ಮೈಸೂರು

ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸಿದ್ದರಿಂದ ಜೆಡಿಎಸ್ ನಾಶವಾಗುತ್ತಿದೆ : ಎಂ.ಲಕ್ಷ್ಮಣ

ವಿಧಾನ ಪರಿಷತ್ ನೂತನ ಸದಸ್ಯ ಡಾ.ತಿಮ್ಮಯ್ಯಗೆ ಅಭಿನಂದನೆ : ಧನ್ಯವಾದ ಸಲ್ಲಿಸಿದ ತಿಮ್ಮಯ್ಯ

ಮೈಸೂರು,ಡಿ.15:- ಮೊದಲ ಪ್ರಾಶಸ್ತ್ಯದ ಮತ ನೀಡಿದ ಎಲ್ಲರಿಗೂ, ಪಕ್ಷದ ಎಲ್ಲಾ ನಾಯಕರಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ವಿಧಾನ ಪರಿಷತ್ ಗೆ ನೂತನವಾಗಿ ಆಯ್ಕೆಯಾದ ಸದಸ್ಯ ಡಾ.ತಿಮ್ಮಯ್ಯ ಧನ್ಯವಾದವನ್ನು ಸಲ್ಲಿಸಿದರು.

ಇಂದು ಕಾಂಗ್ರೆಸ್ ಭವನದಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಜಯಗಳಿಸಲು ಶ್ರಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹಾಗೂ ಕಾಂಗ್ರೆಸ್ ನ ಹಾಲಿ ಹಾಗೂ ಮಾಜಿ ಶಾಸಕರುಗಳಿಗೆ ಧನ್ಯವಾದ ಸಮರ್ಪಿಸಿದರು.
ಧ್ರುವನಾರಾಯಣ್ ಹಾಗೂ ಹೆಚ್ ಸಿ ಮಹಾದೇವಪ್ಪ ಚುನಾವಣೆ ಕಾರ್ಯತಂತ್ರ ರೂಪಿಸಿದರು ಎಂದ ಅವರು  ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಎರಡೂ ಜಿಲ್ಲೆಗಳ ಚುನಾಯಿತ ಜನಪ್ರತಿನಿಧಿಗಳು, ಕಾರ್ಯಕರ್ತರಿಗೆ ಸಲ್ಲಬೇಕು ಎಂದು ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಹೆಸರು ಪ್ರಸ್ತಾಪಿಸದ ಡಾ ಡಿ ತಿಮ್ಮಯ್ಯ ಅವರಲ್ಲಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸುತ್ತಿದ್ದಂತೆ ಜಿ ಟಿ ದೇವೆಗೌಡರಿಗೂ ಕೃತಜ್ಞತೆ ಸಲ್ಲಿಸಿದರು. ತನ್ನ ಪರವಾಗಿ ಜಿ ಟಿ ದೇವೇಗೌಡರ ಬೆಂಬಲ ಕೇಳಿದ್ದೆವು.
ಜಿ ಟಿ ದೇವೇಗೌಡರು ಸಹಕರಿಸಿದ್ದಾರೆಂದು ಹೇಳಿದರು.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ರಾಜ್ಯದ 25 ಕ್ಷೇತ್ರಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಮತ ಪಡೆದಿದೆ. ಆಡಳಿತಾರೂಢ ಬಿಜೆಪಿ ಗಿಂತ ಕಾಂಗ್ರೆಸ್ ಪಕ್ಷ ಹೆಚ್ಚಿನ ಮತ ಪಡೆದಿದೆ. ಬಿಜೆಪಿ ಯವರು ನಾವು ಜಾತ್ಯಾತೀತ ಅಲ್ಲ, ಕೋಮುವಾದಿಗಳು ಎಂದು ಬಿಂಬಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಜೆಡಿಎಸ್ ನ ನಿಲುವು ಏನು  ಎಂಬುದನ್ನು ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸಿದ್ದರಿಂದ ಜೆಡಿಎಸ್ ನಾಶವಾಗುತ್ತಿದೆ ಎಂದರು.
ಹಳೆ ಮೈಸೂರು ಭಾಗದಲ್ಲಿ ಜೆಡಿಸ್ ಗೆ ಹಿನ್ನಡೆ ಆಗಿದೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ನೋವುಂಟು ಮಾಡಿದೆ.
ಬಿಜೆಪಿ ಯವರು ನಮ್ಮ ಅಭ್ಯರ್ಥಿ ವಿರುದ್ಧದ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ತಕರಾರು ತೆಗೆದರು. ಬಿಜೆಪಿ ಅಭ್ಯರ್ಥಿ   ಮೂಲಕ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ದೂರು ನೀಡಿದರು.
ಇದರಿಂದ ದಲಿತ ಸಮುದಾಯದ ಮತದಾರರು ಬಿಜೆಪಿಗೆ ವಿರುದ್ದವಾದರು. ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ವಿರುದ್ದವೂ ಸಚಿವ ಸೋಮಶೇಖರ್ ಸೇರಿದಂತೆ ಬಿಜೆಪಿ ನಾಯಕರು ಅಪಪ್ರಚಾರ ಮಾಡಿದರು. ಪರಿಣಾಮ ಒಕ್ಕಲಿಗ ಸಮುದಾಯದ ಮತದಾರರು ಕುಪಿತಗೊಂಡರು‌. ಈ ಎಲ್ಲಾ ಕಾರಣಗಳಿಂದ ಬಿಜೆಪಿ ಅಭ್ಯರ್ಥಿ  ಸೋಲನುಭವಿಸಿದ್ದಾರೆ. ಈ ಬಗ್ಗೆ ನಾಯಕರ ಜೊತೆ ಅಭ್ಯರ್ಥಿ ಆತ್ಮಾವಲೋಕನ ಮಾಡಿಕೊಳ್ಳಲಿ. ಸೋಲಿಗೆ ಕಾರಣ ಹುಡುಕಲಿ ಎಂದು ಸಲಹೆ ನೀಡಿದರು.

ಬಸವರಾಜ ಬೊಮ್ಮಾಯಿ ಅಧಿಕಾರದ  ಆಯಸ್ಸು ಫೆಬ್ರವರಿ 14 ರವರೆಗೆ ಮಾತ್ರ. ಆ ಬಳಿಕ ರಾಜ್ಯಕ್ಕೆ ಬೇರೊಬ್ಬ ಮುಖ್ಯಮಂತ್ರಿ ಬರಲಿದ್ದಾರೆ. ಫೆಬ್ರವರಿ 14 ಡೆಡ್ ಲೈನ್.
ಬಿಜೆಪಿಯವರಿಂದಲೇ ಸಿಕ್ಕ ಮಾಹಿತಿ ಎಂದು ಹೊಸ ಬಾಂಬ್ ಸಿಡಿಸಿದರು.
ಕುಮಾರಸ್ವಾಮಿ ಪಕ್ಷ ನಿರ್ನಾಮವಾದರೆ ಅದಕ್ಕೆ ಕಾರಣ ಹೆಚ್ ಡಿ ಕುಮಾರಸ್ವಾಮಿ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರಶ್ನೆ ಬಿಜೆಪಿ ಹಾಗೂ ಕಾಂಗ್ರೆಸ್‌ ಗೆ ಒಂದು ತತ್ವ ಸಿದ್ದಾಂತ ಇದೆ. ನಮ್ಮದು ಜಾತ್ಯಾತೀತ ಪಕ್ಷ. ಬಿಜೆಪಿ ಕಮ್ಯುನಲ್ ಪಕ್ಷ. ಜೆಡಿಎಸ್ ತತ್ವ ಸಿದ್ದಾಂತ ಏನು  ಅದನ್ನು ಸ್ಪಷ್ಟಪಡಿಸಿ. ನಿಮ್ಮ ನಿಲುವು ಏನು ? ಜೆಡಿಎಸ್ ಬಿಜೆಪಿಯ ಬಿ ಟೀಂ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಬಿಜೆಪಿ ಜೊತೆ ಕೈ ಜೋಡಿಸಿ ನೀವು ನಿರ್ನಾಮ ಆಗುತ್ತೀರಿ,ಒಕ್ಕಲಿಗ ಸಮುದಾಯದವರು ನಿಮ್ಮ ಜೊತೆ ಇಲ್ಲ. ಇದು ಈ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಎಚ್ಚರಿಸಿದರು.

ಒಬ್ಬ ಡಮ್ಮಿ ವ್ಯಕ್ತಿಯನ್ನು  ಸಿಎಂ ಮಾಡಲಿದ್ದಾರೆ. ರಾಜ್ಯದಲ್ಲಿ ಮೂರು ವ್ಯಕ್ತಿಯನ್ನು ಸಿಎಂ ಮಾಡುವ ಗುರಿಯನ್ನು  ಬಿಜೆಪಿ ಹೊಂದಿದೆ. ನಮಗೆ ದೆಹಲಿಯಿಂದಲೇ  ಮಾಹಿತಿಗಳು ದೊರೆಯುತ್ತಿವೆ. ನಮಗೆ ಬಿಜೆಪಿಯವರ ಮಾಹಿತಿಯನ್ನು  ಅದೇ ಪಕ್ಷದವರು ಬೇಡ ಅಂದರೂ  ಕೊಡುತ್ತಿದ್ದಾರೆ. ಬಿಜೆಪಿಯ ಮೂಲಗಳ ಪ್ರಕಾರ ಫೆ.14ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರ ಹೋಗೋದು ಪಕ್ಕಾ  ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ಚಂದ್ರಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: