಹನ “ ಸಿನಿಮಾದಲ್ಲಿ ಮಾದೇಶ್ವರ ಹಾಡಿಗೆ ಅಪಮಾನವಾಗಿದೆ ಎಂದು ಕನ್ನಡ ಕ್ರಾಂತಿದಳವು ಖಂಡಿಸಿದೆ.

ಇಂದು ಮೈಸೂರು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕರಾದ ತೇಜಸ್ವಿ ನಾಗಲಿಂಗಸ್ವಾಮಿ ಮಾತನಾಡಿ, ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಚಲನಚಿತ್ರ “ಗರುಡ ಗಮನ ವೃಷಭ ವಾಹನ” ಚಿತ್ರದಲ್ಲಿ ಮಲೆ ಮಾದೇಶ್ವರ ಸ್ವಾಮಿ ಕುರಿತಾದ ಜನಪ್ರಿಯ ಗೀತೆ “ಸೋಜುಗಾದ ಸೂಜು ಮಲ್ಲಿಗೆ” ಹಾಡನ್ನು ವಿಕೃತ ಸನ್ನಿವೇಶಕ್ಕೆ ಬಳಕೆ ಮಾಡಿಕೊಂಡಿರುವುದನ್ನು  ಕನ್ನಡ ಕ್ರಾಂತಿದಳ ಮತ್ತು ಮೈಸೂರು ಚಾಮರಾಜನಗರ ಭಾಗದ ಮಾದಪ್ಪನ ಭಕ್ತರು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಈಗಾಗಲೇ ಈ ಚಿತ್ರದ ವಿರುದ್ಧ ಸುಕ್ಷೇತ್ರ ಶ್ರೀ ಸಾಲುರು ಬೃಹನ್ಮಠ ಶ್ರೀಮಲೆ ಮಹದೇಶ್ವರ ಬೆಟ್ಟ ಹನೂರು ತಾ. ಚಾಮರಾಜನಗರ ಜಿಲ್ಲೆಯ ಪೀಠಾಧಿಪತಿಗಳಾದ   ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಖಂಡಿಸಿ ಚಲನಚಿತ್ರದಿಂದ ಈ ಗೀತೆಯನ್ನು ತೆಗೆದು ಹಾಕುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮತ್ತು ಈ ಚಿತ್ರ ತಂಡಕ್ಕೆ ಎಚ್ಚರಿಕೆಯನ್ನು ನೀಡಿರುತ್ತಾರೆ ಎಂದು ತಿಳಿಸಿದರು.

ಈ ಹಿಂದೆಯೂ ಕೂಡ ಮಲೆ ಮಹದೇಶ್ವರನ ಜನಪದ ಹಾಡುಗಳಿಗೆ ಅಪಮಾನ ಉಂಟು ಮಾಡುವಂತೆ ಚಿತ್ರೀಕರಿಸಿ, ಸಂಗೀತ ಸಂಯೋಜನೆ ಮಾಡಿರುತ್ತಾರೆ. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಯಾವುದೇ ಕ್ರಮ ಕೈಗೊಳ್ಳವಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.

“ಗರುಡ ಗಮನ ವೃಷಭ ವಾಹನ”  ಚಿತ್ರದಿಂದ ಈ ಹಾಡನ್ನು ಕೂಡಲೇ  ತೆಗೆದು ಹಾಕಬೇಕು ಮತ್ತು ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕರು ಈ  ಕೂಡಲೇ ಮಾದೇಶ್ವರನ ಭಕ್ತರಿಗೆ  ಕ್ಷಮೆಯಾಚಿಸಬೇಕು ಎಂದು ಕನ್ನಡ ಕ್ರಾಂತಿದಳ ಆಗ್ರಹಿಸುತ್ತದೆ ಎಂದರು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾಲೂರು ಮಠದ  ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದಂತೆ ವಾಣಿಜ್ಯ  ಮಂಡಳಿ ಮುಂದೆ ತೀವ್ರವಾದ ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ಸಹ ನೀಡಿದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: