ಕರ್ನಾಟಕಪ್ರಮುಖ ಸುದ್ದಿಮನರಂಜನೆಮೈಸೂರು

ಒಮಿಕ್ರಾನ ಆತಂಕ : ರಂಗಾಯಣದಲ್ಲಿ ಬಹುರೂಪಿ ನಾಟಕೋತ್ಸವ ಮುಂದೂಡಿಕೆ

ಮೈಸೂರು,ಡಿ.5: – ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ ಹೆಚ್ಚುತ್ತಿದ್ದು ದೇಶದಲ್ಲಿ ನಾಲ್ಕು ಕೇಸ್ ಗಳು ಪತ್ತೆಯಾಗಿವೆ. ಹೀಗಾಗಿ ಸರ್ಕಾರ ಕೂಡ ಎಲ್ಲಾ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಒಮಿಕ್ರಾನ್ ಆತಂಕ ಹಿನ್ನೆಲೆಯಲ್ಲಿ ಬಹುರೂಪಿ‌ ರಾಷ್ಟ್ರೀಯ ನಾಟಕೋತ್ಸವ ಮುಂದೂಡಲಾಗಿದೆ.
ಈ ಬಗ್ಗೆ ರಂಗಾಯಣದ‌ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾಹಿತಿ ನೀಡಿದ್ದು, ಮೈಸೂರಿನ ರಂಗಾಯಣವು ಡಿಸೆಂಬರ್ 10 ರಿಂದ 19ರವರೆಗೆ ಕಲಾಮಂದಿರದ ರಂಗಾಯಣದ ಆವರಣದಲ್ಲಿ ಆಯೋಜಿಸಲಾಗಿದ್ದ ನಾಟಕೋತ್ಸವವನ್ನು ಸರ್ಕಾರದ ಕೊವಿಡ್ 19 ಮಾರ್ಗಸೂಚಿಯ ಕಾರಣಕ್ಕಾಗಿ ಮುಂದೂಡಿದೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ರಾಜ್ಯದ ಕಲಾವಿದರು ಭಾಗವಹಿಸಬೇಕಿತ್ತು. ತಾಯಿ ಸಂದೇಶದೊಂದಿಗೆ ನಡೆಯಬೇಕಿದ್ದ ‘ಬಹುರೂಪಿ’ ನಾಟಕೋತ್ಸವವನ್ನು ಮುಂದೂಡಲಾಗಿದ್ದು ಜನವರಿ 15ರ ನಂತರ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಮಹಾಮಾರಿ ಕೊರೊನಾ ಕೇಸ್ ಗಳು ಹೆಚ್ಚಾಗುತ್ತಿರುವ ಜೊತೆಗೆ ಒಮಿಕ್ರಾನ್ ಪ್ರಕರಣಗಳು ಕೂಡ ಪತ್ತೆಯಾಗುತ್ತಿವೆ. ಹೀಗಾಗಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. 500ಕ್ಕೂ ಹೆಚ್ಚು ಜನ ಸೇರುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಆದರೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಪ್ರತಿದಿನ ಸಾವಿರಾರು ಕಲಾ ಪ್ರೇಮಿಗಳು ಭಾಗವಹಿಸುತ್ತಾರೆ. ಹೀಗಾಗಿ ಬಹುರೂಪಿ ನಾಟಕೋತ್ಸವ ಮುಂದೂಡಲು ನಿರ್ಧರಿಸಲಾಗಿದೆ. ಕೋವಿಡ್ ಕಾರಣದಿಂದ ರಂಗಾಯಣದ ಕಾರ್ಯಕ್ರಮಗಳು ಎರಡು ವರ್ಷ ಸ್ಥಗಿತವಾಗಿದ್ದವು. ಈ ಬಾರಿಯ ಬಹುರೂಪಿ ನಾಟಕೋತ್ಸವಕ್ಕೆ ಸಕಲ ತಯಾರಿ ನಡೆದಿತ್ತು. 3ನೇ ಅಲೆಯ ಭೀತಿಯಿಂದ 500 ಮಂದಿಗೆ ಮಾತ್ರ ಅವಕಾಶ ನೀಡಿದ ಕಾರಣ ಈ ವರ್ಷವೂ ಬಹುರೂಪಿ ನಾಟಕೋತ್ಸವ ಮುಂದೂಡಲಾಗಿದೆ. ಅಲ್ಲದೆ ಕಲಾವಿದರ ಸಂಖ್ಯೆಯೇ 400ಕ್ಕೂ ಹೆಚ್ಚಿರುವ ಕಾರಣ ಕಾರ್ಯಕ್ರಮ ಹೇಗೆ ನಡೆಸಲಾಗುವುದು ಎಂಬ ಗೊಂದಲದಲ್ಲಿ ರಂಗಾಯಣ ಇದೆ. ಜನವರಿ 15ರ ನಂತರ ಮುಂದಿನ ಬಹುರೂಪಿ ನಾಟಕೋತ್ಸವ ದಿನಾಂಕಕ್ಕೆ ತೀರ್ಮಾನಿಸಲಾಗಿದೆ.
12 ಭಾಷೆಯ 33 ನಾಟಕ ಪ್ರದರ್ಶನ
ಇನ್ನು ಡಿಸೆಂಬರ್ 10 ರಿಂದ 19ರವರೆಗೆ ನಡೆಯಬೇಕಿದ್ದ ಬಹುರೂಪಿ ನಾಟಕೋತ್ಸವದಲ್ಲಿ ಕನ್ನಡದ 21, ಹಿಂದಿಯ2, ಇಂಗ್ಲಿಷ್, ಪಂಜಾಬಿ, ಒರಿಯಾ, ಮರಾಠಿ, ಮಲಯಾಳಂ, ತೆಲುಗು, ರಾಜಸ್ಥಾನಿ, ತಮಿಳು, ತುಳು, ಕೊಂಕಣಿಯ ತಲಾ ಒಂದು ನಾಟಕ ಪ್ರದರ್ಶನಕ್ಕೆ ತಯಾರಿ ನಡೆಸಲಾಗಿತ್ತು. ಅಲ್ಲದೆ ಸಲಾಕೆ ಗೊಂಬೆಯಾಟ, ತೊಗಲು ಗೊಂಬೆಯಾಟ, ಯಕ್ಷಗಾನ, ಬಯಲಾಟ, ದೊಡ್ಡಾಟ, ತಾಳಮದ್ದಲೆಯ ಮೆರಗು ಇರಲಿತ್ತು. ಒಮಿಕ್ರಾನ್ ಆತಂಕದಿಂದ ಕಾರ್ಯಕ್ರಮ ಮುಂದೂಡಲಾಗಿದೆ.

 

Leave a Reply

comments

Related Articles

error: