ನಮ್ಮೂರುಮೈಸೂರು

ರಂಗಾಯಣಕ್ಕೆ ಮಸಿ ಬಳಿಯದಿರಿ ; ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ

ಮೈಸೂರು,ಡಿ.9 : ರಂಗಭೂಮಿಗೆ ಎಲ್ಲರೂ ಬೇಕು . ರಂಗಾಯಣಕ್ಕೆ ‘ಕಪ್ಪುಮಸಿ’ ಬಳಿಯದಿರಿ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಮನವಿ ಮಾಡಿದ್ದಾರೆ.

‘ರಂಗಾಯಣ ಸರ್ಕಾರಿ ಅನುದಾನಿತ ಸ್ವಾಯತ್ತ ಸಂಸ್ಥೆಯಾಗಿದ್ದು, ಅನವಶ್ಯಕವಾಗಿ ಮೂಗು ತೂರಿಸುವ ಹಕ್ಕನ್ನು ಯಾರಿಗೂ ಕೊಟ್ಟಿಲ್ಲ . ಆಯಾ ಸರ್ಕಾರಕ್ಕೆ ಯಾರು ಬೇಕೋ ಅವರನ್ನು ರಂಗಾಯಣಕ್ಕೆ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಇದುವರೆಗೆ ಬಿ.ಬಿ. ಕಾರಂತ ಮತ್ತು ರಾಜಾರಾಂ ಬಿಟ್ಟರೆ ಇಲ್ಲಿಗೆ ನೇಮಕವಾದ ನಿರ್ದೇಶಕರೆಲ್ಲರೂ ಎಡಪಂಥೀಯ ಚಿಂತನೆಯವರೇ ಎಂದಿದ್ದಾರೆ.

ಮಾಧ್ಯಮ ಹೇಳಿಕೆ ನೀಡಿರುವ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿದೇಶದಲ್ಲಿ ಮೃತಪಟ್ಟಾಗ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ರಂಗಾಯಣ ನಿರ್ದೇಶಕರೊಬ್ಬರು ರಂಗಾಯಣದ ಭೂಮಿಗೀತದಲ್ಲಿ ಏರ್ಪಾಡು ಮಾಡಿದ್ದರು. ಮೃತಪಟ್ಟ ಆತ ಯಾವ ಕಲಾವಿದನೂ ಅಲ್ಲ, ಕಲಾ ರಸಿಕನೂ ಅಲ್ಲ. ಅದರ ಬಗ್ಗೆ ಯಾರೂ ಚಕಾರ ಎತ್ತಲಿಲ್ಲ. 20 ವರ್ಷಗಳ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಆಹ್ವಾನಿಸಲಾದ ಅತಿಥಿಗಳಲ್ಲಿ  ಶೇ90% ರಷ್ಟು ಮಂದಿ ಎಡಪಂಥೀಯ ಸಾಹಿತಿಗಳು, ಚಿಂತಕರು, ರಾಜಕಾರಣಿಗಳು, ರಂಗಾಯಣದ ಹೆಬ್ಬಾಗಿಲಿನೊಳಗೆ ಬಲಪಂಥೀಯ ಚಿಂತಕ, ಸಾಹಿತಿಯೊಬ್ಬರನ್ನೂ ಬಿಟ್ಟುಕೊಟ್ಟಿಲ್ಲ . ಮೈಸೂರಿನಲ್ಲೇ ಇರುವ ಸಾಹಿತಿ ಎಸ್.ಎಲ್.ಭೈರಪ್ಪ ಅವರನ್ನು ಇದೇ ಕಾರಣಕ್ಕೆ ಕರೆದಿರಲಿಲ್ಲ ಎಂದು ತಿಳಿಸಿದ್ದಾರೆ.

‘ರಾಷ್ಟ್ರೀಯ ಸ್ವಯಂ ಸೇವಕ’ ಸಂಘದಿಂದ ಬಂದ ನಾನೆಂದೂ  ಎಡಪಂಥೀಯರನ್ನು ಅಗೌರವದಿಂದ ನೋಡಿಲ್ಲ. ಸಂಘ ಸಂಸ್ಕಾರ ಕಲಿಸಿದೆ. ರಂಗಭೂಮಿಗೆ ಎಲ್ಲರೂ ಬೇಕು ಎಂಬುದು ನನ್ನ ಆಶಯ , ಯಾರೂ ಏನೇ ತಿಪ್ಪರಲಾಗ ಹಾಕಿದರೂ , ಸುಳ್ಳು ಪ್ರಚಾರ ಮಾಡಿದರೂ , ಇಲ್ಲದ ಕ್ಯಾತೆ ತೆಗೆದರೂ ನನ್ನ ಸ್ಥೈರ್ಯ ಕುಗ್ಗುವುದಿಲ್ಲ , ನನ್ನ ಮನೆಯ ಹೆಸರೇ ‘ರಂಗಭೂಮಿ’ , ಸ್ವಚ್ಛ ಮನಸ್ಸಿನವರಿಗೆ ರಂಗಾಯಣದ ಬಾಗಿಲು ಸದಾ ತೆರೆದಿರುತ್ತದೆ ಎಂದಿದ್ದಾರೆ. (ಎಸ್.ಎಚ್, ಎಸ್.ಎಂ)

Leave a Reply

comments

Related Articles

error: