ಕರ್ನಾಟಕಪ್ರಮುಖ ಸುದ್ದಿ

ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು ಜವಾಬ್ದಾರಿಯರಿತು ಕಾರ್ಯನಿರ್ವಹಿಸಿ : ಡಾ.ನಾಗೇಂದ್ರ ಎಫ್.ಹೊನ್ನಳ್ಳಿ

ರಾಜ್ಯ(ಶಿವಮೊಗ್ಗ),ಡಿ.6:-  ಡಿಸೆಂಬರ್ 10ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣಾ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಚುನಾವಣಾ ಆಯೋಗವು ಹೊರಡಿಸಿರುವ ಮಾರ್ಗಸೂಚಿಗಳನ್ವಯ, ಯಾವುದೇ ಆಕ್ಷೇಪಣೆಗಳಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಲು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಅವರು ಸೂಚಿಸಿದರು.
ಅವರು ಇಂದು ಜಿಲ್ಲಾ ಚುನಾವಣಾ ಶಾಖೆಯು ವಿಧಾನಪರಿಷತ್ ಚುನಾವಣೆಗೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ ಸಿಬ್ಬಂದಿಗಳು ಈ ಹಿಂದಿನ ಅನೇಕ ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ್ದರೂ ಪ್ರತಿ ಬಾರಿಯ ಚುನಾವಣಾ ಕರ್ತವ್ಯ ಹೊಸ ಅರಿವು, ಅನುಭವ ಮೂಡಿಸುತ್ತದೆ. ಆದ್ದರಿಂದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ವಿಷಯ ವಿನಿಮಯ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಕರ್ತವ್ಯದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಿ, ಅತ್ಯಂತ ಪಾರದರ್ಶಕವಾಗಿ ಚುನಾವಣಾ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದ ಅವರು, ಚುನಾವಣಾ ಆಯೋಗದ ಇತ್ತೀಚಿನ ಆಡಳಿತಾತ್ಮಕ ಸುಧಾರಣ ಕ್ರಮಗಳಿಂದಾಗಿ ಚುನಾವಣಾ ಕಾರ್ಯ ಸರಳ, ಸುಲಭವೂ ಆಗಿದೆ ಎಂದರು.
ಪ್ರಸ್ತುತ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ 07ತಾಲೂಕುಗಳು ಹಾಗೂ ದಾವಣಗೆರೆ ಜಿಲ್ಲೆಯ 03 ತಾಲೂಕುಗಳ ಸೇರಿದಂತೆ ಒಟ್ಟು 10ತಾಲೂಕುಗಳ ಗ್ರಾಮ ಪಂಚಾಯಿತಿ ಕೇಂದ್ರಗಳು ಹಾಗೂ ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳ ಆಡಳಿತ ಕೇಂದ್ರಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಿ, ಚುನಾವಣೆ ನಡೆಸಲಾಗುವುದು. ಈ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಿರುವ ಪ್ರತಿನಿಧಿಗಳ ಸಂಖ್ಯೆ ಅತ್ಯಂತ ಕಡಿಮೆಯಾಗಿದ್ದರೂ, ಚುನಾವಣಾ ಅವಧಿ ಪೂರ್ಣಗೊಳ್ಳುವವರೆಗೆ ನಿಯೋಜಿತ ಸಿಬ್ಬಂಧಿಗಳೆಲ್ಲರೂ ಮತಗಟ್ಟೆಯಲ್ಲಿದ್ದು, ಪ್ರಾಮಾಣಿಕವಾಗಿದ್ದು, ಯಾವುದೇ ಸಾರ್ವಜನಿಕ ಆಕ್ಷೇಪಣೆಗಳಿಗೆ ಅವಕಾಶವಿಲ್ಲದಂತೆ ಕಾರ್ಯನಿರ್ವಹಿಸಬೇಕು ಮಾತ್ರವಲ್ಲ ಉತ್ತಮ ನಡುವಳಿಕೆ ಪ್ರದರ್ಶಿಸಬೇಕು.ರು. ಪ್ರತಿ ಮತಗಟ್ಟೆಯೂ ವಿಡಿಯೋ ಕಣ್ಗಾವಲಿಗೆ ಒಳಪಟ್ಟಿರುತ್ತದೆ ಎಂಬುದನ್ನು ತಿಳಿದಿರಬೇಕೆಂದರು.
ಅಂತಿಮವಾಗಿ 4ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವ ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳ ಬದಲಾಗಿ ಹಳೆಯ ಪದ್ದತಿಯಂತೆ ಮತಗಟ್ಟೆಗಳನ್ನು ಬಳಸಲಾಗುತ್ತಿದೆ ಎಂದ ಅವರು, ಅತ್ಯಂತ ಕಡಿಮೆ ಪ್ರಮಾಣದ ಮತದಾರರಿದ್ದು, ಅತ್ಯಲ್ಪ ಅವಧಿಯಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ.ಹೆಚ್.ಶಿವಕುಮಾರ್ ಅವರು ಚುನಾವಣಾ ಪ್ರಕ್ರಿಯೆ ಹಾಗೂ ವಿಧಾನಗಳ ಬಗ್ಗೆ ನಿಯೋಜಿತ ಅಧಿಕಾರಿಗಳಿಗೆ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಟಿ.ಬಿ.ಪ್ರಕಾಶ್ ಅವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: