ಕರ್ನಾಟಕಪ್ರಮುಖ ಸುದ್ದಿ

ಪ್ರತಿಯೊಬ್ಬರೂ ಸವಿತಾ ಸಮಾಜಕ್ಕೆ ತಲೆಬಾಗಲೇಬೇಕು : ಕೆ.ಎಸ್. ಈಶ್ವರಪ್ಪ

ಪ್ರಮುಖ ಸುದ್ದಿ (ರಾಯಚೂರು) ಮೇ 6: ದೇಶದ ರಾಷ್ಟ್ರಪತಿಯಾಗಿರಲಿ ಪ್ರಧಾನಿಯಾಗಿರಲಿ ಸವಿತಾ ಸಮಾಜಕ್ಕೆ ತಲೆಬಾಗಲೇಬೇಕು. ಸವಿತಾ ಸಮಾಜದವರು ಇಲ್ಲದೇ ಇದ್ದರೆ, ಇಂದು ಯಾರೂ ನಾಗರೀಕರಾಗಿ ಕಾಣುತ್ತಿರಲಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.

ನಗರದ ಮಡ್ಡಿಪೇಟೆ ಬಡಾವಣೆಯಲ್ಲಿರುವ ಶಂಖಚಕ್ರಮ ಮಾರುತಿ ದೇವಸ್ಥಾನದಲ್ಲಿ ಇತ್ತೀಚೆಗೆ ಜಿಲ್ಲಾ ಸವಿತಾ ಸಮಾಜದ ವತಿಯಿಂದ ಆಯೋಜಿಸಿದ್ದ ಶ್ರೀಸವಿತಾ ಮಹರ್ಷಿಗಳ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸವಿತಾ ಸಮಾಜದವರು ಸ್ವಾಭಿಮಾನದ ಜೀವನ ಸಾಗಿಸುತ್ತಿದ್ದಾರೆ. ತಂದೆ ಮಾಡಿದ ಕುಲಕಸಬನ್ನೇ ಮುಂದುವರಿಸುವುದು ಬದಲಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಬೇಕು. ಸಮಾಜ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಅಭಿವೃದ್ಧಿ ಕಾಣಬಹುದು ಎಂದರು.

ಸರ್ಕಾರ ಹಿಂದುಳಿದ ವರ್ಗದವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರ ಸದುಪಯೋಗ ಪಡೆದುಕೊಳ್ಳಬೇಕು. ಸವಿತಾ ಮಹರ್ಷಿಗಳು ಸಮಾಜದ ಆದರ್ಶ ವ್ಯಕ್ತಿಯಾಗಿದ್ದಾರೆ. ಅವರ ಆದರ್ಶವನ್ನು ಸಮಾಜದ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಮಾಜವು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಹಕಾರ ಸಂಘ ಸ್ಥಾಪನೆ ಮಾಡಬೇಕು. ಸಮಾಜದ ಪ್ರತಿಯೊಬ್ಬರೂ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಇದನ್ನು ಕಡ್ಡಾಯಗೊಳಿಸಬೇಕು. ಸವಿತಾ ಸಮಾಜದ ಸಹಕಾರ ಸಂಘ ಸ್ಥಾಪನೆ ಮಾಡಿದರೆ ತಾವು 2 ಲಕ್ಷ ರೂಪಾಯಿಗಳ ಠೇವಣಿ ಮಾಡುವುದಾಗಿ ಎಂದು ಭರವಸೆ ನೀಡಿದರು.

ಸವಿತಾ ಸಮಾಜದವರು ಯಾವುದೇ ಪಕ್ಷದಲ್ಲಿದ್ದರೂ ಚಿಂತೆ ಇಲ್ಲ. ಆದರೆ, ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ನಗರದ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಸಮಾಜದ ಒಗ್ಗಟ್ಟಿನಿಂದ ಇದ್ದರೆ ಮಾತ್ರ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಈ ಸಮಾಜದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತೇವೆ. ಈ ಸಮಾಜದ ಕಲ್ಯಾಣ ಮಂಟಪದ ಮೇಲ್‍ಮಹಡಿ ಕಟಡ ನಿರ್ಮಾಣಕ್ಕಾಗಿ ಅಭಿವೃದ್ಧಿಗಾಗಿ 2.50 ಲಕ್ಷ ಅನುದಾನವನ್ನು ಕಲ್ಪಿಸಲಾಗುವುದು ಎಂದು ಹೇಳಿದರು. ಸವಿತಾ ಸಮಾಜದ ಅಭಿವೃದ್ಧಿಗೆ ಸದಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಸವಿತಾ ಸಮಾಜದ ಮುಖಂಡ ಅಶೋಕ ಗಸ್ತಿ ಮಾತನಾಡಿ, ಸವಿತಾ ಸಮಾಜದ ಹಿಂದುಳಿದ ಸಮಾಜವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಬಡವರಿದ್ದಾರೆ. ಸವಿತಾ ಸಮಾಜದವರ ಕುಲಕಸುಬಿಗೆ ಪೂರಕವಾಗಿ ಸಹಕಾರ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುಬೇಕು ಎಂದು ಹೇಳಿದರು.

ಶ್ರಮಿಕರ ಸಮಾಜವಾಗಿ ಅಸಂಘಟಿತ ಸೇವೆ ಸಲ್ಲಿಸುತ್ತಿರುವ ಸಮಾಜದವರು ಅಪಮಾನಗಳಿಗೆ ಈಡು ಮಾಡುವ ಸಂದರ್ಭಗಳನ್ನು ತಡೆಯಬೇಕು. ಇದಕ್ಕಾಗಿ ಸೂಕ್ತ ಕಾನೂನು ತಿದ್ದುಪಡಿ ತಂದು ಪಿಂಚಣಿ ಕಲ್ಪಿಸುವ ನಿಟ್ಟಿನಲ್ಲಿ ಹಿಂದುಳಿದ ಸಮಾಜದ ಅಭಿವೃದ್ಧಿಯ ಪರವಾಗಿ ಧ್ವನಿಯೆತ್ತಬೇಕು ಎಂದು ಈಶ್ವರಪ್ಪ ಅವರಿಗೆ ಮನವಿ ಮಾಡಿದರು.

ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ನಗರಸಭೆ ಸದಸ್ಯ ದೊಡ್ಡ ಮಲ್ಲೇಶ, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಜಯಭಾಸ್ಕರ ಇಟಗಿ, ಸವಿತಾ ಸಮಾಜದ ಪದಾಧಿಕಾರಿಗಳಾದ ರಾಘವೇಂದ್ರ ಇಟಗಿ, ಜಿ.ಭೀಮೇಶ, ಇರ್ಚೆಡ್ ಗೋವಿಂದ, ಎಂ.ಬಸವರಾಜ, ಶ್ರೀನಿವಾಸ, ಆನಂದ ಎನ್.ರಾಘವೇಂದ್ರ ಹಾಗೂ ಮತ್ತಿತರರಿದ್ದರು.

(ಎನ್.ಬಿ.ಎನ್)

Leave a Reply

comments

Related Articles

error: