ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕರ್ನಾಟಕದಲ್ಲಿ ಕಾಂಗ್ರೆಸ್ ಉಸಿರು ನಿಲ್ಲಿಸಲು ಮತದಾರರು ಬಿಜೆಪಿಗೆ ಮತ ನೀಡಬೇಕು : ಮಾಜಿ ಸಿಎಂ ಬಿಎಸ್ ವೈ

ಮೈಸೂರು,ಡಿ.6:- ದೇಶದಲ್ಲಿ ಕಾಂಗ್ರೆಸ್‌ ದಿನೇ ದಿನೇ ಕಣ್ಮರೆಯಾಗುತ್ತಿದೆ, ಆದರೆ ಕರ್ನಾಟಕದಲ್ಲಿ ಮಾತ್ರ ಒಂದಿಬ್ಬರಿಂದಾಗಿ ಉಸಿರಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಉಸಿರಾಟ ನಿಲ್ಲಿಸಬೇಕಿದ್ದರೆ ಮತದಾರರು ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಪ್ರವಾಸ ಕೈಗೊಂಡಿರುವ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಷ್ಟೇ ಕಾಂಗ್ರೆಸ್‌ ಅಲ್ಪಸ್ವಲ್ಪ ಉಸಿರಾಡುತ್ತಿದೆ. ಉಳಿದಂತೆ ದೇಶದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. 26 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಒಂದು ಕಾಲದಲ್ಲಿ 400 ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್‌ ನ ಬಲ 44ಕ್ಕೆ ಇಳಿದಿದೆ. ಕಾಂಗ್ರೆಸ್ಸಿಗರು ಈಗ ಎಲ್ಲೆಡೆ ಗೌರವ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲಿ ಇನ್ನೂ 25 ವರ್ಷ ಆ ಪಕ್ಷ ಪ್ರತಿಪಕ್ಷ ಸ್ಥಾನದಲ್ಲೇ ಕೂರಲಿದೆ ಎಂದರು.

ಕಾಂಗ್ರೆಸ್ಸಿಗರು ಹಣ, ಹೆಂಡ, ತೋಳ್ಬಲ, ಅಧಿಕಾರ, ಜಾತಿ ಬಲದಿಂದ ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದಾರೆ. ಆ ಕಾಲ ಹೊರಟುಹೋಗಿದೆ. 2023ರ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಮಂಡ್ಯದಲ್ಲೂ 3ರಿಂದ 4 ಸ್ಥಾನಗಳಲ್ಲಿ ಗೆಲ್ಲಬೇಕಿದೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗ್ತಾರೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರು. ಆದರೆ, ನಾನು ಮನೆಯಲ್ಲಿ ಕೂರುವ ವ್ಯಕ್ತಿಯಲ್ಲ. ಮೇಲ್ಮನೆ ಚುನಾವಣೆಯಲ್ಲಿ 15-16ಸ್ಥಾನ ಗೆಲ್ಲಿಸುತ್ತೇನೆ. ಬಿಜೆಪಿ ವಿರುದ್ಧ ಸತತ ಟೀಕೆ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ಅವರಿಗೆ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

Leave a Reply

comments

Related Articles

error: