ಮೈಸೂರು

ಚಾಮುಂಡಿ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ

ಮೈಸೂರು, ಡಿ.7- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಗರದ ಯುವಜನತೆಯು ಅಂತರರಾಷ್ಟ್ರೀಯ ಸ್ವಯಂ ಸೇವಕರ ದಿನಾಚರಣೆಯ ಅಂಗವಾಗಿ ವೆಚ್ಚವಿಲ್ಲದ, ಸ್ವಚ್ಛತಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಹಾಗೂ ಯೂತ್ ಫಾರ್ ಸೇವಾ ಎಂಬ ಎರಡು ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನವು ಜರುಗಿತು. ಕೋವಿಡ್ ಸಂದರ್ಭದಲ್ಲೂ ಎಚ್ಚರಿಕಾ ಕ್ರಮಗಳನ್ನು ವಹಿಸಿ, ಎ.ಟಿ.ಎಂ.ಇ., ಎನ್.ಐ.ಇ. ಹಾಗೂ ಯುವರಾಜ ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಬಂದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಒಟ್ಟು 120 ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
ಈ ಅಭಿಯಾನವು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಗಳ ಸಂಯೋಜಕರಾದ ಚಿರಾಗ್ ಗೌಡ ಹಾಗೂ ಯಶವಂತ್ ಗೌಡ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು. ಅಭಿಯಾನದ ಮುಂಚೂಣಿಯಲ್ಲಿ ಯೂತ್ ಫಾರ್ ಸೇವಾ ಸಂಸ್ಥೆಯ ಪಾರುಪತ್ಯಗಾರರು ಹಾಗೂ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿಯಾಗಿರುವ ಹರೀಶ್ ಶೆಣೈ ವಿದ್ಯಾರ್ಥಿಗಳನ್ನುದ್ದೇಶಿ, ಮಾತನಾಡಿ, ಸ್ವಯಂ ಪ್ರೇರಿತರಾಗಿ ಆಗಮಿಸಿರುವ ವಿದ್ಯಾರ್ಥಿಗಳಿಗೆ ಮೆಚ್ಚುಗೆಯನ್ನು ಸೂಚಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸ್ವಚ್ಛತಾ ಅಭಿಯಾನವು ಊಟಿ ರಸ್ತೆಯ ಬೆಟ್ಟದ ಪಾದದಿಂದ, ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದವರೆಗೂ ನಡೆಯಿತು. ಈ ಪ್ರದೇಶದಲ್ಲಿ ಎಲ್ಲ ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಸೇರಿ 455 ಕೆ.ಜಿ. ತ್ಯಾಜ್ಯವನ್ನು ಸಂಗ್ರಹಿಸಿ, ಮೈಸೂರು ಮಹಾನಗರಪಾಲಿಕೆಯವರಿಗೆ ಒಪ್ಪಿಸಿದರು. ಮೈಸೂರು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಶಿವಶಂಕರ್ ಸ್ವಯಂ ಸೇವಕರೊಂದಿಗೆ ಸಂಭಾಷಿಸಿ, ಈ ಸ್ವಚ್ಛತಾ ಅಭಿಯಾನಕ್ಕೆ ಭಾಗವಹಿಸಿದ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೆಯೇ ಇವರು ಬೆಟ್ಟಕ್ಕೆ ಭೇಟಿ ನೀಡುವ ನಾಗರೀಕರು ಮತ್ತು ಭಕ್ತಾದಿಗಳು ತ್ಯಾಜ್ಯವನ್ನು ಅಲ್ಲಲ್ಲಿ ಎಸೆಯದಂತೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ಸೂಚಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ವಿಗೊಳ್ಳಲು ಸಹಕಾರ ನೀಡಿದ ಮಹಾನಗರಪಾಲಿಕೆ, ಆಡಳಿತ ಮಂಡಳಿಯವರಿಗೆ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ ಹಾಗೂ ಯೂತ್ ಫಾರ್ ಸೇವಾ ಸಂಸ್ಥೆಯು ಧನ್ಯವಾದಗಳನ್ನು ತಿಳಿಸಿತು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: