ಮೈಸೂರು

ಮಾನವತಾವಾದಿಯ ಜೀವನಮೌಲ್ಯ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ : ಹೆಚ್. ಜನಾರ್ಧನ್ (ಜನ್ನಿ)

ಮೈಸೂರು, ಡಿ.4:- ಇತ್ತೀಚೆಗೆ ಮಹಾಜನ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಅವರ ಸಹಯೋಗದೊಂದಿಗೆ ನಡೆದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಓದು ಕಾರ್ಯಕ್ರಮವನ್ನು ಮನಪಾ ಉಪ ಆಯುಕ್ತರಾದ ಸವಿತಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಶೈಲಿ, ಜೀವನ ಮೌಲ್ಯಗಳು ಎಲ್ಲರಿಗೂ ಆದರ್ಶನೀಯ. ಡಾ. ಬಿ.ಆರ್. ಅಂಬೇಡ್ಕರ್ ಅವರಂತೆ ವಿದ್ಯಾರ್ಥಿಗಳು ಜೀವನದಲ್ಲಿ ಓದನ್ನು ಹೆಚ್ಚು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಹೆಚ್. ಜನಾರ್ಧನ್ ಅವರು ಮಾತನಾಡಿ, ಇಂದಿನ ಸಮಾಜದಲ್ಲಿ ಹೆಣ್ಣು ಸ್ವತಂತ್ರವಾಗಿ ಬದುಕುತ್ತಿದ್ದಾಳೆ ಎಂದರೆ ಅದಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ. ಬಡತನದ ಹಿನ್ನೆಲೆಯಲ್ಲಿ ಬಂದಂತಹ ಅಂಬೇಡ್ಕರ್ ಜೀವನದುದ್ದಕ್ಕೂ ಎದುರಾದ ಕಷ್ಟ-ಕಾರ್ಪಣ್ಯಗಳನ್ನು ದಿಟ್ಟವಾಗಿ ಎದುರಿಸಿ ಸಮಾಜದಲ್ಲಿ ಮೇರು ವ್ಯಕ್ತಿತ್ವವನ್ನು ನಿರ್ಮಿಸಿಕೊಂಡವರು. ಮಹದೇವ್ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಪಡೆದು ಸಾಹೋ ಮಹಾರಾಜರ ಸಹಾಯದಿಂದ ಉನ್ನತ ವ್ಯಾಸಂಗ ಮಾಡಿ ವೃತ್ತಿ ಜೀವನ ಪ್ರಾರಂಭಿಸುತ್ತಾರೆ. ಆ ನಂತರ ಸಮಾಜದಲ್ಲಿ ದಮನಿತರ ಪರವಾಗಿ ನಿಂತು ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಇಂತಹ ಮಾನವತಾವಾದಿಯ ಜೀವನ ಮೌಲ್ಯ ಆದರ್ಶಗಳನ್ನು ಪಾಲಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಕಾಲೇಜಿನಲ್ಲಿ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಂಜಯ್ ಪಿ, ಅಂತಿಮ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ, ದ್ವಿತೀಯ ಬಹುಮಾನ ಹೆಚ್.ಡಿ. ಮನಮೋಹನ್, ದ್ವಿತೀಯ ವರ್ಷದ ಬಿ.ಎ. ವಿದ್ಯಾರ್ಥಿ, ತೃತೀಯ ಬಹುಮಾನ ತೇಜಸ್ ಕೆ, ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಂಬಾಣಿ ಮರಿಯಾನಾಯಕ, ಪ್ರಥಮ ವರ್ಷದ ಬಿ.ಸಿ.ಎ. ವಿದ್ಯಾರ್ಥಿ, ದ್ವಿತೀಯ ಬಹುಮಾನ ಮಹೇಶ್ವರಿ ಸಿ, ಅಂತಿಮ ವರ್ಷದ ಬಿ.ಎ., ತೃತೀಯ ಬಹುಮಾನ ಮಣಿಕಂಠ ಟಿ, ದ್ವಿತೀಯ ವರ್ಷದ ಬಿ.ಎ. ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ ಅವರು ಮಾತನಾಡಿ, ಅಸ್ಪೃಶ್ಯರ ಸರ್ವಾಂಗೀಣ ಉದ್ಧಾರಕ್ಕಾಗಿ ಅಹರ್ನಿಶಿ ದುಡಿದ, ಮಹಾತ್ಮಫುಲೆಯವರ ಆದರ್ಶದಿಂದ ಬದುಕಿದ ಮಹಾನ್ ಚೇತನ ಅಂಬೇಡ್ಕರ್. ಸಮಾಜದ ಸಮಸ್ಯೆಗಳ ಬಗ್ಗೆ ತೀವ್ರವಾಗಿ ಕಾಳಜಿ ಹೊಂದಿದ್ದ, ಎಲ್ಲರೊಂದಿಗೆ ಬೆರೆತು ಆತ್ಮಗೌರವದಿಂದ ಬಾಳಬೇಕೆಂದು ಹಂಬಲಿಸಿದ, ನಿರಂತರ ದುಡಿಮೆ, ಅನ್ಯಾಯದ ವಿರುದ್ಧ ಸಿಡಿದೇಳುವ ಗುಣ ಡಾ. ಬಿ.ಆರ್. ಅಂಬೇಡ್ಕರ್ ಅವರದಾಗಿತ್ತು. ಮಾನಸಿಕ ಸಮತೋಲನ, ನಿರ್ಭೀತ ಎದೆಗಾರಿಕೆ, ಸೂಕ್ಷ್ಮ ಗ್ರಾಹಿತ್ವ, ಸರ್ವೋದಯ, ಕ್ರಿಯಾತ್ಮಕ ಆಸಕ್ತಿ ಹೊಂದಿದ್ದ ಅವರು ಕೆಸರಿನಲ್ಲಿ ಅರಳಿದ ಕಮಲದಂತೆ ಮೇಲೆದ್ದು ಹೋರಾಡಿ ಬದುಕಿ ತೋರಿಸಿದರು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್. ಚೆನ್ನಪ್ಪ ಅವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ತಿಮ್ಮೇಗೌಡ ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ವಿನೋದಮ್ಮ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರತಿಭಾ ವೇದಿಕೆಯ ಸಂಚಾಲಕರಾದ ನಾಗೇಶ ಎಂ ಅವರು ವಂದಿಸಿದರು. ಸೃಷ್ಠಿ ಆರ್. ಜೋಯಿಸ್ ಅವರು ಪ್ರಾರ್ಥಿಸಿದರು. ರಾಜಿಕ್ ರಶೀದ್ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: