ಮೈಸೂರು

ಜಿಲ್ಲೆಯಲ್ಲಿ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನದ ಉಪಚುನಾವಣೆಗೆ ವೇಳಾಪಟ್ಟಿ ಪ್ರಕಟ

ರಾಜ್ಯ(ಮೈಸೂರು), ಡಿ.4:- ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹಾಗೂ ತೆರವಾಗಿರುವ ಗ್ರಾಮ ಪಂಚಾಯಿತಿಯ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ಅನ್ವಯ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಜಿಲ್ಲಾಧಿಕಾರಿಗಳು ಜಿಲ್ಲೆಯ 18 ಗ್ರಾಮ ಪಂಚಾಯಿತಿಗಳಲ್ಲಿನ 20 ಸದಸ್ಯ ಸ್ಥಾನಗಳಿಗೆ ಚುನಾವಣಾ ಅಧಿಸೂಚನೆಯನ್ನು 2021ರ ಡಿಸೆಂಬರ್ 13 ರಂದು ಹೊರಡಿಸಲಿದ್ದು, 2021ರ ಡಿಸೆಂಬರ್ 17 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿಸೆಂಬರ್ 18 ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ.

ಉಮೇದುವಾರಿಕೆಗಳನ್ನು ಡಿಸೆಂಬರ್ 20ರಂದು ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿರುತ್ತದೆ. ಮತದಾನದ ಅವಶ್ಯವಿದ್ದರೆ ಡಿಸೆಂಬರ್ 27 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ಇರುತ್ತದೆ. ಮರು ಮತದಾನದ ಅವಶ್ಯವಿದ್ದರೆ 29 ರಂದು ಜರುಗಿಸಲಾಗುವುದು. ಮತ ಎಣಿಕೆಯು ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಡಿಸೆಂಬರ್ 30 ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ.

ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮಚವಾಡಿ, ಜಯಪುರ ಗ್ರಾಮ ಪಂಚಾಯಿತಿಯ ಮಾವಿನಹಳ್ಳಿ, ಸೋಲಿಗರ ಕಾಲೋನಿ, ನಂಜನಗೂಡು ತಾಲ್ಲೂಕಿನ ತಾಂಡವಪುರ ಗ್ರಾಮ ಪಂಚಾಯಿತಿಯ ಹೆಬ್ಯಾ, ಕೆಂಪಸಿದ್ದನಹುಂಡಿ ಗ್ರಾಮ ಪಂಚಾಯಿತಿ ಕೆಂಪಸಿದ್ದನಹುಂಡಿ ಗ್ರಾಂ, ಶಿರಮಳ್ಳಿ ಗ್ರಾಮ ಪಂಚಾಯಿತಿಯ ಹುಸ್ಕೂರು, ಹುಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಹುಲ್ಲಹಳ್ಳಿ, ಕುರಿಹುಂಡಿ ಗ್ರಾಮ ಪಂಚಾಯಿತಿಯ ತರಗನಹಳ್ಳಿ ಗ್ರಾಮ.

ಟಿ.ನರಸೀಪುರ ತಾಲ್ಲೂಕಿನ ಮುತ್ತಲವಾಡಿ ಗ್ರಾಮ ಪಂಚಾಯಿತಿಯ ಎಸ್.ಮೇಗಡಹಳ್ಳಿ, ಗರ್ಗೇಶ್ವರಿ ಗ್ರಾಮ ಪಂಚಾಯಿತಿಯ ಗರ್ಗೇಶ್ವರಿ ಹಾಗೂ ಯಡದೊರೆ, ಬಿನಕನಹಳ್ಳಿ ಗ್ರಾಮ ಪಂಚಾಯಿತಿ ಬಿನಕನಹಳ್ಳಿ, ಕೆ.ಆರ್.ನಗರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಯ ಮಾವನೂರು, ಮಿರ್ಲೆ ಗ್ರಾಮ ಪಂಚಾಯಿತಿ ಮಿರ್ಲೆ ಗ್ರಾಮ ಹಾಗೂ ಭೇರ್ಯ ಗ್ರಾಮ ಪಂಚಾಯಿತಿ ಭೇರ್ಯ ಗ್ರಾಮ, ಮಾವತ್ತೂರು ಗ್ರಾಮ ಪಂಚಾಯಿತಿಯ ಮಾರಗೌಡನಹಳ್ಳಿ ಗ್ರಾಮ.

ಪಿರಿಯಾಪಟ್ಟಣ ತಾಲ್ಲೂಕಿನ ಹಲಗನಹಳ್ಳಿ ಗ್ರಾಮ ಪಂಚಾಯಿತಿಯ ರಾಜನಬಿಳುಗಲಿ, ಬೆಟ್ಟದಪುರ ಗ್ರಾಮ ಪಂಚಾಯಿತಿಯ ಬೆಟ್ಟದಪುರ ಗ್ರಾಮ, ಕೊಪ್ಪ ಗ್ರಾಮ ಪಂಚಾಯಿತಿಯ ಕೊಪ್ಪ ಗ್ರಾಮ, ಹೆಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮ ಪಂಚಾಯಿತಿಯ ಗಂಗಡಹೊಸಹಳ್ಳಿ ಗ್ರಾಮ.
ಚುನಾವಣೆಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ವೇಳಾಪಟ್ಟಿಯಂತೆ ಚುನಾವಣಾಧಿಕಾರಿಗೆ ಸಲ್ಲಿಸಬಹುದು.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು 2021ರ ಡಿಸೆಂಬರ್ 13 ರಿಂದ ಡಿಸೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ. ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ.

ಗ್ರಾಮ ಪಂಚಾಯಿತಿಯ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರೆಯಲಾಗದೆ ಇರುವಂತಹ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ ಹಾಗೂ ನಾಮಪತ್ರ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿಯು ಕಣದಲ್ಲಿರದೆ ಆ ಗ್ರಾಮ ಪಂಚಾಯಿತಿಯ ಯಾವುದೇ ಸ್ಥಾನಕ್ಕೂ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯಿತಿಯಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳೂ ಅವಿರೋಧವಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಅಭ್ಯರ್ಥಿಯ ಫಲಿತಾಂಶವನ್ನು ಚುನಾವಣಾಧಿಕಾರಿಯು ಘೋಷಿಸಿದ್ದಲ್ಲಿ, ಅಂತಹ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.

ನೀತಿ ಸಂಹಿತೆಯು ಜಾರಿಯಲ್ಲಿರುವ ಪ್ರದೇಶಗಳಲ್ಲಿ “ಮತದಾನವು ಮುಕ್ತಾಯಗೊಳ್ಳುವ ನಲವತ್ತೆಂಟು ಗಂಟೆಗಳ ಮೊದಲಿನ ಅವಧಿಯವರೆಗೆ” ಎಲ್ಲಾ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು, ಅಧಿಭೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಹಾಗೂ ಮೊಹರು ಮಾಡಿ ಅದರ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸತಕ್ಕದ್ದು.

ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ:ರಾಚುಆ:248:ಇಜಿಪಿ:2015 ದಿನಾಂಕ:19.03.2015 ರಂತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮತಪತ್ರದಲ್ಲಿ NOTA (None of the above) ಎಂದು ಮತಚಲಾಯಿಸಲು ಅವಕಾಶ ಇರುವುದಿಲ್ಲ.

ಚುನಾವಣೆ ಪ್ರಕ್ರಿಯೆ ಹಾಗೂ ಮತದಾನ ಶಾಂತಿಯುತವಾಗಿ ಮತ್ತು ಸುವ್ಯವಸ್ಥೆಯಿಂದ ನಡೆಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಮತ್ತು ಮತದಾರರು ಈ ಚುನಾವಣೆಯನ್ನು ಮುಕ್ತವಾಗಿ, ನಿಷ್ಪಕ್ಷಪಾತವಾಗಿ, ಶಾಂತಿಯುತವಾಗಿ ನಡೆಸಲು ಸಹಕಾರ ನೀಡುವಂತೆ ಕೋರಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

comments

Related Articles

error: