ದೇಶಪ್ರಮುಖ ಸುದ್ದಿ

ಜನರಲ್ ಬಿಪಿನ್ ರಾವತ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯರ ಕಂಬನಿ

ದೇಶ(ನವದೆಹಲಿ),ಡಿ.9:- ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಹಿರಿಯ ರಕ್ಷಣಾ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಪತನಗೊಂಡಿದೆ. ಘಟನೆಯಲ್ಲಿ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಅವರು ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ.
ಭಾರತದ ಮೂರು ಸೇನಾ ಪಡೆಗಳ ಮೊದಲ ಮುಖ್ಯಸ್ಥ ರಾವತ್ ನಿಧನಕ್ಕೆ ಸಂತಾಪಗಳ ಮಹಾಪೂರವೇ ಹರಿದು ಬಂದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್,ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಮಾಡಿ ‘ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಪತನದಲ್ಲಿ ನಾವು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಸಶಸ್ತ್ರ ಪಡೆಗಳ ಇತರ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಅವರು ಭಾರತಕ್ಕೆ ಅತ್ಯಂತ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಜನರಲ್ ಬಿಪಿನ್ ರಾವತ್ ಒಬ್ಬ ಅತ್ಯುತ್ತಮ ಯೋಧ. ನಿಜವಾದ ದೇಶಭಕ್ತ, ಅವರು ನಮ್ಮ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಉಪಕರಣಗಳನ್ನು ಆಧುನೀಕರಿಸುವಲ್ಲಿ ಮಹತ್ತರವಾಗಿ ಕೊಡುಗೆ ನೀಡಿದ್ದಾರೆ. ಕಾರ್ಯತಂತ್ರದ ವಿಷಯಗಳ ಬಗ್ಗೆ ಅವರ ಒಳನೋಟಗಳು ಮತ್ತು ದೃಷ್ಟಿಕೋನಗಳು ಅಸಾಧಾರಣವಾಗಿವೆ. ಅವರ ಅಗಲಿಕೆ ನನಗೆ ಅತೀವ ದುಃಖ ತಂದಿದೆ ಓಂ ಶಾಂತಿ’ ಎಂದಿದ್ದಾರೆ. (ಏಜೆನ್ಸಿಸ್, ಎಸ್.ಎಚ್)

Leave a Reply

comments

Related Articles

error: