ಮೈಸೂರು

ನಾಗರಿಕ ಸೇವಾ ಪರೀಕ್ಷೆಗಳ ಕುರಿತು ವಿಶೇಷ ಉಪನ್ಯಾಸ – ವಿದ್ಯಾರ್ಥಿಗಳೊಂದಿಗೆ ಸಂವಾದ

ಮೈಸೂರು, ಡಿ. 9:– ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗ, ಎಂಟ್ರಿ ಟು ಸರ್ವೀಸ್ ಮತ್ತು ಐಕ್ಯೂಎಸಿ ಘಟಕಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ‘ನಾಗರಿಕ ಸೇವಾ ಪರೀಕ್ಷೆಗಳ ಕುರಿತು ವಿಶೇಷ ಉಪನ್ಯಾಸ ಹಾಗೂ ಸಂವಾದ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ನಾಗರೀಕ ಸೇವಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಬೇಕಾದರೆ, ಅಭ್ಯರ್ಥಿಯಲ್ಲಿ ಇರುವ ಸಕಾರಾತ್ಮಕ ಹಾಗೂ ಪ್ರೇರಣಾತ್ಮಕ ಅಂಶಗಳ ಜೊತೆಗೆ ನಿರಂತರ ಪರಿಶ್ರಮ ಹಾಗೂ ಗುರಿಸಾಧಿಸುವ ಮನೋಸ್ಥೈರ್ಯವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದು ಧಾರಾವಾಡದ ಗುರುದೇವ್ ಐ.ಎ.ಎಸ್. ಹಾಗೂ ಕೆ.ಎ.ಎಸ್. ಅಕಾಡೆಮಿಯ ಆಡಳಿತಾಧಿಕಾರಿಗಳು ಹಾಗೂ ಸಾಮಾನ್ಯ ಅಧ್ಯಯನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ್ ಟಿ.ಎಂ. ಅವರು ಮಾತನಾಡಿ, ಪ್ರತಿ ವರ್ಷ ಫೆಬ್ರವರಿ ತಿಂಗಳಂದು ನಾಗರೀಕ ಸೇವಾ ಪರೀಕ್ಷೆಗಳ ಸುತ್ತೋಲೆ ಹೊರಡಿಸಲಾಗುತ್ತದೆ. ಈ ಪೂರ್ವಭಾವಿ ಪರೀಕ್ಷೆಗಳನ್ನು ತೇರ್ಗಡೆ ಹೊಂದಲು ವಿದ್ಯಾರ್ಥಿಗಳಲ್ಲಿ ಕಟು ಪರಿಶ್ರಮ, ಸಂವಹನ ಕೌಶಲ್ಯ, ಇತಿಹಾಸ, ಸಂವಿಧಾನ, ಅರ್ಥಶಾಸ್ತ್ರ, ಸಾಮಾಜಿಕ, ಭೌಗೋಳಿಕ ಹಾಗೂ ಪ್ರಸಕ್ತ ರಾಷ್ಟ್ರೀಯ -ಅಂತರಾಷ್ಟ್ರೀಯ ವಿದ್ಯಮಾನಗಳ ಅಧ್ಯಯನ ಅವಶ್ಯಕ. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಚ್ಚಾಗಿ ತೌಲನಿಕ ವಿಶ್ಲೇಷಣೆ ಮಾಡುವ ಪ್ರಶ್ನೆಗಳು ಇರುತ್ತವೆ. ವಿಷಯದ ಆಳವಾದ ಜ್ಞಾನ, ಸಾಮಾನ್ಯ ತಿಳುವಳಿಕೆ, ನೈತಿಕತೆ, ಬರೆಯುವ ಹಾಗೂ ಓದುವ ಕೌಶಲ್ಯ ಮುಖ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾವು ತೆಗೆದುಕೊಂಡ ವಿಷಯದ ಬಗ್ಗೆ ಪುಸ್ತಕಗಳನ್ನು ಆಸಕ್ತಿಯಿಂದ ಮನಸಿಟ್ಟು ಓದುವುದು, ಸುದ್ದಿ ಪತ್ರಿಕೆಗಳಲ್ಲಿ ಬರುವ ಸಂಪಾದಕೀಯ, ಅಂಕಣ ಮತ್ತು ಇತರ ಪ್ರಚಲಿತ ವಿದ್ಯಮಾನಗಳನ್ನು ಕುರಿತ ಲೇಖನಗಳನ್ನು ದಿನನಿತ್ಯ ಓದುವುದು, ಟಿಪ್ಪಣಿ ಮಾಡುವುದು ಹಾಗೂ ವಿಶ್ಲೇಷಣೆ ಮಾಡುವುದು ಅಗತ್ಯ ಮತ್ತು ಇತರ ಸಾಧಕರೊಂದಿಗೆ ಬೆರೆತು ವಿಚಾರ ವಿನಿಮಯ ಮಾಡುವುದರೊಂದಿಗೆ ಅವರ ಅನುಭವಗಳನ್ನು ಹಂಚಿಕೊಳ್ಳಬೇಕು. ಸಾಧಕರು ಒಂದು ಜೀವಂತ ಗ್ರಂಥಾಲಯವಿದ್ದಂತೆ, ಹೆಚ್ಚಿನ ಸ್ಪರ್ಧಾರ್ಥಿಗಳು ಅಧಿಸೂಚನೆ ಪ್ರಕಟವಾದ ನಂತರ ಅಭ್ಯಾಸದಲ್ಲಿ ತೊಡಗುತ್ತಾರೆ, ಇದರಿಂದ ಪರಿಪೂರ್ಣ ಅಧ್ಯಯನ ಸಾಧ್ಯವಿಲ್ಲ. ಪಠ್ಯ ವಿಷಯ, ಸಾಮಾನ್ಯ ಜ್ಞಾನದ ಬಗ್ಗೆ ಕೆಲವು ವರ್ಷಗಳ ಆಳವಾದ ಅಧ್ಯಯನದ ಅಗತ್ಯತೆ ಇದ್ದರೆ ಮಾತ್ರ ಗೆಲುವು ಸಾಧಿಸಬಹುದು ಎಂದು ತಿಳಿ ಹೇಳಿದರು.
ಮುಂದುವರಿದು ಮಾತನಾಡಿ, ಸಂದರ್ಶನದಲ್ಲಿ ಅಭ್ಯರ್ಥಿಯ ಪ್ರಾಮಾಣಿಕತೆ, ಸಹನೆ, ಸಮಾಜದ ಚಿಂತನೆ, ಏಕತೆ, ಸ್ವ-ಗೌರವ, ಶ್ರದ್ದೆ ಮತ್ತು ಏಕಾಗ್ರತೆಗಳನ್ನು ಓರೆಗಲ್ಲಿಗೆ ಹಚ್ಚಲಾಗುತ್ತದೆ. ಆದ್ದರಿಂದ ಆಸಕ್ತ ವಿದ್ಯಾರ್ಥಿಗಳು ಇಂದಿನಿಂದಲೇ ನೀವು ಪರಿಶ್ರಮ, ಸಿದ್ಧತೆ, ಆತ್ಮವಿಶ್ವಾಸ, ವಿಶಾಲ ಮನೋಭಾವನೆ ಇವೆಲ್ಲವನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾಗರೀಕ ಸೇವಾ ಪರೀಕ್ಷೆಗಳನ್ನು ದಾಟಿ, ಉನ್ನತ ಹುದ್ದೆಗಳು ಲಭಿಸುವಂತಾಗುತ್ತವೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಕಾಲೇಜು ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳ ಆಸಕ್ತ, ಕುತೂಹಲ ಪ್ರಶ್ನೆಗಳಿಗೆ ಮಂಜುನಾಥ್ ಅವರು ತಾಳ್ಮೆಯಿಂದ ಉತ್ತರಿಸಿ, ಸಲಹೆ, ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಆರ್. ಜಯಕುಮಾರಿ, ಗುರುದೇವ ಅಕಾಡೆಮಿಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಮೌನೇಶ್, ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಎಂಟ್ರಿ-ಟು-ಸರ್ವೀಸ್ ಘಟಕದ ಸಂಚಾಲಕರಾದ ಡಾ. ಶ್ರೀಧರ ಹೆಚ್, ವಿಭಾಗದ ಅಧ್ಯಾಪಕರಾದ ಡಾ. ಧರ್ಮೇಶ್ ಎ.ಜಿ., ನಂದೀಶ ಎ.ಆರ್. ಮತ್ತು ವಿವಿಧ ವಿಭಾಗಗಳ ಆಧ್ಯಾಪಕರು ಹಾಗೂ ಆಸಕ್ತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: